ಸಾರಾಂಶ
ಕನ್ನಡ ನಾಡು -ನುಡಿಗೆ ಎಲ್ಲ ವಿದ್ಯಾರ್ಥಿಗಳು ಸೇವೆ ಸಲ್ಲಿಸುವಂತೆ ಮತ್ತು ಉತ್ತಮ ಭವಿಷ್ಯವನ್ನು ಶಾಲೆಯ ಪಾಠ ಪ್ರವಚನಗಳೊಂದಿಗೆ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರಲ್ಲದೆ, ಕಲಿಯುವುದಕ್ಕೆ ಕೋಟಿ ಭಾಷೆಗಳಿದ್ದರೂ, ಮಾತನಾಡುವ ಭಾಷೆ ಕನ್ನಡವಾಗಿರಿಸಿಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಹೊಳಲು ಗ್ರಾಮದ ಶ್ರೀವೆಂಕಟೇಶ್ವರ ವಿದ್ಯಾನಿಕೇತನ ಶಾಲೆಯಲ್ಲಿ ೬೯ನೇ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.ಮಾಂಡವ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಕೆ.ಚಂದ್ರಶೇಖರ್ ಕಾರ್ಯಕ್ರಮ ಉದ್ಘಾಟಿಸಿ ಮಾತನ ಆಡಿ, ಕನ್ನಡ, ಕರ್ನಾಟಕ ಮತ್ತು ಕನ್ನಡ ಸಾಹಿತ್ಯದಲ್ಲಿ ವಿವಿಧತೆಯಲ್ಲಿ ಏಕತೆಯನ್ನೊಳಗೊಂಡು ತನ್ನದೇ ಆದ ಪಾರಂಪರಿಕ ಇತಿಹಾಸದಿಂದ ಕರ್ನಾಟಕ ಶ್ರೇಷ್ಠತೆಯನ್ನು ಪಡೆದುಕೊಂಡಿದೆ ಎಂದು ಬಣ್ಣಿಸಿದರು.
ಕನ್ನಡ ನಾಡು -ನುಡಿಗೆ ಎಲ್ಲ ವಿದ್ಯಾರ್ಥಿಗಳು ಸೇವೆ ಸಲ್ಲಿಸುವಂತೆ ಮತ್ತು ಉತ್ತಮ ಭವಿಷ್ಯವನ್ನು ಶಾಲೆಯ ಪಾಠ ಪ್ರವಚನಗಳೊಂದಿಗೆ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರಲ್ಲದೆ, ಕಲಿಯುವುದಕ್ಕೆ ಕೋಟಿ ಭಾಷೆಗಳಿದ್ದರೂ, ಮಾತನಾಡುವ ಭಾಷೆ ಕನ್ನಡವಾಗಿರಿಸಿಕೊಳ್ಳುವಂತೆ ತಿಳಿಸಿದರು.ಶಾಲೆಯ ಮುಖ್ಯ ಶಿಕ್ಷಕ ಸಿ.ಜೆ.ಜವರೇಗೌಡ ಮಾತನಾಡಿ, ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಜಿಲ್ಲೆಯಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ ನಾವು ಕನ್ನಡ, ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಅತ್ಯುತ್ತಮವಾಗಿ ಅಧ್ಯಯನ ಮಾಡಿ ಇದರ ಶ್ರೇಷ್ಠತೆಯನ್ನು ಪ್ರಪಂಚದಾದ್ಯಂತ ಹರಡುವಂತೆ ಮಾಡಬೇಕು ಎಂದರು.
೮೭ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಸಾಹಿತಿ ಗೊ.ರು.ಚೆನ್ನಬಸವಪ್ಪ ಅವರ ಸಾಹಿತ್ಯ ಸಾಧನೆಗಳನ್ನು ಓದುವುದರ ಮುಖಾಂತರ ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯ ಅಂಗವಾಗಿ ಶಾಲೆಯಲ್ಲಿ ನಡೆದಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತಾಧಿಕಾರಿ ಸುಮಾ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ವೀಣಾ, ಶಾಲೆಯ ಸಂಯೋಜಕರಾದ ಶೋಭಾ, ಕುಸುಮಾ, ಪ್ರಸನ್ನಕುಮಾರ್, ಮಹೇಶ್ ಸೇರಿದಂತೆ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.