ಒಗ್ಗಟ್ಟಿನಿಂದ ಸಮಸ್ಯೆ ಎದುರಿಸಲು ಸಾಧ್ಯ: ಕೆ.ಜಿ. ಬೋಪಯ್ಯ

| Published : Mar 17 2025, 12:33 AM IST

ಒಗ್ಗಟ್ಟಿನಿಂದ ಸಮಸ್ಯೆ ಎದುರಿಸಲು ಸಾಧ್ಯ: ಕೆ.ಜಿ. ಬೋಪಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮಲ್ಲಿ ಒಗ್ಗಟ್ಟು ಇಲ್ಲದೆ ಇರುವುದೇ ಒಂದು ಸಮಸ್ಯೆಯಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಸಮಸ್ಯೆಯನ್ನು ಎದುರಿಸುವ ಮನೋಬಲ ರೂಢಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ನಾವು ನಾವಾಗಿ ಉಳಿಯುವುದಿಲ್ಲ ಎಂದು ಮಾಜಿ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ನಮ್ಮಲ್ಲಿ ಒಗ್ಗಟ್ಟು ಇಲ್ಲದೆ ಇರುವುದೇ ಒಂದು ಸಮಸ್ಯೆಯಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಸಮಸ್ಯೆಯನ್ನು ಎದುರಿಸುವ ಮನೋಬಲ ರೂಢಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ನಾವು ನಾವಾಗಿ ಉಳಿಯುವುದಿಲ್ಲ ಎಂದು ಮಾಜಿ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಹೊದ್ದೂರಿನಲ್ಲಿ ರೈತರಿಗೆ ಆಗುವ ದೌರ್ಜನ್ಯದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ, ಕೊಡಗು ಜಿಲ್ಲೆ ರೈತ ಸಂಘ ಹೊದ್ದೂರು ಶಾಖೆ ಆಶ್ರಯದಲ್ಲಿ ಆಯೋಜಿಸಿದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜಮ್ಮಾ ಬಾಣೆಗೆ ಕಂದಾಯ ನಿಗದಿ ಮಾಡಬೇಕು, ಆದರೆ ಅನುಷ್ಠಾನ ಮಾಡಲು ಸ್ಥಳೀಯರಿಂದಲೇ ವಿರೋಧವಿದೆ. ಸಾರ್ವಜನಿಕ ಸಮಸ್ಯೆಗಳನ್ನು ವಾರ್ಡ್ ಸಭೆ, ಗ್ರಾಮ ಸಭೆಗಳಲ್ಲಿ ಪ್ರಸ್ತಾಪಿಸಿ ನಿರ್ಣಯ ಕೈಗೊಳ್ಳಿ, ಆಡಳಿತತ್ಮಕವಾಗಿ ಮನ್ನಣೆ ಸಿಗುತ್ತದೆ. ಅದು ಇಲ್ಲದೆ ಹೋದಲ್ಲಿ ಕೋರ್ಟ್‌ಗೆ ಹೋಗಿ ನ್ಯಾಯ ಪಡೆದುಕೊಳ್ಳಬಹುದು ಎಂದರು.

ಸರ್ಕಾರಿ ಜಾಗದಲ್ಲಿ ಗುತ್ತಿಗೆ ಪಡೆದು ಸಾಗುವಳಿ ಮಾಡಲು ಅವಕಾಶವಿದೆ ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು. ಹಿಂದಿನ ಬಿಜೆಪಿ ಸರ್ಕಾರ ಜಮಾ ಬಾಡಿಗೆ ಕಂದಾಯ ನಿಗದಿ ಮಾಡುವ ಬಗ್ಗೆ ಸಮಗ್ರವಾದ ರೂಪುರೇಷೆ ಕೈಗೊಂಡಿತ್ತು ಎಂದು ಹೇಳಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಕಡ್ಯಮಾಡ ಮನು ಸೋಮಯ್ಯ ಮಾತನಾಡಿ, ರೈತ ಸಂಘ ಬಡಜನರ ವಿರುದ್ಧ ಹೋರಾಟ ಮಾಡುವುದಿಲ್ಲ, ಮನೆ ಇಲ್ಲದವರಿಗೆ ಕಾನೂನಾತ್ಮಕವಾಗಿ ನಿವೇಶನ ನೀಡಬೇಕು ಎಂಬುದು ರೈತ ಸಂಘದ ಕಾಳಜಿ. ಪ್ರವಾಹ ಬಂದಾಗ ಮನೆಯಿತ್ತು, ಬಳಿಕ ಮನೆ ಕಳೆದುಕೊಂಡಿದ್ದೇವೆ ಎಂದು ನಿವೇಶನ ಗಿಟ್ಟಿಸಿಕೊಳ್ಳುತ್ತಾರೆ. ಮತ್ತೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸುತ್ತಾರೆ ಇದು ಸಲ್ಲದು. ಸಾಮಾಜಿಕ ನ್ಯಾಯಕ್ಕಾಗಿ ರೈತ ಸಂಘದ ವತಿಯಿಂದ ‘ರೈತರು ಬಂದರು ದಾರಿ ಬಿಡಿ’ ಎಂಬ ಘೋಷಣೆಯೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಏಪ್ರಿಲ್ 15ರ ಒಳಗೆ ಜನ ಬೆಂಬಲದೊಂದಿಗೆ ಬೃಹತ್ ಜಾಥಾವನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಹೊದ್ದೂರು ರೈತ ಸಂಘ ಅಧ್ಯಕ್ಷ ಜಗತ್ ತಿಮ್ಮಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರ ಅಸ್ತಿತ್ವವನ್ನು ಪ್ರಶ್ನಿಸುವ ಕೆಲಸವಾಗುತ್ತಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷವೇ ಮುಖ್ಯ ಕಾರಣ. ಅತಿಕ್ರಮಣ ಮಾಡಿ ಶೆಡ್ ನಿರ್ಮಿಸಿ ವಾಸ ಮಾಡುವವರಿಗೆ ಮೂಲಸೌಕರ್ಯವನ್ನು ನೀಡಲಾಗುತ್ತಿದೆ ಎಂದು ಆರೋಪ ಮಾಡಿದರು.

ರೈತರ ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಪ್ರವೀಣ್, ಅತಿಕ್ರಮಣ ಮಾಡಿದ ಜಾಗದ ಬಗ್ಗೆ ಭೂ ವಿಜ್ಞಾನಿಗಳಿಂದ ಮಾಹಿತಿ ಸಂಗ್ರಹಿಸಿದ್ದು, ಅವರನ್ನು ತೆರವುಗೊಳಿಸಲಾಗುವುದು ಎಂದರು.

ಕಂದಾಯ ಅಧಿಕಾರಿ ಚಂದ್ರ, ಗ್ರಾಮ ಲೆಕ್ಕಿಗ ಸಂತೋಷ್ ಪಾಟೀಲ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎ. ಹಂಸ, ಗ್ರಾಮ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ಇದ್ದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ತೆಕ್ಕಡೆ ಶೋಭಾ ಮೋಹನ್, ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ಟಿಮಾಡ ವಿಜಯ್ ಬೋಪಯ್ಯ, ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಜಿಲ್ಲಾ ಕಾರ್ಯದರ್ಶಿ ಚೆಪ್ಪುಡಿರ ಕಾರ್ಯಪ್ಪ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಸೋಮವಾರಪೇಟೆ ತಾಲೂಕು ರೈತ ಸಂಘ ಅಧ್ಯಕ್ಷ ದಿನೇಶ್, ವಿರಾಜಪೇಟೆ ರೈತ ಸಂಘ ಅಧ್ಯಕ್ಷ ಭವಿಕುಮಾರ್, ಕಲಿಯ ಕಾಫಿ ಬೆಳೆಗಾರ ಬಡುವಂಡ್ರ ದೇವಿ ಸುಬ್ರಮಣಿ, ಚೆಟ್ಟಿಮಾಡ ವಸಂತ ಕಾರ್ಯಪ್ಪ, ಕೂಡಂಡ ರಾಜೇಂದ್ರ ಅಯ್ಯಮ್ಮ, ಗ್ರಾಮ ರೈತ ಸಂಘದ ಕಾರ್ಯಾಧ್ಯಕ್ಷ ಪಟ್ರಕೋಡಿ ವಾಸುದೇವ್, ಕಾರ್ಯದರ್ಶಿ ಸುನಿ ಲಕ್ಷ್ಮಣ್, ಪದಾಧಿಕಾರಿಗಳಾದ ಮೇಕಂಡ ಸುನಿಲ್ ಮಾದಪ್ಪ, ಚೆಟ್ಟಿಮಾಡ ಲೋಕೇಶ್, ಚೌರಿರ ಸೋಮಣ್ಣ, ನಿಕನ್, ಅಮ್ಮನoಡ ಯು. ಪುನಚ್ಚ, ಚೆಟ್ಟಿಮಾಡ ವೀಣ್, ಕೋರನ ರವಿ, ರಾಘವೇಂದ್ರ ಹಾಗೂ ರೈತ ಸಂಘದ ಸದಸ್ಯರು ಇರಿದ್ದರು.

ಚೌರಿರ ರಮೇಶ ಪ್ರಾರ್ಥಿಸಿದರು. ಮಾಜಿ ಸೈನಿಕ, ಕಾಫಿ ಬೆಳೆಗಾರ ಚೌರಿರ ಉದಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೂಡಂಡ ಸಾಬಾ ಸುಬ್ರಮಣಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.