ಮಂಗಳೂರು: 19ರಂದು ವಿಶಿಷ್ಟರಿಗಾಗಿ ವಿಶಿಷ್ಟ ಮೇಳ

| Published : Jan 14 2025, 01:01 AM IST

ಸಾರಾಂಶ

ಸೇವಾ ಭಾರತಿ ಅಂಗ ಸಂಸ್ಥೆಯಾದ ಆಶಾ ಜ್ಯೋತಿ ನೇತೃತ್ವದಲ್ಲಿ ಕೆನರಾ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ‘ವಿಶಿಷ್ಟರಿಗಾಗಿ ವಿಶಿಷ್ಟ ಮೇಳ’ ಜ.19ರಂದು ಬೆಳಗ್ಗೆ 8.30ರಿಂದ ಸಂಜೆ 4.15ರವರೆಗೆ ಡೊಂಗರಕೇರಿ ಕೆನರಾ ಹೈಸ್ಕೂಲ್‌ ಆವರಣದಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಸೇವಾ ಭಾರತಿ ಅಂಗ ಸಂಸ್ಥೆಯಾದ ಆಶಾ ಜ್ಯೋತಿ ನೇತೃತ್ವದಲ್ಲಿ ಕೆನರಾ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ‘ವಿಶಿಷ್ಟರಿಗಾಗಿ ವಿಶಿಷ್ಟ ಮೇಳ’ ಜ.19ರಂದು ಬೆಳಗ್ಗೆ 8.30ರಿಂದ ಸಂಜೆ 4.15ರವರೆಗೆ ಡೊಂಗರಕೇರಿ ಕೆನರಾ ಹೈಸ್ಕೂಲ್‌ ಆವರಣದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಶಾಜ್ಯೋತಿ ಸಂಸ್ಥೆಯ ಗೌರವಾಧ್ಯಕ್ಷ ಡಾ.ವಿ. ಮುರಳೀಧರ ನಾಯಕ್‌, ಜಿಲ್ಲೆಯ ವಿಶೇಷ ಚೇತನರನ್ನು ಒಟ್ಟುಗೂಡಿಸಿ ಅವರಿಗೆ ಮನರಂಜನೆ ಒದಗಿಸುವ ಜತೆಗೆ ಅವರಲ್ಲಿ ಚೈತನ್ಯ, ಆತ್ಮವಿಶ್ವಾಸ ತುಂಬುವುದು ಮೇಳದ ಉದ್ದೇಶ. ಕಳೆದ ವರ್ಷ 1200 ಮಂದಿ ವಿಶೇಷ ಚೇತನರು ಹಾಗೂ 1600 ಮಂದಿ ಹೆತ್ತವರು ಸೇರಿದಂತೆ 2800ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಈ ವರ್ಷವೂ ಅತ್ಯಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ, ಇದು ಸಂಪೂರ್ಣ ಉಚಿತವಾಗಿರುತ್ತದೆ ಎಂದು ತಿಳಿಸಿದರು.

ಮೇಯರ್‌ ಮನೋಜ್‌ ಕುಮಾರ್‌ ಕೋಡಿಕಲ್‌ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ರಾಮ ಕುಮಾರ್‌ ಬೇಕಲ್‌, ಲಂಚುಲಾಲ್‌ ಕೆ.ಎಸ್‌. ಭಾಗವಹಿಸಲಿದ್ದಾರೆ ಎಂದರು.

ದಿವ್ಯಾಂಗರಲ್ಲಿರುವ ಸುಪ್ತ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸುವುದು, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು, ಪೋಷಕರಲ್ಲಿ ಆತ್ಮ ವಿಶ್ವಾಸ ತುಂಬುವುದು, ಅಂಗವಿಕಲತೆಯ ಗುರುತು ಚೀಟಿಯನ್ನು ಪಡೆಯಲು ಸಹಕರಿಸುವುದು, ಅವರಿಗಾಗಿ ವೈದ್ಯಕೀಯ ತಪಾಸಣಾ ಶಿಬಿರ, ಆಪ್ತ ಸಲಹಾ ಶಿಬಿರಗಳನ್ನು ನಡೆಸುವುದು, ಸರ್ಕಾರಿ ಹಾಗೂ ಅರೆ ಸರ್ಕಾರಿ ಸಂಸ್ಥೆಗಳಿಂದ ದಿವ್ಯಾಂಗರಿಗೆ ಸಿಗುವ ಮಾಹಿತಿ ಒದಗಿಸುವುದು, ವಿಶೇಷ ಸಾಧನೆ ಮಾಡಿದ ದಿವ್ಯಾಂಗರನ್ನು ಸನ್ಮಾನಿಸುವುದು ಇತ್ಯಾದಿ ಕಾರ್ಯಕ್ರಮಗಳನ್ನು ಸೇವಾ ಭಾರತಿ ಸಂಸ್ಥೆ ಆಯೋಜಿಸುತ್ತಾ ಬಂದಿದೆ ಎಂದು ಮುರಳೀಧರ ನಾಯಕ್‌ ಹೇಳಿದರು.ಆಶಾಜ್ಯೋತಿ ಸಂಸ್ಥೆಯ ಅಧ್ಯಕ್ಷೆ ಗೀತಾ ಲಕ್ಷ್ಮೇಶ್‌, ಕಾರ್ಯದರ್ಶಿ ಎಸ್‌. ರವಿನಾಥ ಕುಡ್ವ, ಜತೆ ಕಾರ್ಯದರ್ಶಿ ಗಣರಾಜ ವೈ, ಕೋಶಾಧಿಕಾರಿ ಕೆ.ವಿಶ್ವನಾಥ ಪೈ, ಜತೆ ಕೋಶಾಧಿಕಾರಿ ಬಿ.ಅಶ್ವತ್ಥಾಮ ರಾವ್‌, ಸೇವಾ ಭಾರತಿಯ ಗೌರವಾ ಕಾರ್ಯದರ್ಶಿ ಎಚ್‌. ನಾಗರಾಜ ಭಟ್‌, ಕೋಶಾಧಿಕಾರಿ ಪಿ. ವಿನೋದ್‌ ಶೆಣೈ ಇದ್ದರು.