ಶಿಕ್ಷಣವೆಂದರೆ ಕೇವಲ ಅಂಕ ಗಳಿಸಿ ಪದವಿ ಪಡೆಯುವುದು ಅಥವಾ ಉದ್ಯೋಗ ಪಡೆಯುವುದಕ್ಕೆ ಸೀಮಿತವಾಗಬಾರದು

ಹೊಸಪೇಟೆ: ಭಗತ್ ಸಿಂಗ್ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಕನಸು ಕಂಡಿದ್ದ ಶೋಷಣೆಮುಕ್ತ ಸಮಾಜವಾದಿ ಭಾರತ ನಿರ್ಮಾಣಕ್ಕಾಗಿ ವಿದ್ಯಾರ್ಥಿ​ ಯುವಜನತೆ ಒಗ್ಗೂಡಿ ಜನಾಂದೋಲನ ಕಟ್ಟಬೇಕು ಎಂದು ಎಐಡಿಎಸ್ಓ ಕೇಂದ್ರ ಸಮಿತಿ ಸದಸ್ಯ ಕಲ್ಯಾಣ್ ಕುಮಾರ್ ಹೇಳಿದರು.

ನಗರದ ಡಾನ್ ಬಾಸ್ಕೋ ಪ್ರೊಫೆಷನಲ್ ಅಕಾಡೆಮಿಯಲ್ಲಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್ಓ) ವಿಜಯನಗರ ಜಿಲ್ಲಾ ಕೌನ್ಸಿಲ್ ವತಿಯಿಂದ ಮಹಾತ್ಮ ಜ್ಯೋತಿಬಾ ಫುಲೆ ಅವರ 200ನೇ ಜನ್ಮವರ್ಷಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿದ್ಯಾರ್ಥಿ ಶಿಬಿರದಲ್ಲಿ ಮಾತನಾಡಿದರು.

ಶಿಕ್ಷಣವೆಂದರೆ ಕೇವಲ ಅಂಕ ಗಳಿಸಿ ಪದವಿ ಪಡೆಯುವುದು ಅಥವಾ ಉದ್ಯೋಗ ಪಡೆಯುವುದಕ್ಕೆ ಸೀಮಿತವಾಗಬಾರದು. ಉತ್ತಮ ಚಾರಿತ್ರ್ಯ, ಸಾಮಾಜಿಕ ಜವಾಬ್ದಾರಿ, ಸಮಾನತೆ, ಪ್ರಜಾಸತ್ತಾತ್ಮಕ ಮೌಲ್ಯ, ಧರ್ಮನಿರಪೇಕ್ಷತೆ, ಮಾನವೀಯತೆ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸುವುದೇ ಶಿಕ್ಷಣದ ಪ್ರಮುಖ ಉದ್ದೇಶವಾಗಬೇಕು ಎಂದು ಹೇಳಿದರು.

ಇಂದಿನ ಶಿಕ್ಷಣ ವ್ಯವಸ್ಥೆ ವ್ಯಾಪಾರೀಕರಣಗೊಂಡಿರುವ ಪರಿಣಾಮ ಬಡ ರೈತ​ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಪಡೆಯುವುದು ಕಷ್ಟವಾಗುತ್ತಿದೆ. ನೀಟ್‌, ಜೆಇಇ ಸೇರಿದಂತೆ ಪ್ರವೇಶ ಪರೀಕ್ಷೆಗಳಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರದ ಆರೋಪಗಳು ವಿದ್ಯಾರ್ಥಿಗಳಲ್ಲಿ ಒತ್ತಡ ಮತ್ತು ಹತಾಶೆಗೆ ಕಾರಣವಾಗುತ್ತಿವೆ ಎಂದು ಹೇಳಿದರು.

ಎಐಡಿಎಸ್ಓ ವಿಜಯನಗರ ಜಿಲ್ಲಾಧ್ಯಕ್ಷ ರವಿಕಿರಣ್ ಮಾತನಾಡಿ, ವಿದ್ಯಾರ್ಥಿ​ ಯುವಜನತೆ ಎದುರಿಸುತ್ತಿರುವ ಸಾಂಸ್ಕೃತಿಕ ಬಿಕ್ಕಟ್ಟು ಗಂಭೀರವಾಗಿದೆ. ಅತಿಯಾದ ಸಾಮಾಜಿಕ ಜಾಲತಾಣ ಬಳಕೆ, ಆನ್‌ಲೈನ್ ಗೇಮಿಂಗ್ ಸೇರಿದಂತೆ ವಿವಿಧ ವ್ಯಸನಗಳು ಯುವಜನರ ವೈಚಾರಿಕ ಮತ್ತು ಸೃಜನಶೀಲ ಬೆಳವಣಿಗೆಗೆ ಅಡ್ಡಿಯಾಗುತ್ತಿವೆ ಎಂದರು.

ದೇಶದ ಮಹಾನ್ ನಾಯಕ ಈಶ್ವರಚಂದ್ರ ವಿದ್ಯಾಸಾಗರ, ಮಹಾತ್ಮ ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ಆದರ್ಶ ಮೈಗೂಡಿಸಿಕೊಂಡು ಸಾರ್ವಜನಿಕ ಶಿಕ್ಷಣದ ರಕ್ಷಣೆಗಾಗಿ ವಿದ್ಯಾರ್ಥಿಗಳು ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ಹೇಳಿದರು.

ಎಐಡಿಎಸ್ಓ ವಿಜಯನಗರ ಜಿಲ್ಲಾ ಕಾರ್ಯದರ್ಶಿ ಯು. ಉಮಾದೇವಿ ಉಪಸ್ಥಿತರಿದ್ದರು.

ಶಿಬಿರದಲ್ಲಿ ಶಿಕ್ಷಣ, ವಿಜ್ಞಾನ, ಸಮಾಜ ಹಾಗೂ ಪ್ರಸ್ತುತ ವಿದ್ಯಮಾನಗಳ ಕುರಿತು ಸಂವಾದ, ವೈಜ್ಞಾನಿಕ ಮನೋಭಾವ ಮತ್ತು ವ್ಯಕ್ತಿತ್ವ ವಿಕಸನ ಕುರಿತ ಗೋಷ್ಠಿ, ಗುಂಪು ಚರ್ಚೆ, ಸಾಂಸ್ಕೃತಿಕ ಕಾರ್ಯಕ್ರಮ, ಸಿನಿಮಾ ಪ್ರದರ್ಶನ ಹಾಗೂ ಕ್ರೀಡಾ ಚಟುವಟಿಕೆಗಳು ನಡೆದವು

ಹೊಸಪೇಟೆ ಸೇರಿದಂತೆ ವಿಜಯನಗರ ಜಿಲ್ಲೆಯ ವಿವಿಧ ಭಾಗಗಳ ಪ್ರೌಢಶಾಲೆ, ಪಿಯು ಹಾಗೂ ಪದವಿ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು ಮತ್ತು ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು.