ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಅವೈಜ್ಞಾನಿಕ ಆನ್ ಲೈನ್ ವ್ಯವಸ್ಥೆಯಡಿ ಹಾಲು ಖರೀದಿಗೆ ಮುಂದಾಗಿರುವ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಕ್ರಮಕ್ಕೆ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು ಮತ್ತು ಸಿಬ್ಬಂದಿ ಒಕ್ಕೂಟದ ಜನಪ್ರತಿನಿಧಿಗಳು ಹಾಗೂ ರೈತ ಸಂಘದ ಮುಖಂಡರ ಸಮ್ಮುಖದಲ್ಲಿ ಸೋಮವಾರ ನಡೆಸಿದ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದ ಎಸ್.ಪಿ.ಸ್ವಾಮಿ, ಕದಲೂರು ರಾಮಕೃಷ್ಣರ ಅಧ್ಯಕ್ಷತೆಯಲ್ಲಿ ರೈತ ಸಂಘದ ಮುಖಂಡರು, ಹಾಲು ಉತ್ಪಾದಕರ ವೇದಿಕೆ, ಸಂಘಟನೆ ಬೆಂಬಲದೊಂದಿಗೆ ನಡೆದ ಸಭೆಯಲ್ಲಿ ತಾಲೂಕಿನ ಸುಮಾರು 250 ಹಾಲು ಉತ್ಪಾದಕರ ಸಂಘಗಳ ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಜಿಲ್ಲಾ ಹಾಲು ಒಕ್ಕೂಟ ಹಾಲು ಖರೀದಿ ಮತ್ತು ಲೆಕ್ಕಪತ್ರ ನಿರ್ವಹಣೆ ಉದ್ದೇಶದಿಂದ ರಾಜ್ಯದ ಇತರ ಒಕ್ಕೂಟಗಳ ಮಾದರಿಯಲ್ಲಿ ಏಕರೂಪದ ಸಾಫ್ಟ್ ವೇರ್ ಅಳವಡಿಸಲು ಮುಂದಾಗಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಇದರಿಂದ ಹಾಲಿನ ಪರಿಮಾಣ, ಗುಣಮಟ್ಟ ದೊಂದಿಗೆ ಹಾಲು ಉತ್ಪಾದಕರ ಸಂಘಗಳು ಪಾರದರ್ಶಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಕಾರ್ಯದರ್ಶಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.ಆದರೆ, ಹಾಲು ಉತ್ಪಾದಕರ ಸಂಘಗಳಲ್ಲಿ ಹಲವು ವರ್ಷಗಳಿಂದ ಕಾರ್ಯದರ್ಶಿಗಳಾಗಿ ಕೆಲಸ ಮಾಡುತ್ತಿರುವ ಹಿರಿಯ ವ್ಯಕ್ತಿಗಳಿಗೆ ಕಂಪ್ಯೂಟರ್ ಜ್ಞಾನ ಹಾಗೂ ಆನ್ ಲೈನ್ ವ್ಯವಸ್ಥೆ ಬಗ್ಗೆ ಸಾಕಷ್ಟು ಅರಿವು ಇಲ್ಲ. ಹೀಗಾಗಿ ಆನ್ ಲೈನ್ ತಂತ್ರಾಂಶದಲ್ಲಿ ಹಾಲು ಖರೀದಿ ಮತ್ತು ಲೆಕ್ಕಪತ್ರ ನಿರ್ವಹಣೆ ಕಷ್ಟವಾಗುತ್ತದೆ ಎಂದರು.
ಹಾಲು ಖರೀದಿ ವಿಚಾರದಲ್ಲಿ ಏಕರೂಪ ಸಾಫ್ಟವೇರ್ ಅಳವಡಿಕೆ ಮುನ್ನ ಜಿಲ್ಲಾ ಹಾಲು ಒಕ್ಕೂಟ ಪ್ರಥಮವಾಗಿ ಒಕ್ಕೂಟದ ಕಾರ್ಯ ನಿರ್ವಾಹಕರಿಗೆ ಮೊದಲು ತರಬೇತಿ ನೀಡಬೇಕು. ಆನಂತರ ಸಂಘಗಳಲ್ಲಿ ಸಾಫ್ಟ್ ವೇರ್ ಅಳವಡಿಸಿ ಕಾರ್ಯದರ್ಶಿಗಳಿಗೆ ತರಬೇತಿ ನೀಡಬೇಕು ಎಂದು ಆಗ್ರಹಿಸಿದರು.ಏಕರೂಪದ ಸಾಫ್ಟ್ ವೇರ್ ನಲ್ಲಿ ಪದ್ಧತಿಯಲ್ಲಿ ಹಾಲಿ ಇರುವ ಆಂಗ್ಲ ಭಾಷಾ ತಂತ್ರಾಂಶವನ್ನು ತೆಗೆದು ಕನ್ನಡ ಭಾಷೆಯಲ್ಲಿ ಇರುವ ಸಾಫ್ಟವೇರ್ ಅನ್ನು ಅಳವಡಿಸಿ ಸಂಘಗಳ ಕಾರ್ಯದರ್ಶಿ ಮತ್ತು ಸಿಬ್ಬಂದಿಗಳಿಗೆ ತರಬೇತಿ ನೀಡಬೇಕು ಎಂದು ಸಭೆಯಲ್ಲಿ ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದರು.
ನಂತರ ಒಕ್ಕೂಟದ ನಿರ್ದೇಶಕ ಎಸ್.ಪಿ.ಸ್ವಾಮಿ ಮಾತನಾಡಿ, ಹಾಲು ಖರೀದಿ ವಿಚಾರದಲ್ಲಿ ಏಕರೂಪ ದ ಸಾಫ್ಟ್ ವೇರ್ ಅನ್ನುಮೊದಲು ಜಿಲ್ಲಾ ಹಾಲು ಒಕ್ಕೂಟದಲ್ಲಿ ಅಳವಡಿಸುವ ಬಗ್ಗೆ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಆನಂತರ ಒಕ್ಕೂಟ ವ್ಯಾಪ್ತಿಯ ಹಾಲು ಉತ್ಪಾದಕರ ಸಂಘಗಳಲ್ಲಿ ಏಕರೂಪದ ಸಾಫ್ಟ್ ವೇರ್ ಅಳವಡಿಸುವಂತೆ ಒತ್ತಾಯಿಸಲಾಗುವುದು ಎಂದರು.
ಹಾಲು ಉತ್ಪಾದಕರ ಸಂಘಗಳಿಗೆ ಸಾಫ್ಟ್ ವೇರ್ ಅಳವಡಿಕೆ ಮೂಲಕ ಹಾಲು ಖರೀದಿ ಪದ್ಧತಿಯನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಆಡಳಿತ ಮಂಡಳಿ ಸಭೆಯಲ್ಲಿ ಆಗ್ರಹಿಸುವುದಾಗಿ ಭರವಸೆ ನೀಡಿದರು.ಸಭೆಯಲ್ಲಿ ಜಿಲ್ಲಾ ಹಾಲು ಉತ್ಪಾದಕರ ವೇದಿಕೆ ಪದಾಧಿಕಾರಿ ಲಕ್ಷ್ಮಿ ಚನ್ನರಾಜು, ತಾಲೂಕು ಘಟಕದ ಅಧ್ಯಕ್ಷ ಸುಧಾಕರ್, ಕಾರ್ಯದರ್ಶಿ ದೇವರಾಜು, ಖಜಾಂಚಿ ರವಿ, ಪದಾಧಿಕಾರಿಗಳಾದ ಜವರೇಗೌಡ, ರಾಜಣ್ಣ, ರೈತ ಸಂಘದ ಮುಖಂಡರಾದ ಯರಗನಹಳ್ಳಿ ರಾಮಕೃಷ್ಣಯ್ಯ, ಅಣ್ಣೂರು ಮಹೇಂದ್ರ, ಕೀಳಘಟ್ಟ ಕುದರಗುಂಡಿ ನಾಗರಾಜು, ಜಗದೀಶ, ರಾಮೇಗೌಡ ಹಾಗೂ ಸಂಘಗಳ ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು.