ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪ
ಆಡಳಿತ ಮಂಡಳಿಯ ನಿರ್ದೇಶಕರ ಪರಸ್ಪರ ಒಗ್ಗಟ್ಟು, ಗಟ್ಟಿ ನಿರ್ಧಾರ, ರೈತರ ನಿರಂತರವಾದ ಸಹಕಾರ ನಷ್ಟದಲ್ಲಿದ್ದ ಬ್ಯಾಂಕನ್ನು ಲಾಭದತ್ತ ನಡೆಸಿದೆ. ಆದ್ದರಿಂದ ನೂತನ ಕಟ್ಟಡ ನಿರ್ಮಾಣ ಮಾಡಲು ಸಾಧ್ಯವಾಗಿದೆ ಎಂದು ಕೊಪ್ಪ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷದೆ ಎಚ್.ಎಸ್. ಇನೇಶ್ ಹೇಳಿದರು.ಭಾನುವಾರ ಪಟ್ಟಣದ ಪರಭವನದಲ್ಲಿ ಪಿಕಾರ್ಡ್ ಬ್ಯಾಂಕ್‌ನ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕೊಪ್ಪ ಪಿಕಾರ್ಡ್ ಬ್ಯಾಂಕ್ 1930ರಲ್ಲಿ ಆರಂಭಗೊಂಡು 152 ಸದಸ್ಯರನ್ನು ಹೊಂದಿತ್ತು. ಪ್ರಸ್ತುತ ವರ್ಷದಲ್ಲಿ 4045 ಜನ ಸದಸ್ಯರನ್ನು ಹೊಂದಿದೆ. ಹೊಸಕೊಪ್ಪ ಕೃಷ್ಣರಾಯರು ರೈತರಿಗೆ ಉಪಯೋಗವಾಗಬೇಕು ಎಂಬ ಸದುದ್ದೇಶದಿಂದ ಈ ಬ್ಯಾಂಕ್ ಸ್ಥಾಪನೆ ಮಾಡಿದರು ಎಂದು ತಿಳಿಸಿದರು.
ಇತ್ತೀಚಿನ ಕೆಲವು ವರ್ಷಗಳಲ್ಲಿ ಬ್ಯಾಂಕ್ ಏಳು-ಬೀಳುಗಳನ್ನು ಕಂಡಿದೆ. ನಬಾರ್ಡ್ನಲ್ಲಿ ನಾವು ಸುಸ್ಥಿದಾರರಾಗಿದ್ದ ಕಾರಣ ಆ ಸಮಯದಲ್ಲಿ ರೈತರಿಗೆ ನಿರೀಕ್ಷೆಯ ಮಟ್ಟದಲ್ಲಿ ಸಾಲ ಸೌಲಭ್ಯ ನೀಡಲು ಸಾಧ್ಯವಾಗುತ್ತಿರಲಿಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಬಿ.ಎಸ್ ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಜಾರಿಗೊಳಿಸಿದ ಅಸಲು ಕಟ್ಟಿದರೇ ಬಡ್ಡಿ ಮನ್ನಾ ಯೋಜನೆಯಿಂದ ರೈತರು ಹೆಚ್ಚು ಲಾಭವನ್ನು ಪಡೆದುಕೊಂಡರು ಎಂದರು.ಇದರ ಫಲವಾಗಿ ಬ್ಯಾಂಕ್ ಕೂಡ ಲಾಭದತ್ತ ಮುಖ ಮಾಡಿದೆ. ಕಳೆದ ವರ್ಷದಲ್ಲಿ ಶೇ.86 ರಷ್ಟು ವಸೂಲಾತಿ ಮಾಡಿದ ಕಾರಣ ನಮ್ಮ ಬ್ಯಾಂಕ್ ರಾಜ್ಯದಲ್ಲಿ ಉತ್ತಮ ಬ್ಯಾಂಕ್ ಎಂದು ಗುರುತಿಸಿಕೊಂಡಿದೆ. 90 ವರ್ಷಗಳ ಹಳೆಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಬ್ಯಾಂಕಿನ ಕಟ್ಟಡದ ಸ್ಥಿತಿಗತಿಗಳನ್ನು ಶಾಸಕ ಟಿ.ಡಿ. ರಾಜೇಗೌಡರ ಗಮನಕ್ಕೆ ತಂದಾಗ ಶಾಸಕರು ತಮ್ಮ ಅನುದಾನದಲ್ಲಿ ₹10ಲಕ್ಷ, ತಾವೇ ಅಧ್ಯಕ್ಷರಾಗಿರುವ ಕೆ.ಆರ್.ಇ.ಡಿ.ಎಲ್.ನಿಂದ ₹20 ಲಕ್ಷ ಅನುದಾನವನ್ನು ಕೊಡಿಸಿದ ಕಾರಣ ನೂತನ ಕಟ್ಟಡ ನಿರ್ಮಾಣ ಸಾಧ್ಯವಾಗಿದೆ ಎಂದರು.ಎಚ್ಎ. ರವಿಕಾಂತ್ ಮಾತನಾಡಿ, ಪಿಕಾರ್ಡ್ ಬ್ಯಾಂಕ್‌ನ ಸ್ಥಾಪಕರಾದ ಹೊಸಕೊಪ್ಪ ಕೃಷ್ಣರಾಯರ ಬಗ್ಗೆ ಮಾಹಿತಿ ನೀಡಿದರು. ಶೃಂಗೇರಿ ಶ್ರೀ ಮಠದ ವೇದಬ್ರಹ್ಮ ಕೃಷ್ಣ ಭಟ್ ಮಾತನಾಡಿ, ಪರಹಿತ, ಪರರ ಶ್ರೇಯಸ್ಸು ಬಯಸುವುದನ್ನು ಸನಾತನ ಧರ್ಮ ತಿಳಿಸುತ್ತದೆ. ರೈತರ ಏಳಿಗೆಯನ್ನು ಬಯಸುವ ಪಿಕಾರ್ಡ್ ಬ್ಯಾಂಕ್ ಮುಂದಿನ ದಿನದಲ್ಲಿ ಇನ್ನಷ್ಟು ಕೃಷಿಕರಿಗೆ ನೆರವಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರು ಹಾಗೂ ಸಹಕಾರಿ ಧುರೀಣರನ್ನು ಸನ್ಮಾನಿಸಿ ಗೌರವಿಸಲಾಯಿತು.ಬಾಳೆಮನೆ ನಟರಾಜ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್. ರಾಮಸ್ವಾಮಿ, ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಹರೀಶ್ ವಿ, ನಿರ್ದೇಶಕರಾದ ಸತೀಶ್ ಅದ್ದಡ, ಶ್ರೀನಿವಾಸ್ ಕೊಡ್ರು, ಸಾಯಿನಾಥ್ ಕೆ, ಬಡಿಯಣ್ಣ ಎಚ್.ಎಂ, ರುಕ್ಮಿಣಿ, ಎನ್.ಎಲ್. ನಾಗೇಶ್, ನಾಗರತ್ನ ಸಿ, ಚಂದ್ರಕಾಂತ್, ಬಡಿಯಣ್ಣ, ನಾರಾಯಣ ಪೂಜಾರಿ, ಸಂತೋಷ್, ವಿಷಯ ಪರಿಣಿತ ನಿರ್ದೇಶಕ ಜೆ.ಎಂ. ಹರ್ಷಮಾಜಿ, ಅಧ್ಯಕ್ಷ ಎಚ್.ಕೆ. ಪ್ರಶಾಂತ್ ಮುಂತಾದವರಿದ್ದರು.