ಸಾರಾಂಶ
ಕಾರಟಗಿ: ಪ್ರಸ್ತುತ ದಿನಮಾನಗಳಲ್ಲಿ ಪ್ರತಿಯೊಬ್ಬರು ಸಮಾಜ, ಧರ್ಮ ವಿಚಾರವಾಗಿ ಒಂದಾಗಬೇಕು. ಇಲ್ಲದಿದ್ದರೆ ಮುಂದೊಂದು ದಿನ ಅಪಾಯದ ದಿನಗಳ ಎದುರಿಸಬೇಕಾಗುತ್ತದೆ ಎಂದು ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಎಚ್ಚರಿಸಿದ್ದಾರೆ.
ನಗರದ ವಿದ್ಯಾಭಾರತಿ ಕಾಲೇಜು ಆವರಣದಲ್ಲಿ ಬೇವಿನಾಳ, ಮೈಲಾಪುರ, ಲಿಂಗಸೂಗೂರು ಹಿರೇಮಠದ ಶ್ರೀಮತಿ ಪಾರ್ವತಮ್ಮ ಶ್ರೀ ಲಿಂ. ವೇ.ಮೂ. ಬಸವಣಯ್ಯಸ್ವಾಮಿಗಳು ವೇ.ಮೂ. ನಿಜಗುಣಯ್ಯಸ್ವಾಮಿ ಹಾಗೂ ವೇ.ಮೂ. ಶಿವಶರಣಯ್ಯಸ್ವಾಮಿ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಧರ್ಮಸಭೆಯ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಸಮಾಜ ಮತ್ತು ಧರ್ಮದ ವಿಷಯ ಬಂದಾಗ ಎಲ್ಲರೂ ಸಮಷ್ಟಿಪ್ರಜ್ಞೆ ಮೆರೆಯಬೇಕು. ಇಲ್ಲದಿದ್ದರೆ ಮುಂದೆ ದುರಂತದ ದಿನಗಳು ಬರಲಿವೆ. ಪ್ರಸ್ತುತ ವಾತಾವರಣದಲ್ಲಿ ಪ್ರತಿಯೊಬ್ಬರೂ ಸಮಾಜ, ಧರ್ಮ ವಿಚಾರವಾಗಿ ಒಂದಾಗಬೇಕು. ಇಲ್ಲದಿದ್ದರೆ ಅಪಾಯದ ದಿನಗಳ ಎದುರಿಸಬೇಕಾಗುತ್ತದೆ. ಗುರುವಿಗೆ ನೀಡುವ ಗೌರವವನ್ನು ಲಿಂಗ ಹಾಗೂ ಪ್ರತಿ ಜಂಗಮನಿಗೂ ನೀಡಬೇಕು. ಗುರು, ಲಿಂಗ, ಜಂಗಮರಲ್ಲಿ ಯಾವುದೇ ತಾರತಮ್ಯ ಇರಬಾರದು. ಧರ್ಮದ ಪರಿಪಾಲನೆಯಿಂದ ಮಾತ್ರ ನಾಡಿನಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ ಎಂದರು.ಈ ವೇಳೆ ಉಜ್ಜಯಿನಿ ಜಗದ್ಗುರುಗಳ ಸಾನ್ನಿಧ್ಯ ಹಾಗೂ ವಿವಿಧ ಮಠಾಧೀಶರ ನೇತೃತ್ವದಲ್ಲಿ ವೇ.ಮೂ. ನಿಜಗುಣಯ್ಯಸ್ವಾಮಿ ಅವರ ಪುತ್ರ ನಿರಂಜನ ಸ್ವಾಮಿ ಅವರ ಅಯ್ಯಾಚಾರ ಕಾರ್ಯಕ್ರಮದಲ್ಲಿ ೩೬ ಜಂಗಮವಟುಗಳಿಗೆ ಸಾಮೂಹಿಕ ಅಯ್ಯಾಚಾರ, ಇಷ್ಟಲಿಂಗ ಪೂಜೆ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದ ಆಯೋಜಕ ಬೇವಿನಾಳ, ಮೈಲಾಪುರ ಹಾಗೂ ಕಸಬಾ ಲಿಂಗಸೂಗೂರು ಹಿರೇಮಠದ ವೇ.ಮೂ. ನಿಜಗುಣಯ್ಯಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಆನಂತರ ಬಹಿರಂಗ ವೇದಿಕೆಯಲ್ಲಿ ಜಗದ್ಗುರುಗಳು ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿಸಿದರು. ಕೊನೆಯಲ್ಲಿ ಉಜ್ಜಯಿನಿ ಶ್ರೀಗಳು ಆಶೀರ್ವಚನ ನೀಡಿ, ವೀರಶೈವ ಲಿಂಗಾಯತ ಧರ್ಮದ ಬಗ್ಗೆ ಹಾಗೂ ಲಿಂಗಪೂಜೆಯ ಮಹತ್ವದ ಕುರಿತು ವಿವಿಧ ದೃಷ್ಟಾಂತಗಳ ಮೂಲಕ ಸಾದರಪಡಿಸಿದರು.ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ಹೆಬ್ಬಾಳ ಬೃಹನ್ಮಠ, ಸೋಮನಾಥ ಶಿವಾಚಾರ್ಯ ಸ್ವಾಮಿಗಳು, ಸಿಂಧನೂರು, ವರರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ರೌಡಕುಂದಾ, ರಾಜಗುರು ರಾಜೇಂದ್ರ ಒಡೆಯರ್, ಶಿವಾಚಾರ್ಯ ಸ್ವಾಮಿಗಳು ನಾವದಗಿ, ನೀಲಕಂಠಯ್ಯತಾತನವರು ಗುಡದೂರು, ಡಾ. ಸಿದ್ದರಾಮೇಶ್ವರ ಶರಣರು, ಬಂಗಾರಿಕ್ಯಾಂಪ್, ವೀರಭದ್ರ ತಲೇಖಾನ ಹಿರೇಮಠ ಕಾರಟಗಿ, ವೇ.ಮೂ. ಮರುಳಸಿದ್ದಯ್ಯಸ್ವಾಮಿಗಳು ಹಿರೇಮಠ ಕಾರಟಗಿ ಉಪಸ್ಥಿತರಿದ್ದರು.