ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಗತ್ತಿನ ಎಲ್ಲಾ ರಾಷ್ಟ್ರಗಳು ಭಾರತವನ್ನು ಪ್ರೀತಿಸಲು ಭಾರತದ ಸಂಸ್ಕೃತಿ ಮತ್ತು ಸಂಸ್ಕಾರ ಕಾರಣ ಎಂದು ಮೂಲೆಗದ್ದೆ ಶ್ರೀ ಸದಾನಂದ ಶಿವಯೋಗಾಶ್ರಮದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.ಇಲ್ಲಿನ ವಿನೋಬಾ ನಗರದ ಶಿವಾಲಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಜಂಗಮ ಮಹಿಳಾ ಸಮಾಜದ 6ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಸಂಸ್ಕಾರ ಮತ್ತು ಸಂಸ್ಕೃತಿ ಮಹಿಳೆಯರ ವರವಾಗಿದೆ. ಭಾರತದ ಮಹಿಳೆಯರಿಗೆ ಜಗತ್ತಿನಲ್ಲಿಯೇ ಗೌರವವಿದೆ. ಭಾರತದಲ್ಲಿರುವ ಶ್ರೀಮಂತಿಕೆ ಅಥವಾ ಇಲ್ಲಿನ ಭೌಗೋಳಿಕ ಪರಿಸರವನ್ನು ಮೆಚ್ಚುವುದಿಲ್ಲ. ಆದರೆ, ಭಾರತದಲ್ಲಿ ದೇವತೆಗಳಿಗಿರುವಷ್ಟೇ ಗೌರವವನ್ನು ಸ್ತ್ರೀಯರಿಗೆ ನೀಡುತ್ತಾರೆ. ಸ್ತ್ರೀ ಮನೆಯಲ್ಲಿ ತಾಯಿಯಾಗಿ, ತಂಗಿಯಾಗಿ, ಸಹೋದರಿಯಾಗಿ ಕುಟುಂಬದ ಕಣ್ಣಾದರೆ ಹೊರಗಡೆ ಆರ್ಥಿಕ ಸ್ವಾವಲಂಬಿಯಾಗಿಯೂ ಇರುತ್ತಾಳೆ. ಜನನಿಯೇ ಮೊದಲ ಪಾಠ ಶಾಲೆ, ಜನನಿಯಿಂದ ಪಾಠ ಕಲಿತ ನಾವೇ ಧನ್ಯರು ಎಂದರು.
12ನೇ ಶತಮಾನದಲ್ಲಿ ಅಕ್ಕಮಹಾದೇವಿಯ ಚರಿತ್ರೆಯನ್ನು ನಾವೆಲ್ಲರೂ ಕಂಡಿದ್ದೇವೆ. ಶರಣರು ನಮ್ಮ ಕನ್ನಡ ನಾಡಿನ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ. ಅವರ ವಚನ ಗಳು ನಮಗೆ ದಾರಿದೀಪವಾಗಿವೆ. ನಮ್ಮ ಯುವಕ ಯುವತಿಯರು ಭಾರತೀಯ ಸಂಸ್ಕೃತಿಯನ್ನು ಗೌರವಿಸಬೇಕು. ಹೆಣ್ಣಿಗೆ ಎಲ್ಲಿ ಗೌರವವಿರುತ್ತದೆಯೋ ಅಲ್ಲಿ ದೇವತೆಗಳು ವಾಸಿಸುತ್ತಾರೆ ಎಂಬ ನಂಬಿಕೆ ನಮ್ಮದು. ಹಾಗಾಗಿಯೇ ಹೆಣ್ಣು ದೇವರ ಸಾಕ್ಷಾತ್ಕಾರ ಎಂದು ಹೇಳಿದರು.ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಮಹಿಳೆಯರು ಬಹುದೊಡ್ಡ ಜವಬ್ದಾರಿಯಲ್ಲಿದ್ದು, ಪುರುಷ ಸಮಾಜ ಕೂಡ ಅವರನ್ನು ಗೌರವಿಸಬೇಕು. ಮಹಿಳೆಯರು ಇಂದು ನಾಲ್ಕು ಗೋಡೆಗಳಿಂದ ಆಚೆ ಬಂದಿದ್ದಾರೆ. ಬದುಕನ್ನು ಕಟ್ಟಿಕೊಳ್ಳಲು ಸ್ವಾವಲಂಬನಿಗಳಾಗಲು ಪ್ರಯತ್ನಿಸುತ್ತಿದ್ದಾರೆ. ಪುರುಷ ಸಮಾಜ ಅವರನ್ನು ಗೌರವಿಸಬೇಕು. ಬಸವಣ್ಣನವರ ಕಾಲದಲ್ಲಿಯೇ ಮಹಿಳೆಯರಿಗೆ ಉನ್ನತ ಸ್ಥಾನವಿತ್ತು. ಇಂದಿನ ಹೊಸ ತಲೆಮಾರಿನಲ್ಲಿ ಮಹಿಳೆ ಪುರುಷರಷ್ಟೇ ಸಮರ್ಥವಾಗಿ ದೊಡ್ಡ ದೊಡ್ಡ ಜವಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಕೇವಲ ಮನೆಯಲ್ಲಿ ಮಾತ್ರ ಕೆಲಸ ಮಾಡದೆ ಹೊಸ ಜಗತ್ತಿನಲ್ಲೂ ದುಡಿದು ಕುಟುಂಬಕ್ಕೆ ನೆರವಾಗುತ್ತಿದ್ದಾರೆ ಎಂದರು.
ಇಂದು ಮಹಿಳೆಯರು ಕೂಡ ರಾಜಕೀಯವಾಗಿ ಮುನ್ನಡೆಗೆ ಬರುತ್ತಿದ್ದಾರೆ. ಈಗಾಗಲೇ ಸಂಸತ್‍ನಲ್ಲಿ ಶೇ.33ರಷ್ಟು ಮೀಸಲಾತಿ ಇದೆ. ಹಾಗೆಯೇ ಜಿ.ಪಂ. ತಾ.ಪಂ. ಸೇರಿದಂತೆ ಸ್ಥಳೀಯ ಸಂಸ್ಥೆಗಳು ಕೂಡ ಮಹಿಳೆಯರಿಗೆ ಮೀಸಲಾತಿ ಇದ್ದು, ಇದು ಸಂಪೂರ್ಣವಾಗಿ ಜಾರಿಗೆ ಬರಬೇಕಾಗಿದೆ ಎಂದು ತಿಳಿಸಿದರು.ಮಹಿಳಾ ಸಮಾಜಗಳು ಗಟ್ಟಿಗೊಳ್ಳಬೇಕು. ಸಾಧಕರಿಗೆ ಸನ್ಮಾನ ಮಾಡುವುದರಿಂದ ಮತ್ತಷ್ಟು ಒಳ್ಳೆಯ ಕೆಲಸಗಳನ್ನು ನಿರೀಕ್ಷೆ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮಹಿಳಾ ಜಂಗಮ ಸಮಾಜ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಇಡೀ ಜಿಲ್ಲೆಯಲ್ಲಿ ವಿಸ್ತಾರಗೊಂಡಿದೆ. ಇದು ಹೆಮ್ಮೆಯ ವಿಷಯ ಎಂದರು.
ಮತ್ತೊಮ್ಮೆ ಸಂಸದನಾದ ಮೇಲೆ ಅಭಿವೃದ್ಧಿ ಕೆಲಸಗಳಿಗೆ ಒತ್ತು ಕೊಡುತ್ತಿದ್ದೇನೆ. ಇಂದಿನಿಂದ ಚೆನೈಗೆ ರೈಲು ಸಂಚಾರ ಆರಂಭಗೊಳ್ಳಲಿದೆ. ಹಾಗೆಯೇ ಮುಂದಿನ 15 ದಿನಗಳಲ್ಲಿ ಶಿವಮೊಗ್ಗದಿಂದ ಚೆನೈಗೆ ವಿಮಾನಯಾನ ಆರಂಭವಾಗಲಿದೆ. ಇದರ ಜೊತೆಗೆ ರಸ್ತೆಗಳ ಅಭಿವೃದ್ಧಿ ಕೂಡ ನಡೆದಿದೆ. ಮತ್ತು ವೀರಶೈವ ಸಮುದಾಯದ ಭವನಗಳಿಗೆ, ಮಠಗಳಿಗೆ ಸುಮಾರು 50 ಕೋಟಿ ರು.ಗಳನ್ನು ನೀಡಲಾಗಿದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಮತ್ತು ಸಮಾಜದ ಹಿರಿಯ ದಂಪತಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಜಂಗಮ ಸಮಾಜದ ಜಿಲ್ಲಾಧ್ಯಕ್ಷ ಸುಜಯ ಪ್ರಸಾದ್, ಪದಾಧಿಕಾರಿಗಳಾದ ಶೈಲಜಾ, ಪ್ರೇಮಾ, ಸುಲೋಚನ, ಗಿರಿಜಾ ಪ್ರಭು ಕುಮಾರ್, ಸುಜಾತ ನಾಗರಾಜ್, ಸುನಂದ ಜೈದೇವಪ್ಪ, ಅರುಣಾ ಹಿರೇಮಠ್, ರೇಖಾ ವಾಗೀಶ್, ರಶ್ಮಿ, ಸುಜಾತ ಲಿಂಗರಾಜು ಪ್ರಮುಖರಾದ ಬಳ್ಳಕೆರೆ ಸಂತೋಷ್, ಮುರುಗೇಶ್ ಕುಸನೂರು, ಮಹೇಶ್ ಮೂರ್ತಿ ಸೇರಿದಂತೆ ವೇದಮೂರ್ತಿ, ಮರುಳೇಶ್, ರುದ್ರಯ್ಯ, ಸೇರಿದಂತೆ ಹಲವರಿದ್ದರು.