ನಾಡಿನ ಅಭಿವೃದ್ಧಿಯ ಪ್ರಶ್ನೆ ಬಂದಾಗ ಒಗ್ಗಟ್ಟಾಗಿ

| Published : Aug 16 2025, 12:01 AM IST

ಸಾರಾಂಶ

ರಾಜಕೀಯದಲ್ಲಿ ನಮ್ಮಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಇವೆ. ಆದರೆ ಅದರ ದುಷ್ಪರಿಣಾಮಗಳು ಅಭಿವೃದ್ಧಿ ಮೇಲೆ ಬೀಳಬಾರದು.

ಹಳಿಯಾಳ: ರಾಜಕೀಯದಲ್ಲಿ ನಮ್ಮಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಇವೆ. ಆದರೆ ಅದರ ದುಷ್ಪರಿಣಾಮಗಳು ಅಭಿವೃದ್ಧಿ ಮೇಲೆ ಬೀಳಬಾರದು. ರಾಷ್ಟ್ರದ ನಾಡಿನ ಅಭಿವೃದ್ಧಿಯ ಪ್ರಶ್ನೆ ಬಂದಾಗ ಎಲ್ಲರೂ ಪಕ್ಷಾತೀತವಾಗಿ ಬೆಂಬಲಿಸಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ಶುಕ್ರವಾರ ತಾಲೂಕಾಡಳಿತ ಸೌಧದ ಆವರಣದಲ್ಲಿ ನಡೆದ 79ನೇ ಸ್ವಾತಂತ್ರ್ಯೋತ್ಸವ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.

ಅಸಂಖ್ಯಾತ ದೇಶಭಕ್ತರ ಹೋರಾಟ, ತ್ಯಾಗ, ಪರಿಶ್ರಮದ ಫಲವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಇಂದು ನಮ್ಮ ಕೈಯಲ್ಲಿರುವ ಸ್ವಾತಂತ್ರ್ಯದ ಜ್ಯೋತಿಯನ್ನು ನಮ್ಮ ಮುಂದಿನ ತಲೆಮಾರಿಗೆ ತಲುಪಿಸುವ ಅತ್ಯಂತ ದೊಡ್ಡ ಜವಾಬ್ದಾರಿಯು ನಮ್ಮೆಲ್ಲರ ಮೇಲಿದೆ ಎಂದರು.

ದೇಶದ ಅಭಿವೃದ್ಧಿಗೆ ಕಂಟಕವಾಗಿರುವ ಬಡತನ, ನಿರಕ್ಷರತೆ ಮತ್ತು ನಿರುದ್ಯೋಗ, ಬೆಲೆಯೆರಿಕೆ ಸಮಸ್ಯೆಗಳ ನಿವಾರಣೆಗೆ ಪಕ್ಷಾತೀತವಾಗಿ ಹೋರಾಟ ಮಾಡುವ ಅವಶ್ಯಕತೆಯಿದೆ ಎಂದರು. ದೇಶದಲ್ಲಿ ಹೆಚ್ಚುತ್ತಿರುವ ದ್ವೇಷ, ಮತ್ಸರ, ಮತೀಯ ಧಾರ್ಮಿಕ ಕಲಹಗಳು ಇವುಗಳ ಕೊನೆಯಾಗಬೇಕಾಗಿದೆ ಎಂದರು.

ಸಕಾರಾತ್ಮಕ ವಿಚಾರಗಳಿಗೆ ನನ್ನ ಬೆಂಬಲ:

ನಿಮ್ಮೆಲ್ಲರ ಆಶೀರ್ವಾದದ ಬಲದಿಂದ ನಿಮ್ಮ ಸೇವೆ ಮಾಡುವ ಅವಕಾಶ ನನಗೆ ಲಭಿಸಿದೆ, ಯಾವತ್ತೂ ಒಳ್ಳೆಯ ಕಾರ್ಯಗಳಿಗೆ ನನ್ನ ಬೆಂಬಲವಿದೆ. ನನ್ನ ಬಳಿ ಇಲ್ಲ, ನಾನು ಮಾಡಲ್ಲ ಎಂಬ ನಕಾರಾತ್ಮಕ ವಿಚಾರಧಾರೆಗಳಿಗೆ ನಾನು ಅವಕಾಶ ನೀಡುವುದಿಲ್ಲ. ಹಳಿಯಾಳ ಪಟ್ಟಣವನ್ನು ಪ್ರವೇಶಿಸುವ ಮಾರ್ಗದುದ್ದಕ್ಕೂ ಅಲಂಕಾರಿಕ ವಿದ್ಯುತ್ ದೀಪಗಳ ಕಂಬಗಳನ್ನು ಅಳವಡಿಸುವ ಪಟ್ಟಣವನ್ನು ನವೀಕರಿಸುವ ಕಾಮಗಾರಿಗೆ ಮಂಜೂರಾತಿ ದೊರೆತಿದ್ದು, ಅತೀ ಶೀಘ್ರದಲ್ಲಿಯೇ ಈ ಕಾಮಗಾರಿ ಆರಂಭವಾಗಲಿದೆ ಎಂದರು.

ಧ್ವಜಾರೋಹಣ ನೆರವೆರಿಸಿ ಮಾತನಾಡಿದ ತಹಸೀಲ್ದಾರ ಪ್ರವೀಣ ಹುಚ್ಚಣ್ಣನವರ, ದೇಶದ ಭವಿಷ್ಯದ ಪ್ರಜೆಯಾಗುವ ಯುವಶಕ್ತಿ ದುಶ್ಚಟಗಳಿಂದ ಮುಕ್ತವಾಗಬೇಕು. ಇದರಿಂದ ಆರೋಗ್ಯಯುತ ಹಾಗೂ ಸದೃಡವಾದ ದೇಶದ ನಿರ್ಮಾಣ ಸಾಧ್ಯ. ನಮ್ಮ ಯುವಶಕ್ತಿಗೆ ಹಾಗೂ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟ ತಿಳುವಳಿಕೆ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯೋತ್ಸವ ನಿಮಿತ್ತ ಶಾಲಾ ಕಾಲೇಜು ಮಕ್ಕಳಿಗಾಗಿ ಆಯೋಜಿಸಿದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಾಗೂ ಮಾಜಿ ಯೋಧ ಸುರೇಶ ಶಿವಣ್ಣನವರ ಅವರನ್ನು ಸನ್ಮಾನಿಸಲಾಯಿತು.

ತಾಪಂ ಇಒ ವಿಲಾಸರಾಜ್, ಬಿಇಒ ಪ್ರಮೋದ ಮಹಾಲೆ, ಸಿಪಿಐ ಜೈಪಾಲ ಪಾಟೀಲ, ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ, ಸಹಾಯಕ ಕೃಷಿ ನಿರ್ದೇಶಕ ಪಿ.ಐ. ಮಾನೆ, ವಿಪ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ, ಪುರಸಭಾ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ, ಮಾಜಿ ಅಧ್ಯಕ್ಷ ಅಜರ ಬಸರಿಕಟ್ಟಿ, ಉಪಾಧ್ಯಕ್ಷೆ ಸುವರ್ಣ ಮಾದರ, ಸದಸ್ಯರಾದ ಫಯಾಜ್ ಶೇಖ್, ಸಂತೋಷ ಘಟಕಾಂಬ್ಳೆ, ರಾಜೇಶ್ವರಿ ಹಿರೇಮಠ, ಕಾಂಗ್ರೆಸ್ ಮುಖಂಡ ಅಲಿಂ ಬಸರಿಕಟ್ಟಿ, ಸತ್ಯಜಿತ ಗಿರಿ, ಉಮೇಶ ಬೊಳಶೆಟ್ಟಿ, ಕಮಲ ಸಿಕ್ವೇರಾ ಇದ್ದರು.

ಸಂಭ್ರಮಾಚರಣೆ:

ತಾಲೂಕಿನೆಲ್ಲೆಡೆ ಸ್ವಾತಂತ್ರ್ಯೋತ್ಸವದ ನಿಮಿತ್ತ ವಿವಿಧ ಸ್ಫರ್ಧೆಗಳು, ಸಾಂಸ್ಕೃತಿಕ ಸಮಾರಂಭಗಳು ನಡೆದವು.