ಸಾರಾಂಶ
ಕನ್ನಡಪ್ರಭ ವಾರ್ತೆ ಸಾಗರ ಸ್ವಾತಂತ್ರ್ಯಾನಂತರ ನಾವು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸಾಕಷ್ಟು ಅಭಿವೃದ್ಧಿ ಸಾಧಿಸಿದ್ದರೂ ಇನ್ನೂ ಸಾಧಿಸಬೇಕಾದ್ದು ಸಾಕಷ್ಟಿದೆ ಎಂದು ಉಪವಿಭಾಗಾಧಿಕಾರಿ ಯತೀಶ್ ಆರ್. ಅಭಿಪ್ರಾಯಪಟ್ಟರು.ಪಟ್ಟಣದ ನೆಹರೂ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಎಲ್ಲ ವರ್ಗದ ಜನರ ಹೋರಾಟದಿಂದ ದೊರಕಿರುವ ಸ್ವಾತಂತ್ರ್ಯವನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಸ್ವಾತಂತ್ರ್ಯ ಬಂದ ನಂತರ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂತು. ಡಾ.ಅಂಬೇಡ್ಕರ್ ಜಗತ್ತಿಗೆ ಮಾದರಿಯಾದ ಸಂವಿಧಾನವನ್ನು ರಚಿಸಿದರು. ಸಂವಿಧಾನದ ಮೂಲತತ್ವ ಅಳವಡಿಸಿಕೊಂಡು ಸುಸ್ಥಿರ ಸಮಾಜ ನಿರ್ಮಿಸುವುದು ನಮ್ಮೆಲ್ಲರ ಗುರಿಯಾಗಬೇಕು. ದೇಶದಲ್ಲಿ ಹಲವು ಜಾತಿ, ಧರ್ಮ, ಭಾಷಿಗರು, ಹಲವು ಸಂಸ್ಕೃತಿ ಹೀಗೆ ವಿವಿಧತೆ ಇದ್ದರೂ ಏಕತೆ ನಮ್ಮ ದೊಡ್ಡ ಶಕ್ತಿಯಾಗಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ೭೮ನೇ ಸ್ವಾತಂತ್ರ್ಯ ದಿನಾಚರಣೆ ಸಂತೋಷ ತರುವ ಜೊತೆಗೆ ಕೇರಳದಲ್ಲಿ ನಡೆದ ಭೂಕುಸಿತ, ಕರ್ನಾಟಕದ ಉತ್ತರ ಕನ್ನಡದ ಶಿರೂರು ಗುಡ್ಡಕುಸಿತದಿಂದ ಆದ ಸಾವುನೋವು ತೀವ್ರ ಬೇಸರ ತಂದಿದೆ. ನೊಂದ ಜನರಿಗೆ ಸಾಂತ್ವನ ಹೇಳುವ ಕೆಲಸವನ್ನು ಪ್ರತಿಯೊಬ್ಬ ಭಾರತೀಯ ಮಾಡಬೇಕು. ಅತಿವೃಷ್ಟಿಯಿಂದ ಸಾಕಷ್ಟು ನೋವು ಅನುಭವಿಸಿದ್ದೇವೆ. ಇದೆಲ್ಲದರ ನಡುವೆಯೂ ರಾಜ್ಯ ಸರ್ಕಾರ ಐದು ಗ್ಯಾರಂಟಿಯನ್ನು ಜನರಿಗೆ ತಲುಪಿಸುವ ಮೂಲಕ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡಿದೆ. ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ರೀತಿಯ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿದರು. ಪೌರಾಯುಕ್ತ ಎಚ್.ಕೆ.ನಾಗಪ್ಪ, ಡಿವೈಎಸ್ಪಿ ಗೋಪಾಲ ಕೃಷ್ಣ ನಾಯ್ಕ್, ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಗುರುಕೃಷ್ಣ ಶೆಣೈ ಹಾಜರಿದ್ದರು.
ಧ್ವಜಾರೋಹಣ, ಧ್ವಜವಂದನೆಯ ನಂತರ ಪೊಲೀಸ್, ಗೃಹರಕ್ಷಕ, ಅರಣ್ಯ, ಎನ್.ಸಿ.ಸಿ., ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಪಥಸಂಚಲನ ನಡೆಯಿತು.