ವೈವಿಧ್ಯತೆಯಲ್ಲಿ ಏಕತೆಯೇ ಭಾರತೀಯ ಸಮಾಜದ ಆಸ್ಮಿತೆ: ಗುರುಬಸವಲಿಂಗ ಸ್ವಾಮೀಜಿ

| Published : Jan 19 2024, 01:48 AM IST

ವೈವಿಧ್ಯತೆಯಲ್ಲಿ ಏಕತೆಯೇ ಭಾರತೀಯ ಸಮಾಜದ ಆಸ್ಮಿತೆ: ಗುರುಬಸವಲಿಂಗ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ಮನುಷ್ಯರು ಜಡ ವಸ್ತುಗಳನ್ನು ಪ್ರೀತಿಸುತ್ತಾರೆ. ಆದರೆ ಮನುಷ್ಯನನ್ನು ಪ್ರೀತಿಸುತ್ತಿಲ್ಲ.

ಕನ್ನಡಪ್ರಭ ವಾರ್ತೆ ಹಾವೇರಿ

ವೈವಿಧ್ಯತೆಯಲ್ಲಿ ಏಕತೆಯೇ ಭಾರತೀಯ ಸಮಾಜದ ಆಸ್ಮಿತೆಯಾಗಿದ್ದು, ಸಮಾಜಕ್ಕೆ ತಮ್ಮನ್ನು ತಾವು ಅರ್ಪಿಕೊಂಡವರ ನೆಲೆ ಈ ಪುಣ್ಯ ಭೂಮಿಯಾಗಿರುವುದರಿಂದ ವೈವಿಧ್ಯತೆಯನ್ನು ತನ್ನಲ್ಲಿ ಇರಿಸಿಕೊಂಡು ಬಲಿಷ್ಠ ದೇಶ ನಿರ್ಮಾಣವಾಗುತ್ತಿದೆ. ಅದಕ್ಕೆ ಭಾರತೀಯ ಧಾರ್ಮಿಕತೆಯ ಸಂಸ್ಕಾರವೇ ಕಾರಣ ಎಂದು ಅರಭಾವಿ ಜಗದ್ಗುರು ದುರದುಂಡೇಶ್ವರ ಸಿದ್ಧಸಂಸ್ಥಾನ ಮಠದ ಗುರುಬಸವಲಿಂಗ ಸ್ವಾಮೀಜಿ ಹೇಳಿದರು.

ನಗರದ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿರುವ ಲಿಂ. ಶಿವಬಸವ ಸ್ವಾಮಿಗಳ ೭೮ನೇ ಮತ್ತು ಲಿಂ. ಶಿವಲಿಂಗ ಸ್ವಾಮೀಜಿಗಳ ೧೫ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ನಮ್ಮೂರ ಜಾತ್ರೆಯ ೨ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಂದು ಮನುಷ್ಯರು ಜಡ ವಸ್ತುಗಳನ್ನು ಪ್ರೀತಿಸುತ್ತಾರೆ. ಆದರೆ ಮನುಷ್ಯನನ್ನು ಪ್ರೀತಿಸುತ್ತಿಲ್ಲ. ಸಮಾಜದ ಅಂತಸತ್ವವೇ ಧರ್ಮವಾಗಿದ್ದು, ಧರ್ಮವನ್ನು ಕೇಳು, ಕೇಳಿದ್ದನ್ನು ರೂಡಿಸು ಅಂದಾಗ ಸಮಾಜಮುಖಿ ಚಿಂತನೆಯು ನಮ್ಮಲ್ಲಿ ಬಂದು ನಡೆ, ನುಡಿ ವಿಚಾರಗಳು ಧನಾತ್ಮಕ ಬದಲಾವಣೆಗೆ ಕಾರಣವಾಗುತ್ತವೆ ಎಂದು ಹೇಳಿದರು.

ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಸ್ವಾಮೀಜಿ ಮಾತನಾಡಿ, ಆತ್ಮಕಲ್ಯಾಣವು ಮಾನವನ ಗುರಿ ಆಗಿದೆ, ಆತ್ಮಕಲ್ಯಾಣದ ಜೊತೆಗೆ ಸಮಾಜ ಕಲ್ಯಾಣವು ನಮ್ಮ ಜೀವನದ ಗುರಿಯಾಗಬೇಕು. ನಾಡಿನ ಸಂತ ಮಹಾತ್ಮರ ಜೀವನವು ಆತ್ಮಕಲ್ಯಾಣದ ಜೊತೆಗೆ ಸಮಾಜಕಲ್ಯಾಣವು ಆಗಿತ್ತು. ಶ್ರೀ ಹುಕ್ಕೇರಿ ಮಠದ ಲಿಂ.ಶಿವಬಸವ ಮತ್ತು ಲಿಂ.ಶಿವಲಿಂಗ ಶ್ರೀಗಳ ಜೀವನವು ಇದೇಆಗಿದ್ದರಿಂದ ಅವರು ಸದಾ ಸ್ಮರಣೀಯರಾಗಿದ್ದಾರೆ ಎಂದರು.

ಜಗತ್ತಿನಲ್ಲಿ ಎಲ್ಲ ಧರ್ಮಗಳು ನಿರ್ವಾಣವನ್ನೇ ಬೋಧಿಸಿವೆ. ಬುದ್ಧ, ಮಹಾವೀರ, ಪೈಗಂಬರರ ಜೀವನ ಸಂದೇಶವು ಇದೇ ಆಗಿತ್ತು. ಬಸವಾದಿ ಶಿವಶರಣರು ಇದನ್ನೇ ಶೂನ್ಯ ಸಂಪಾದನೆ ಎಂದರು. ಅಷ್ಟಾವರಣ, ಪಂಚಾಚಾರ ಮತ್ತು ಷಟ್ ಸ್ಥಳಗಳ ಆಚರಣೆಗಳು ಕೈವಲ್ಯ ಸಾಧನೆಗೆ ದಾರಿ ದೀಪವಾಗಿವೆ. ಮಹಾತ್ಮರ ಸ್ಮರಣೆಯು ಬೆನ್ನ ಹಿಂದೆ ಬೆಳಕಾದರೆ, ಕಣ್ಣು ಮುಂದಿನ ಕಾಂತಿಯಾಗಿದೆ ಎಂದು ಹೇಳಿದರು.

ಹರಸೂರು ಬಣ್ಣದ ಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಸ್ವಾರ್ಥವಿಲ್ಲದ ಬದುಕು, ಸಮಾಜ ಸುಧಾರಣೆಯ ತುಡಿತ, ನೊಂದವರ ಕಣ್ಣೀರು ಒರೆಸುವುದೇ ನಿಜವಾದ ಮುಕ್ತಿಗೆ ಮಾರ್ಗ. ಶಿವಯೋಗ ಮತ್ತು ಶಿವಾನುಭವವು ಮಹಾತ್ಮರ ಜೀವನದರ್ಶನವಾಗಿದೆ. ಹುಕ್ಕೇರಿಮಠದ ಉಭಯ ಶ್ರೀಗಳು ಅಂತಹ ಮಹಾತ್ಮರು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕುಂದಗೋಳದ ಕಲ್ಯಾಣಪುರಮಠದ ಬಸವಜ್ಜನವರಿಗೆ ಶ್ರೀಮಠದಿಂದ ಗೌರವಾರ್ಪಣೆ ಸಲ್ಲಿಸಲಾಯಿತು. ಕೊಪ್ಪಳದ ಸದಾಶಿವ ಪಾಟೀಲ ಭಕ್ತಿ ಸಂಗೀತ ನಡೆಸಿಕೊಟ್ಟರು. ರಾಣಿಬೆನ್ನೂರಿನ ಸಾಹಿತಿ, ರಂಗಕರ್ಮಿ ವೆಂಕಟೇಶ ಈಡಿಗರ ಅವರಿಗೆ ಓಂ ಸೇವಾ ಸಂಸ್ಥೆಯಿಂದ ಸಾಧಕರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ರಾವೂರಿನ ಸಿದ್ಧಲಿಂಗ ಸ್ವಾಮೀಜಿ, ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಕೂಡಲದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಪ್ರಕಾಶ ಶೆಟ್ಟಿ, ಗಂಗನಗೌಡ್ರ ಪಾಟೀಲ, ಕಳಕಪ್ಪ ತುಪ್ಪದ, ಮಲ್ಲೇಶಪ್ಪ ಬಣಕಾರ, ರೋಹಿಣಿ ಪಾಟೀಲ, ಡಾ. ಪ್ರಮೋದ ಹೆಗ್ಗೇರಿ, ಎಂ.ಸಿ. ಮಳಿಮಠ, ಫಕ್ಖಿರಯ್ಯ ಬಂಕಾಪುರಮಠ, ಎಸ್.ಆರ್. ಮಾಗನೂರ, ಶಿವಬಸಪ್ಪ ಶೀಲವಂತ, ರೇಣುಕಾ ಪುತ್ರನ್, ಬಸವರಾಜ ಬಳ್ಳಾರಿ, ಶಿವಯೋಗಿ ಹೂಲಿಕಂತಿಮಠ, ಕರಬಸಪ್ಪ ಹಲಗಣ್ಣವರ, ಬಿ. ಬಸವರಾಜ ಮತ್ತಿತರರು ಉಪಸ್ಥಿತರಿದ್ದರು.

ಸಂಗಮೇಶ ಪಾಟೀಲ ಪ್ರಾರ್ಥಿಸಿದರು. ಆನಂದ ಅಟವಾಳಗಿ ಸ್ವಾಗತಿಸಿದರು. ಆನಂದದೇವರು ಮತ್ತು ಎಸ್.ಎನ್. ಮಳೆಪ್ಪನವರ ನಿರೂಪಿಸಿದರು. ವಿಜಯಕುಮಾರ ಕೂಡ್ಲಪ್ಪನವರ ವಂದಿಸಿದರು.

ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ:ಹುಕ್ಕೇರಿಮಠದ ಲಿಂ. ಶಿವಬಸವ ಶ್ರೀಗಳ ೭೮ನೇ ಮತ್ತು ಲಿಂ. ಶಿವಲಿಂಗ ಶ್ರೀಗಳ ೧೫ನೇ ಪುಣ್ಯ ಸ್ಮರಣೋತ್ಸವದ ನಮ್ಮೂರ ಜಾತ್ರೆಯ ಅಂಗವಾಗಿ ಹುಕ್ಕೇರಿಮಠದ ದಾಸೋಹ ಮಂದಿರದಲ್ಲಿ ಜಿಲ್ಲಾಡಳಿತ, ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಫಲಪುಷ್ಪ ಪ್ರದರ್ಶನವನ್ನು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಉದ್ಘಾಟಿಸಿದರು.ಗುರುವಾರದಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನದಲ್ಲಿ ಹೂವಿನ ಆನೆ, ಗೋಡಂಬಿ ಮಾದರಿ ಪೋಟೋ ಪ್ರೇಮ್, ಪತಂಗ, ಗಡಿಯಾರ ಹಾಗೂ ವಿಶೇಷವಾಗಿ ತಯಾರಿಸಿದ ಚಂದ್ರಯಾನ-೩ ಪ್ರತಿಕೃತಿ, ಮುಂತಾದವು ನೋಡುಗರ ಕಣ್ಮನ ಸೆಳೆದವು.ಸಮಾರಂಭದಲ್ಲಿ ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಶಾಸಕ ಶ್ರೀನಿವಾಸ ಮಾನೆ, ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ತೋಟಗಾರಿಕೆ ಇಲಾಖೆ ನಿರ್ದೇಶಕ ರಂಗಪ್ಪ ಸಿ.ಎನ್. ಬಸವರಾಜ ಬರೆಗಾರ, ಉತ್ಸವ ಸಮಿತಿ ಅಧ್ಯಕ್ಷ ವಿಜಯಕುಮಾರ ಕೂಡ್ಲಪ್ಪನವರ, ಆನಂದ ಅಟವಾಳಗಿ, ಕರಬಸಪ್ಪ ಹಲಗಣ್ಣನವರ, ಶಿವಯೋಗಿ ವಾಲಿಶೆಟ್ಟರ, ರಾಚಪ್ಪ ಲಂಬಿ, ಬಿ. ಬಸವರಾಜ, ಮತ್ತಿತರರು ಉಪಸ್ಥಿತರಿದ್ದರು.