12ರಂದು ಕೋಟೆನಾಡು ಚಿತ್ರದುರ್ಗದಲ್ಲಿ ಏಕತಾ ನಡಿಗೆ

| Published : Nov 01 2025, 01:15 AM IST

12ರಂದು ಕೋಟೆನಾಡು ಚಿತ್ರದುರ್ಗದಲ್ಲಿ ಏಕತಾ ನಡಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಏಕತಾ ನಡಿಗೆ ಕುರಿತು ಸಂಸದ ಗೋವಿಂದ ಕಾರಜೋಳ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಭಾರತದ ಸ್ವಾತಂತ್ರ ಹೋರಾಟದಲ್ಲಿ ಹಾಗೂ ಏಕೀಕರಣದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಸರ್ದಾರ್ ವಲ್ಲಭಬಾಯಿ ಪಟೇಲ್‌ರವರ 150ನೇ ಜನ್ಮದಿನಾಚರಣೆ ಅಂಗವಾಗಿ ಏಕತೆಯ ಸಂದೇಶ ಸಾರಲು ನ.12 ರಂದು ಬೆಳಗ್ಗೆ 8 ಗಂಟೆಗೆ ಕನಕ ವೃತ್ತದಿಂದ ಚಳ್ಳಕೆರೆ ಗೇಟ್ ವರೆಗೂ ನಗರದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಸಂಸದ ಗೋವಿಂದ ಎಂ.ಕಾರಜೋಳ ಮನವಿ ಮಾಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಸರ್ದಾರ್ ವಲ್ಲಭಬಾಯಿ ಪಟೇಲ್ ಭಾರತ ದೇಶ ಕಂಡ ಅಪ್ರತಿಮ ದೇಶಭಕ್ತ, ಪ್ರಥಮ ಉಪಪ್ರಧಾನಿ ಹಾಗೂ ಗೃಹ ಸಚಿವರಾಗಿದ್ದರು. ಅವರ 150ನೇ ಜನ್ಮದಿನಾಚರಣೆಯನ್ನು ಸರ್ಕಾರ ದೇಶಾದ್ಯಂತ ಅಭಿಯಾನದ ರೀತಿಯಲ್ಲಿ ಆಚರಿಸಲು ಸಿದ್ಧತೆ ನಡೆಸಿದೆ. ಅಭಿಯಾನವನ್ನು ಕಳೆದ ಅಕ್ಟೋಬರ್ 6 ರಂದು ಈಗಾಗಲೆ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಡಾ.ಮನ್ಸುಖ್ ಮಾಂಡವೀಯ ರವರು ಉದ್ಘಾಟಿಸಿದ್ದಾರೆ. ಛಿದ್ರಗೊಂಡ ಭಾರತವನ್ನು ಏಕೀಕರಣಗೊಳಿಸಲು ಹೋರಾಡಿದ ವ್ಯಕ್ತಿಗೆ ಗೌರವ ಸಲ್ಲಿಸಲು ಇದು ನಮ್ಮೆಲ್ಲರಿಗೂ ಒಂದು ಉತ್ತಮ ಅವಕಾಶವಾಗಿದೆ. ಸರ್ದಾರ್ ಪಟೇಲ್‌ರವರು ಭಾರತದ ಉಕ್ಕಿನ ಮನುಷ್ಯ ಎಂದು ಜನಜನಿತವಾಗಿದೆ. ಭಾರತ ಎಂದೆಂದಿಗೂ ಒಂದೇ, ಅವಿಭಾಜ್ಯವಾಗಿಯೇ ಉಳಿಯುತ್ತದೆ ಎಂದು ಪಟೇಲ್‌ರವರು ಬಲವಾಗಿ ನಂಬಿದ್ದರು. ಅವರಂತೆಯೇ ಪ್ರಧಾನಿ ನರೇಂದ್ರ ಮೋದಿಯವರು ಇಂದು ವಿಕಸಿತ ಭಾರತ್-2047ರ ದೃಷ್ಟಿಕೋನದ ಮೂಲಕ ಮುಂದಕ್ಕೆ ಸಾಗಿದ್ದಾರೆ. ಅಭಿಯಾನದಲ್ಲಿ ದೇಶಾದ್ಯಂತ ಯುವಕರು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಅನೇಕ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವು ಕೇವಲ ಸ್ಪರ್ಧೆಗಳಲ್ಲ, ಸರ್ದಾರ್ ಪಟೇಲ್ ಅವರ ಏಕತೆಯ ಸಂದೇಶವನ್ನು ಪ್ರತಿಯೊಬ್ಬರ ಹೃದಯಕ್ಕೂ ತಲುಪಿಸುವ ಪ್ರಬಲ ಮಾರ್ಗವಾಗಿದೆ.

ಅಕ್ಟೋಬರ್ 31ರಿಂದ ನವೆಂಬರ್ 25 ರವರೆಗೆ ದೇಶಾದ್ಯಂತ ಜಿಲ್ಲಾ ಮಟ್ಟದಲ್ಲಿ ಪಾದಯಾತ್ರೆಗಳು ನಡೆಯಲಿವೆ. ಚಿತ್ರದುರ್ಗ ನಗರದಲ್ಲಿಯೂ ಬರುವ ನ.12 ರಂದು ಬೆಳಗ್ಗೆ 8 ಗಂಟೆಗೆ ಕನಕ ವೃತ್ತದಿಂದ ಚಳ್ಳಕೆರೆ ಗೇಟ್ ವರೆಗೂ ಪಾದಯಾತ್ರೆ ಆಯೋಜನೆ ಮಾಡಲಾಗಿದೆ. ಮೈ ಭಾರತ್ ಸ್ವಯಂ ಸೇವಕರು, ಎನ್‌ಸಿಸಿ ಕೆಡೆಟ್‌ಗಳು, ಎನ್‌ಎಸ್‌ಎಸ್ ಸ್ವಯಂ ಸೇವಕರು, ಸಾಮಾಜಿಕ ಮತ್ತು ಧಾರ್ಮಿಕ ಸಂಸ್ಥೆಗಳು ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಎಲ್ಲ ನಾಗರೀಕರು, ನಿವೃತ್ತ ಅಧಿಕಾರಿಗಳು, ಮಾಜಿ ಸೈನಿಕರು, ಕ್ರೀಡಾಪಟಗಳು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಪಾದಯಾತ್ರೆಗೂ ಮೊದಲು ಶಾಲಾ ಕಾಲೇಜುಗಳಲ್ಲಿ ಸರ್ದಾರ್ ಪಟೇಲ್ ರವರ ಜೀವನ ಮತ್ತು ಆದರ್ಶಗಳ ಕುರಿತು ಚರ್ಚಾ ಸ್ಪರ್ದೆಗಳು, ಪ್ರಬಂ ಸ್ಪರ್ದೆಗಳು ಹಾಗೂ ವಿಚಾರ ಸಂಕಿರಣಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತದೆ. ಮತ್ತು ಯುವಕರು ನಶೆ ಮುಕ್ತ ಭಾರತ ನಿರ್ಮಾಣಕ್ಕಾಗಿ ಪ್ರತಿಜ್ಞೆ ಮಾಡಲಿದ್ದಾರೆ.

ಇದೇ ಸಮಯದಲ್ಲಿ ಚಿತ್ರದುರ್ಗದಲ್ಲಿ ಸ್ವದೇಶಿ ಮೇಳವನ್ನು ಆಯೋಜನೆ ಮಾಡಲಾಗಿದೆ. ಯೋಗ ಮತ್ತು ಆರೋಗ್ಯ ಶಿಬಿರ ನಡೆಯಲಿವೆ. ಯುವಕರ ಭಾಗವಹಿಸುವಿಕೆಯೊಂದಿಗೆ ದೊಡ್ಡ ಪ್ರಮಾಣದಲ್ಲಿ ಸ್ವಚ್ಚತಾ ಅಭಿಯಾನಗಳನ್ನು ನಡೆಸಲಾಗುವುದು. ಉದ್ಯಾನವನಗಳಲ್ಲಿ ಬೀದಿ ನಾಟಕಗಳನ್ನು ಏರ್ಪಡಿಸಲಾಗುವುದು, ಇದರೊಂದಿಗೆ ಪರಿಸರ ಸಂರಕ್ಷಣೆಗಾಗಿ "ಏಕ್ ಪೇಡ್ ಮಾ ಕೆ ನಾಮ್ " ಅಭಿಯಾನವನ್ನು ತೀವ್ರವಾಗಿ ಪ್ರಚಾರ ಮಾಡಲಾಗುವುದು.

ಜಿಲ್ಲಾ ಮಟ್ಟದಲ್ಲಿ ಪಾದಯಾತ್ರೆ ಮುಗಿದ ನಂತರ ಪ್ರತಿ ವಲಯದಿಂದ 5 ಪಾದಯಾತ್ರಿಗಳು ರಸ್ತೆ ಮೂಲಕ ನವೆಂಬರ್ 25 ರಂದು ಸರ್ದಾರ್ ಪಟೇಲ್‌ರ ಹುಟ್ಟೂರು ಕರಮಸದ್ ಊರನ್ನು ತಲುಪಲಿದ್ದಾರೆ. ಸರ್ದಾರ್ ಪಟೇಲ್‌ರವರು ಭಾರತದ ನಕ್ಷೆಯನ್ನು ಒಂದುಗೂಡಿಸಿದರು-ನಾವು ಅವರ ಕನಸುಗಳನ್ನು ಒಂದುಗೂಡಿಸಬೇಕಾಗಿದೆ. ಅವರು ಪ್ರದೇಶಗಳನ್ನು ಒಂದು ಗೂಡಿಸಿದರು- ನಾವು ಹೃದಯಗಳನ್ನು ಮತ್ತು ಮನಸ್ಸುಗಳನ್ನು ಒಂದುಗೂಡಿಸಬೇಕಾಗಿದೆ. ಸರ್ದಾರ್ ಪಟೇಲರ ಅಖಂಡ ಭಾರತದ ಕನಸನ್ನು ಆತ್ಮನಿರ್ಭರ ಭಾರತ ಮತ್ತು ವಿಕಸಿತ ಭಾರತವನ್ನಾಗಿ ಪರಿವರ್ತಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಜಿಲ್ಲೆಯಲ್ಲಿ ನಡೆಯುವ ಏಕತಾ ನಡಿಗೆಯ ಸಂದೇಶ ಮತ್ತು ಅದರ ಸಾರವನ್ನು ಎತ್ತಿ ತೋರಿಸಲು ಮತ್ತು ದೇಶದ ಪ್ರತಿಯೊಬ್ಬ ನಾಗರಿಕರಿಗೂ ಏಕತೆಯ ಸಂದೇಶವನ್ನು ತಲುಪಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ಸಂಸದ ಗೋವಿಂದ ಕಾರಜೋಳ ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಅವರು ಮಾತನಾಡಿ, ದೇಶದ ಸಮಗ್ರತೆಗೆ ಹಾಗೂ ಏಕೀಕರಣಕ್ಕೆ ಶ್ರಮಿಸಿದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಅವರಿಗೆ ಗೌರವ ಸಲ್ಲಿಸಲು, ಅಭಿಯಾನವು ಉತ್ತಮ ಅವಕಾಶವನ್ನು ನಮಗೆಲ್ಲರಿಗೂ ಕಲ್ಪಿಸಿಕೊಟ್ಟಿದೆ. ನ.12 ರಂದು ನಗರದಲ್ಲಿ ಏರ್ಪಡಿಸಲಾಗಿರುವ ಪಾದಯಾತ್ರೆ ಏಕತಾ ನಡಿಗೆಯಲ್ಲಿ ಎಲ್ಲರೂ ಪಾಲ್ಗೊಂಡು, ದೇಶದ ಮೂಲೆ, ಮೂಲೆ, ಹಳ್ಳಿ ಹಳ್ಳಿಗಳಿಗೆ ಏಕತೆಯ ಸಂದೇಶ ಪ್ರತಿಧ್ವನಿಸುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ಉಪ ವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಶಿ, ಮೇರಾ ಯುವ ಭಾರತ್‌ನ ಜಿಲ್ಲಾ ಯುವಜನ ಅಧಿಕಾರಿ ಸ್ನೇಹಲತಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.