ವಿಪ್ರ ಸಮುದಾಯದಲ್ಲಿ ಒಗ್ಗಟ್ಟು ಅತ್ಯವಶ್ಯ

| Published : Dec 17 2024, 12:47 AM IST

ಸಾರಾಂಶ

ವಿಪ್ರ ಸಮುದಾಯದಲ್ಲಿ ಒಗ್ಗಟ್ಟು ಹಾಗೂ ಜಾಗೃತಿ ಮೂಡಿಸಲು ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸ್ಥಾಪನೆಗೊಂಡು 50 ವರ್ಷಗಳಾದ ಹಿನ್ನೆಲೆಯಲ್ಲಿ ಮುಂಬರುವ ಜನವರಿ ತಿಂಗಳಿನಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಎರಡು ದಿನದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಶಿವಶಂಕರ್ ಅವರು ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರುವಿಪ್ರ ಸಮುದಾಯದಲ್ಲಿ ಒಗ್ಗಟ್ಟು ಹಾಗೂ ಜಾಗೃತಿ ಮೂಡಿಸಲು ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸ್ಥಾಪನೆಗೊಂಡು 50 ವರ್ಷಗಳಾದ ಹಿನ್ನೆಲೆಯಲ್ಲಿ ಮುಂಬರುವ ಜನವರಿ ತಿಂಗಳಿನಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಎರಡು ದಿನದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಶಿವಶಂಕರ್ ಅವರು ಹೇಳಿದರು. ಅವರು ತುಮಕೂರಿನಲ್ಲಿ ಜಿಲ್ಲಾ ಬ್ರಾಹ್ಮಣ ಸಭಾ ವತಿಯಿಂದ ರಾಜ್ಯ ಮಹಾಸಭಾವು ಸ್ಥಾಪನೆಗೊಂಡು 50 ವರ್ಷಗಳಾದ ಸುಸಂದರ್ಭದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜಾನಪದ ನೃತ್ಯ ಸ್ಪರ್ಧೆ ಮತ್ತು ಭಗವದ್ಗೀತೆ ಕಂಠಪಾಠ ಸ್ಪರ್ಧೆಯ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಪ್ರಸ್ತುತ ಯಾವ ರಾಜಕೀಯ ಪಕ್ಷಗಳಲ್ಲೂ ಬ್ರಾಹ್ಮಣ ಸಮುದಾಯಕ್ಕೆ ಸೂಕ್ತ ಸ್ಥಾನಮಾನ, ಪ್ರಾತಿನಿಧ್ಯ ಹಾಗೂ ಪ್ರಾಶಸ್ತ್ಯ ಸರಿಯಾಗಿ ದೊರೆಯುತ್ತಿಲ್ಲ. ಅಸಡ್ಡೆಯಿಂದ ಕಾಣಲಾಗುತ್ತಿದೆ. ಈ ನಿಟ್ಟಿನಲ್ಲಿ ವಿಪ್ರ ಸಮುದಾಯದ ಒಗ್ಗಟ್ಟನ್ನು ಪ್ರದರ್ಶಿಸಲೂ ಸಹ ಈ ಸಮಾವೇಶ ಉತ್ತಮ ವೇದಿಕೆಯಾಗಲಿದೆ ಎಂದು ಸಮಾವೇಶದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.ಮತ್ತೋರ್ವ ಅತಿಥಿಗಳಾಗಿದ್ದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಹಿಳಾ ಘಟಕದ ಉಪಾಧ್ಯಕ್ಷೆ ಸಾವಿತ್ರಿ ಅವರು ಮಾತನಾಡಿ, ನಮ್ಮ ಹಿಂದಿನ ಭವ್ಯ ಪರಂಪರೆಯನ್ನು ಮೆಲುಕು ಹಾಕುತ್ತಾ, ಮುಂದಿನ ಐವತ್ತು ವರ್ಷಗಳಿಗೆ ಸುಭದ್ರ ಅಡಿಪಾಯ ಹಾಕಲು, ಸಮುದಾಯದ ಯುವ ಜನತೆಯನ್ನು ಮುನ್ನೆಲೆಗೆ ತರಲು ಈ ಸಮ್ಮೇಳನ ಭದ್ರ ಬುನಾದಿಯಾಗಲಿದೆ. ಅದೇರೀತಿ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರೊಂದಿಗೆ ಸಂವಾದ, ಉದ್ಯೋಗಮೇಳ ಹಾಗೂ ಸ್ವಂತ ಉದ್ದಿಮೆ ಪ್ರಾರಂಭಿಸುವವರಿಗೆ ನಿಮ್ಮ ಆಲೋಚನೆ ನಮ್ಮ ಹಣ ಘೋಷಣೆಯಡಿ ಆರ್ಥಿಕ ಸೌಲಭ್ಯ ಕಲ್ಪಿಸುವುದೂ ಸೇರಿದಂತೆ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಅನೇಕ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.ಜಿಲ್ಲಾ ಸಂಚಾಲಕಿ ಸುಭಾಷಿಣಿ ರವೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಭಗವದ್ಗೀತೆ ಕಂಠಪಾಠ ಸ್ಪರ್ಧೆ ಹಾಗೂ ಜಾನಪದ ನೃತ್ಯ ಸ್ಪರ್ಧೆಗೆ ಜಿಲ್ಲಾದ್ಯಂತ ಉತ್ತಮ ಸ್ಪಂದನೆ ದೊರೆತಿದ್ದು, ಜಿಲ್ಲೆಯ ವಿವಿಧ ತಾಲೂಕುಗಳಿಂದ ಸ್ಪರ್ಧಿಗಳು ಅತ್ಯುತ್ಸಾಹದಿಂದ ಪಾಲೊಂಡಿದ್ದಾರೆ. ಮೂವರು ವಿಜೇತರಿಗೆ ಬಹುಮಾನ ವಿತರಿಸಿದ್ದು, ಭಾಗವಹಿಸಿದ ಎಲ್ಲರಿಗೂ ಪದಕ ಮತ್ತು ಪ್ರಶಂಸಾಪತ್ರ ನೀಡಲಾಗಿದೆ ಎಂದರು. ವೇದಿಕೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಗಣೇಶ್‌ಪ್ರಸಾದ್, ಎಚ್.ಎಸ್.ರಾಘವೇಂದ್ರ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಸಿ.ಫಣೀಶ್, ಛಾಯಾರಾಮಶೇಷ, ಚಂದ್ರಶೇಖರ್ ಉಪಸ್ಥಿತರಿದ್ದರು. ಜಿಲ್ಲಾ ಬ್ರಾಹ್ಮಣಸಭಾ ಅಧ್ಯಕ್ಷ ಹೆಬ್ಬಳಲು ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ನಂದಾರಾಜ್ ನಿರೂಪಿಸಿದರು. ಸುರೇಶ್‌ಹೊಳ್ಳ ವಂದಿಸಿದರು. ಉಪನ್ಯಾಸಕಿ ಪ್ರೇಮಾಹೆಗಡೆ, ನೃತ್ಯಪಟು ಸುಷ್ಮಾಪ್ರಸಾದ್, ಹೇಮಾನಾಗರಾಜ್ ಮತ್ತು ಗೌತಮ್ ಅವರು ಸ್ಪರ್ಧೆಗಳ ತೀರ್ಪುಗಾರರಾಗಿದ್ದರು.