ಆಹಾರ, ಆರೋಗ್ಯದ ಜೊತೆಗೆ ಆರ್ಥಿಕ ಸ್ವಾವಲಂಬನೆ ಕೂಡ ಅತ್ಯಂತ ಮುಖ್ಯವಾಗಿದ್ದು, ಮುಂದಿನ ದಿನಗಳಲ್ಲಿ ಅರಸೀಕೆರೆಯನ್ನು ರಾಸಾಯನಿಕ ಮುಕ್ತ ತಾಲ್ಲೂಕಾಗಿ ರೂಪಿಸುವುದು ನಮ್ಮ ಗುರಿ ಎಂದು ತಿಳಿಸಿದರು. ರೈತರು ರಾಸಾಯನಿಕ ಗೊಬ್ಬರ ಹಾಗೂ ವಿಷಕಾರಿ ಔಷಧಿಗಳನ್ನು ತ್ಯಜಿಸಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಈ ದಿಕ್ಕಿನಲ್ಲಿ ಕೃಷಿ ಸಹಕಾರಿ ಬ್ಯಾಂಕ್‌ಗಳು ಮತ್ತು ಪತ್ತಿನ ಸಹಕಾರ ಸಂಘಗಳು ಮಹತ್ವದ ಪಾತ್ರ ವಹಿಸಬೇಕು. ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಪಾರದರ್ಶಕವಾಗಿ ಸಾಲ ಸೌಲಭ್ಯ ಒದಗಿಸುವುದರ ಮೂಲಕ ಖಾಸಗಿ ಫೈನಾನ್ಸ್ ಸಂಸ್ಥೆಗಳ ಶೋಷಣೆಯಿಂದ ರೈತರನ್ನು ರಕ್ಷಿಸಬಹುದು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆಯುವ ಭಾರತವನ್ನು ನಾವೆಲ್ಲ ಸೇರಿ ಕಟ್ಟಬೇಕಾಗಿದೆ. ಹಿರಿಯರು ನಮಗೆ ನೀಡಿರುವ ಉತ್ತಮ ಚಿಂತನೆಗಳು ಮತ್ತು ಮೌಲ್ಯಗಳನ್ನು ನೆನಪಿಸಿಕೊಂಡು ಅವನ್ನು ಜೀವನದಲ್ಲಿ ಮರುಪಾಲನೆ ಮಾಡುವುದೇ ನಮ್ಮ ಕರ್ತವ್ಯ ಎಂದು ಪರಾಜಿತ ಜೆಡಿಎಸ್ ಅಭ್ಯರ್ಥಿ ಎನ್.ಆರ್‌. ಸಂತೋಷ್ ಕುಮಾರ್‌ ಹೇಳಿದರು.ನಗರದ ಶ್ರೀನಗರದಲ್ಲಿರುವ ತಮ್ಮ ಸ್ವಗೃಹದ ಆವರಣದಲ್ಲಿ ಆಯೋಜಿಸಲಾಗಿದ್ದ ಓಂ ಶ್ರೀ ಶಿವಶಕ್ತಿ ಸೌಹಾರ್ದ ಪತ್ತಿನ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಆಹಾರ, ಆರೋಗ್ಯದ ಜೊತೆಗೆ ಆರ್ಥಿಕ ಸ್ವಾವಲಂಬನೆ ಕೂಡ ಅತ್ಯಂತ ಮುಖ್ಯವಾಗಿದ್ದು, ಮುಂದಿನ ದಿನಗಳಲ್ಲಿ ಅರಸೀಕೆರೆಯನ್ನು ರಾಸಾಯನಿಕ ಮುಕ್ತ ತಾಲ್ಲೂಕಾಗಿ ರೂಪಿಸುವುದು ನಮ್ಮ ಗುರಿ ಎಂದು ತಿಳಿಸಿದರು. ರೈತರು ರಾಸಾಯನಿಕ ಗೊಬ್ಬರ ಹಾಗೂ ವಿಷಕಾರಿ ಔಷಧಿಗಳನ್ನು ತ್ಯಜಿಸಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಈ ದಿಕ್ಕಿನಲ್ಲಿ ಕೃಷಿ ಸಹಕಾರಿ ಬ್ಯಾಂಕ್‌ಗಳು ಮತ್ತು ಪತ್ತಿನ ಸಹಕಾರ ಸಂಘಗಳು ಮಹತ್ವದ ಪಾತ್ರ ವಹಿಸಬೇಕು. ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಪಾರದರ್ಶಕವಾಗಿ ಸಾಲ ಸೌಲಭ್ಯ ಒದಗಿಸುವುದರ ಮೂಲಕ ಖಾಸಗಿ ಫೈನಾನ್ಸ್ ಸಂಸ್ಥೆಗಳ ಶೋಷಣೆಯಿಂದ ರೈತರನ್ನು ರಕ್ಷಿಸಬಹುದು ಎಂದು ಹೇಳಿದರು.ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯು ದುಶ್ಚಟಗಳಿಗೆ ಬಲಿಯಾಗಿ ಜೀವ ಕಳೆದುಕೊಳ್ಳುತ್ತಿರುವುದು ನೋವಿನ ಸಂಗತಿ. ಫೈನಾನ್ಸ್ ಕಂಪನಿಗಳು ರೈತರಿಂದ ಅತಿಯಾದ ಬಡ್ಡಿ ದರ ವಸೂಲಿ ಮಾಡುತ್ತಿದ್ದು, ಭಯದ ವಾತಾವರಣ ನಿರ್ಮಿಸುತ್ತಿವೆ. ಪ್ರಾಮಾಣಿಕ ಸಹಕಾರಿ ಸಂಘಗಳಿಗೆ ಜನರು ಬಡ್ಡಿ ಕಟ್ಟದೆ ಇರುವುದರಿಂದ ಅವು ದುರ್ಬಲವಾಗುತ್ತಿವೆ. ಈ ಸ್ಥಿತಿಗೆ ಪರಿಹಾರವಾಗಿ ಪ್ರತಿಯೊಬ್ಬ ರೈತನಿಗೂ ಒಂದು ವೇದಿಕೆ ಕಲ್ಪಿಸುವ ಉದ್ದೇಶದಿಂದ ಕೃಷಿ ಪತ್ತಿನ ಸಹಕಾರ ಸಂಘವನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು. ಹಿಂದೆ ಹಳ್ಳಿಗಳಲ್ಲೇ ಉತ್ಪಾದನೆ ಮತ್ತು ಬಳಕೆ ನಡೆಯುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಹಳ್ಳಿಯಲ್ಲಿ ಬೆಳೆದ ಉತ್ಪನ್ನಗಳು ದೇಶ ವಿದೇಶಗಳಿಗೆ ಹೋಗಿ, ಮೌಲ್ಯವರ್ಧಿತ ವಸ್ತುಗಳಾಗಿ ಹೆಚ್ಚಿನ ದರದಲ್ಲಿ ಮರಳಿ ನಮ್ಮ ಕೈ ಸೇರುವ ದುಸ್ಥಿತಿ ನಿರ್ಮಾಣವಾಗಿದೆ. ರೈತರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ರೈತನ ಬೆವರು ಭೂಮಿಗೆ ಬಿದ್ದಾಗಲೇ ರಾಗಿ, ಜೋಳ ಸೇರಿದಂತೆ ಅನ್ನ ನಮ್ಮ ತಟ್ಟೆಗೆ ಬರುತ್ತದೆ ಎಂದು ಹೇಳಿದರು.ಸೌಹಾರ್ದ ಸಹಕಾರ ಸಂಘದ ಅಧಿಕಾರಿ ಅಶೋಕ್ ಮಾತನಾಡಿ, ಯಾವುದೇ ಸಂಸ್ಥೆ ಬೆಳೆಯಬೇಕಾದರೆ ಜನರ ನಿಷ್ಠಾವಂತ ಸಹಕಾರ ಮತ್ತು ಭಾಗವಹಿಸುವಿಕೆ ಅತ್ಯಂತ ಅಗತ್ಯ ಎಂದು ಹೇಳಿದರು. ಸಾರ್ವಜನಿಕರು ತಮ್ಮ ಉಳಿತಾಯವನ್ನು ಸಹಕಾರ ಸಂಸ್ಥೆಗಳಲ್ಲಿ ಠೇವಣಿಯಾಗಿ ಇಡುವುದರಿಂದ ಆ ಸಂಸ್ಥೆಗೆ ಆರ್ಥಿಕ ಬಲ ದೊರೆಯುತ್ತದೆ. ಇದರಿಂದ ಸಂಸ್ಥೆ ಇನ್ನಷ್ಟು ಬಲಿಷ್ಠವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನೆರೆದಿದ್ದ ಜನರಿಗೆ ಸಾವಯವ ಕೃಷಿ ಕುರಿತು ಅರಿವು ಮೂಡಿಸಲಾಯಿತು. ಜೊತೆಗೆ ಸಸಿಗಳನ್ನು ವಿತರಿಸಿ ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಲಾಯಿತು.