ರಾಜಯೋಗಿನಿ ದಾದಿ ಪ್ರಕಾಶಮಣಿ ಅವರ 19ನೇ ಪುಣ್ಯತಿಥಿಯ ಅಂಗವಾಗಿ ಮಂಗಳವಾರ ನಗರದ ರಾಂಪೂರೆ ಬಡಾವಣೆಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಕೇಂದ್ರದಲ್ಲಿ ವಿಶ್ವ ಬಂಧುತ್ವ ರಕ್ತದಾನ ಮಹಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್

ರಾಜಯೋಗಿನಿ ದಾದಿ ಪ್ರಕಾಶಮಣಿ ಅವರ 19ನೇ ಪುಣ್ಯತಿಥಿಯ ಅಂಗವಾಗಿ ಮಂಗಳವಾರ ನಗರದ ರಾಂಪೂರೆ ಬಡಾವಣೆಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಕೇಂದ್ರದಲ್ಲಿ ವಿಶ್ವ ಬಂಧುತ್ವ ರಕ್ತದಾನ ಮಹಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಡಿ.ಹೆಚ್.ಒ ಡಾ.ಧ್ಯಾನೇಶ್ವರ ನಿರಗೂಡಿ ಉದ್ಘಾಟಿಸಿ ಮಾತನಾಡಿ, ರಕ್ತದಾನವು ಮತ್ತೊಬ್ಬರ ಜೀವ ಉಳಿಸುವ ಮಹತ್ವದ ಮಾನವೀಯ ಸೇವೆಯಾಗಿದೆ. ಒಬ್ಬ ವ್ಯಕ್ತಿ ರಕ್ತದಾನದಿಂದ ಬದುಕುಳಿದು ಮುಂದೆ ಸಮಾಜಕ್ಕೆ ಅನೇಕ ಒಳ್ಳೆಯ ಕಾರ್ಯಗಳನ್ನು ಮಾಡಿದರೆ, ಆ ಪುಣ್ಯದ ಕಾರ್ಯದಲ್ಲಿ ರಕ್ತದಾನ ಮಾಡಿದವರ ಕೊಡುಗೆಯೂ ಸೇರಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕೆಂದರು.

ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ ಶೇಟಕಾರ ಮಾತನಾಡಿ, ಪ್ರತಿವರ್ಷ ಆಗಸ್ಟ್ 25ರಂದು ದಾದಿ ಪ್ರಕಾಶಮಣಿ ಅವರ ಪುಣ್ಯತಿಥಿಯ ಅಂಗವಾಗಿ ವಿಶ್ವ ಬಂಧುತ್ವ ರಕ್ತದಾನ ಮಹಾ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಭಾರತ ಹಾಗೂ ನೇಪಾಳದ ವಿವಿಧ ಸೇವಾ ಕೇಂದ್ರಗಳ ಮೂಲಕ ಈ ಅಭಿಯಾನವನ್ನು ವ್ಯಾಪಕವಾಗಿ ನಡೆಸಲಾಗುತ್ತಿದೆ ಎಂದರು.

ಕೇಂದ್ರ ಸೇವಾ ಕೇಂದ್ರದ ಸಂಚಾಲಕಿ ಸುಮಂಗಲಾ ಬಹೇನ ಮಾತನಾಡಿ, ರಕ್ತದಾನ ಮಾಡಿ–ಜೀವ ಉಳಿಸಿ, ಮರ ನೆಡಿ–ಪ್ರಕೃತಿ ಉಳಿಸಿ, ಸಹಾಯ ಮಾಡಿ–ಮಾನವೀಯತೆ ಬೆಳೆಸಿ ಎಂಬ ಸಂದೇಶದೊಂದಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

ನಶಾಮುಕ್ತ ಭಾರತ ಅಭಿಯಾನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸುನಂದಾ ಬಹೇನ್‌ ಅವರು ವೈದ್ಯಕೀಯ ಸಿಬ್ಬಂದಿ, ವಿವಿಧ ಇಲಾಖೆಗಳ ಸಿಬ್ಬಂದಿ ಹಾಗೂ ಅಧಿಕಾರಿಗಳು ನಶಾಮುಕ್ತ ಜೀವನದ ಪ್ರತಿಜ್ಞೆ ಸ್ವೀಕರಿಸಿದರು.

ಡಾ.ಕಿರಣ್, ಡಾ.ಮಹಾದೇವ, ಇಂಡಿಗೋ ಏರ್‌ಲೈನ್ಸ್ ಕ್ಯಾಪ್ಟನ್ ಆದಿತ್ಯ, ಈಶಾ ಸಹೋದರಿ, ಬ್ಯಾಂಕ್ ಮ್ಯಾನೇಜರ್, ತರಬೇತಿ ಸಂಯೋಜಕಿ ಬಿಕೆ ರುಚಿ, ಕಾಶಿನಾಥ ಕೊಂಡಾ, ಶಿವಕುಮಾರ್ ಸ್ವಾಮಿ, ಸೇರಿದಂತೆ ಬ್ರಹ್ಮಕುಮಾರಿ ಸಹೋದರಿಯರು, ಯುವಕರು, ವೈದ್ಯಕೀಯ ಸಿಬ್ಬಂದಿ ಉಪಸ್ಥಿತರಿದ್ದರು.