ಹಳೇಕೋಟೆ ಹನುಮಂತ ದೇವಸ್ಥಾನಕ್ಕೆ ಕೇಂದ್ರ ಸಚಿವ ಶ್ರೀಪಾದ ನಾಯ್ಕ ಭೇಟಿ

| Published : Jan 01 2024, 01:15 AM IST

ಹಳೇಕೋಟೆ ಹನುಮಂತ ದೇವಸ್ಥಾನಕ್ಕೆ ಕೇಂದ್ರ ಸಚಿವ ಶ್ರೀಪಾದ ನಾಯ್ಕ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಭಟ್ಕಳ ತಾಲೂಕಿನ ಶಿರಾಲಿ ಸಾರದಹೊಳೆಯ ಹಳೇಕೋಟೆ ಹನುಮಂತ ದೇವಸ್ಥಾನಕ್ಕೆ ಕೇಂದ್ರ ಸಚಿವ ಶ್ರೀಪಾದ ನಾಯ್ಕ ಭೇಟಿ ನೀಡಿದರು. ದೇವಸ್ಥಾನದ ವತಿಯಿಂದ ಸಚಿವರನ್ನು ಸನ್ಮಾನಿಸಲಾಯಿತು.

ಭಟ್ಕಳ: ಕೇಂದ್ರದ ಬಂದರು, ಹಡಗು, ಜಲಸಾರಿಗೆ ಮತ್ತು ಪ್ರವಾಸೋದ್ಯಮ ಸಚಿವ ಶ್ರೀಪಾದ ನಾಯ್ಕ ಅವರು ಭಾನುವಾರ ಬೆಳಗ್ಗೆ ಶಿರಾಲಿಯ ಸಾರದಹೊಳೆಯ ಹಳೇಕೋಟೆ ಹನುಮಂತ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ದೇವಸ್ಥಾನದ ವತಿಯಿಂದ ಸಚಿವರನ್ನು ಗೌರವಿಸಲಾಯಿತು. ಸಚಿವರು ಹಳೇಕೋಟೆ ಹನುಮಂತ ದೇವಸ್ಥಾನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಹಳೇಕೋಟೆ ಹನುಮಂತ ದೇವಸ್ಥಾನದ ಮೊಕ್ತೇಸರ ಸುಬ್ರಾಯ ನಾಯ್ಕ, ಆಡಳಿತ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಬಿಜೆಪಿ ಪ್ರಮುಖರಾದ ಗೋವಿಂದ ನಾಯ್ಕ, ಈಶ್ವರ ನಾಯ್ಕ, ಸುಬ್ರಾಯ ದೇವಡಿಗ, ಭಾಸ್ಕರ ದೈಮನೆ, ಮುಕುಂದ ನಾಯ್ಕ, ಶ್ರೀನಿವಾಸ ನಾಯ್ಕ, ರಾಮಚಂದ್ರ ನಾಯ್ಕ, ದತ್ತಾತ್ರೇಯ ನಾಯ್ಕ ಮುಂತಾದವರಿದ್ದರು.

ವಿರೋಧ ಪಕ್ಷದವರು ವೋಟ್ ಬ್ಯಾಂಕ್ ಹಿಂದೆ ಬಿದ್ದಿದ್ದಾರೆ: ವಿರೋಧ ಪಕ್ಷದವರು ರಾಜನೀತಿಯನ್ನು ಅನುಸರಿಸದೇ ಕೇವಲ ವೋಟ್ ಬ್ಯಾಂಕ್ ಹಿಂದೆ ಬಿದ್ದಿದ್ದಾರೆ ಎಂದು ಕೇಂದ್ರದ ಬಂದರು ಮತ್ತು ಪ್ರವಾಸೋದ್ಯಮ ಸಚಿವ ಶ್ರೀಪಾದ ನಾಯ್ಕ ಹೇಳಿದರು.ಅವರು ಶಿರಾಲಿ ಸಾರದಹೊಳೆಯ ಹಳೇಕೋಟೆ ದೇವಸ್ಥಾನಕ್ಕೆ ಭೇಟಿ ನೀಡಿದ ಆನಂತರ ಪತ್ರಕರ್ತರ ಜತೆಗೆ ಮಾತನಾಡಿ, ವಿರೋಧ ಪಕ್ಷದವರು ವೋಟ್ ಬ್ಯಾಂಕಿಗೋಸ್ಕರ ಹಿಂದುಸ್ತಾನದ ಸಂಸ್ಕೃತಿ, ಹಿಂದುಸ್ತಾನದಲ್ಲಿ ಇರುವ ಉತ್ತಮವಾದ ಪದ್ಧತಿಗಳನ್ನೆಲ್ಲ ಹಿಂದೆ ಇಟ್ಟು ರಾಜಕೀಯ ಮಾಡಿದ್ದಾರೆ. ಅವರ ವೋಟ್ ಬ್ಯಾಂಕ್ ನೀತಿಯಿಂದಾಗಿ ಇಂದು ಇಂತಹ ಪರಿಸ್ಥಿತಿ ಬಂದೊದಗಿದೆ ಎಂದರು.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಪ್ರಧಾನಮಂತ್ರಿ ಮೋದೀಜಿ ಅವರು ದೇಶದ ಜನತೆಗೆ ಗ್ಯಾರಂಟಿ ನೀಡಿದ್ದಾರೆ. ಮೋದೀಜಿ ಅವರು ಎಂದೂ ಗ್ಯಾರಂಟಿಯನ್ನು ಕೇವಲ ಹೇಳುವುದಿಲ್ಲ, ಅದನ್ನು ಜನತೆಗೆ ತಲುಪಿಸುತ್ತಾರೆ. ಮೋದೀಜಿ ಅವರು ಏನು ಬಾಕಿ ಉಳಿದಿದೆಯೋ ಅವುಗಳನ್ನು ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.

ಭಾರತದ ಪ್ರತಿ ಪ್ರಜೆಯೂ ದೇಶದಲ್ಲಿ ರಾಮ ಮಂದಿರವಾಗಬೇಕು ಎಂದು ಬಯಸಿದ್ದಾರೆ. ನಮ್ಮ ಸಂಸ್ಕೃತಿ ಮತ್ತೊಮ್ಮೆ ನಮ್ಮೆದುರು ಬಂದಿದೆ. ಈ ಹಿಂದೆ ಆಕ್ರಮಣಕಾರರಿಂದ ಅನೇಕ ಮಠ-ಮಂದಿರಗಳು ನಾಶವಾಗಿದ್ದವು. ಅವುಗಳನ್ನು ಪುನಃ ಸ್ಥಾಪಿಸುವ ಕಾರ್ಯ ಮಾಡಲಾಗುತ್ತಿದೆ. ಮಥುರಾ, ಗಯಾ, ಅಯೋಧ್ಯಾ ಇವುಗಳೆಲ್ಲವನ್ನು ನಾಶ ಮಾಡಲಾಗಿತ್ತು. ಅವುಗಳನ್ನು ಪುನರ್ ಸ್ಥಾಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದ ಅವರು, ನಾನು ಖಾಸಗಿ ಕಾರ್ಯಕ್ರಮದ ನಿಮಿತ್ತ ಆಗಮಿಸಿದ್ದು, ಹಳೇಕೋಟೆ ಹನುಮಂತ ದೇವರ ದರ್ಶನ ಪಡೆದಿದ್ದೇನೆ ಎಂದರು.