ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಕಾಲೇಜು ಅಥವಾ ವಿಶ್ವವಿದ್ಯಾಲಯದ ಜೀವನವು ಕೇವಲ ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದ್ದಲ್ಲ. ಇದು ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆ ಮತ್ತು ವ್ಯಕ್ತಿತ್ವ ವಿಕಸನದ ಪ್ರಯಾಣವಾಗಿದೆ ಎಂದು ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ.ಎಸ್ ಹೇಳಿದರು.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಗುರುವಾರ ಯುಕ್ತಿ- 2K25 ಎರಡು ದಿನಗಳ ರಾಷ್ಟ್ರೀಯ ಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆ, ಸಂಗೀತ, ಚರ್ಚೆ, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಸೇವಾ ಕಾರ್ಯಕ್ರಮಗಳಂತಹ ಸಹಪಠ್ಯ ಚಟುವಟಿಕೆಗಳು ನಮ್ಮ ಅಧ್ಯಯನಕ್ಕೆ ಪೂರಕವಾಗಿರುತ್ತವೆ. ಅಗತ್ಯ ಜೀವನ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತವೆ. ಇದಲ್ಲದೆ, ಈ ಚಟುವಟಿಕೆಗಳು ಮಾನಸಿಕ ಮತ್ತು ದೈಹಿಕ ಯೋಗಕ್ಷೇಮವನ್ನು ಸುಧಾರಿಸುತ್ತವೆ ಎಂದು ತಿಳಿಸಿದರು.ನಟ ಶ್ರೀ ವಿರಾಟ್ ಮಾತನಾಡಿ, ನಿಮ್ಮ ಕನಸುಗಳನ್ನು ಬೆನ್ನಟ್ಟಿ, ಎಲ್ಲೆಡೆಯಿಂದ ಒಳ್ಳೆಯದನ್ನು ಕಲಿಯಿರಿ. ಎಲ್ಲ ಭಾಷೆಗಳನ್ನು ಕಲಿಯಿರಿ. ಆದರೆ ಕನ್ನಡಕ್ಕೆ ತಾಯಿ ಸ್ಥಾನವಿರಲಿ. ಎಲ್ಲ ಭಾಷೆಗಳನ್ನು ಕಲಿಯುವುದರಿಂದ ನಾವು ಬುದ್ಧಿವಂತರಾಗಬಹುದು. ಆದರೆ ಮಾತೃಭಾಷೆಯನ್ನು ಕಲಿಯುವುದರಿಂದ ವ್ಯಕ್ತಿ ಹೃದಯವಂತನಾಗುತ್ತಾನೆ ಎಂದರು.ನಟಿ ಸಂಜನಾ ಮಾತನಾಡಿ, ಎಂಜಿನಿಯರ್ ವಿದ್ಯಾರ್ಥಿಯಾಗಿ ನೀವು ಹೆಮ್ಮೆ ಪಡಬೇಕು. ಏಕೆಂದರೆ ಎಂಜಿನಿಯರ್‌ಗಳು ಹೊಸ ಮತ್ತು ಅಭಿವೃದ್ಧಿ ಭಾರತದ ಶಿಲ್ಪಿಗಾರರಾಗಿ ಕೆಲಸ ಮಾಡುತ್ತಾರೆ. ಮೊದಲು ನೀವು ನಿಮ್ಮ ಕನಸುಗಳನ್ನು ಜೀವಂತವಾಗಿರಿಸಿಕೊಂಡು ನಿಮ್ಮ ಅಧ್ಯಯನವನ್ನು ಪೂರ್ಣಗೊಳಿಸಿ. ನಂತರ ನೀವು ಇಷ್ಟಪಟ್ಟ ಕ್ಷೇತ್ರವನ್ನು ಆಯ್ಕೆಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.ಈ ವೇಳೆ ಕುಲಸಚಿವರಾದ ಪ್ರೊ.ಬಿ.ಈ.ರಂಗಸ್ವಾಮಿ, ಪ್ರೊ.ಟಿ.ಎನ್.ಶ್ರೀನಿವಾಸ್, ಹಣಕಾಸು ಅಧಿಕಾರಿ ಡಾ.ಪ್ರಶಾಂತ ನಾಯಕ್ ಜಿ, ಯುಕ್ತಿ -25 ಸಂಯೋಜಕರಾದ ಪ್ರೊ.ರೋಹನ್ ಗುರವ್ ಮತ್ತು ಪ್ರೊ.ಚೈತ್ರಾ ಕೆ.ಎಂ ಮತ್ತಿತರರು ಉಪಸ್ಥಿತರಿದ್ದರು.2000 ವಿದ್ಯಾರ್ಥಿಗಳು ಭಾಗಿ
ಎರಡು ದಿನಗಳ ಈ ರಾಷ್ಟ್ರೀಯ ಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಉತ್ಸವದಲ್ಲಿ ಬೇರೆ ಬೇರೆ ರಾಜ್ಯಗಳಿಂದ ಹಾಗೂ ರಾಜ್ಯದ ಇತರೆ ವಿವಿಧ ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳಿಂದ ಸುಮಾರು 2000ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು, ತಾಂತ್ರಿಕ ಸ್ಪರ್ಧೆಗಳು, ಮನರಂಜನೆ ಸ್ಪರ್ಧೆಗಳು, ಮ್ಯಾನೇಜಮೇಂಟ್ ಸ್ಪರ್ಧೆಗಳು, ಪೇಪರ್ ಪ್ರೆಸೆಂಟೇಶನ್, ಕಲೆ ಹಾಗೂ ಸಂಗೀತ, ನೃತ್ಯಗಳಲ್ಲಿ ಭಾಗವಹಿಸಲಿದ್ದಾರೆ. ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ನಮ್ಮನ್ನು ದೈಹಿಕವಾಗಿ ಸದೃಢವಾಗಿರಿಸುತ್ತದೆ. ಆದರೆ, ಸಂಗೀತ, ನೃತ್ಯ ಮತ್ತು ಚಿತ್ರಕಲೆಯಂತಹ ಸೃಜನಶೀಲ ಚಟುವಟಿಕೆಗಳು ಒತ್ತಡ ನಿರ್ವಹಣೆ ಮತ್ತು ಮಾನಸಿಕವಾಗಿ ಸದೃಢರನ್ನಾಗಿ ಮಾಡುತ್ತವೆ. ಇಂದಿನ ವಿದ್ಯಾರ್ಥಿಗಳು ಇವರಂತೆ ಮೊದಲು ಅಧ್ಯಯನಕ್ಕೆ ಪ್ರಾಶಸ್ತ್ಯ ನೀಡಿ ನಂತರ ತಮ್ಮ ಕನಸಿನಂತೆ ವಿಭಿನ್ನ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಸಾಧನೆ ಮಾಡಬಹುದು. ಇಲ್ಲಿ ಪಡೆದ ಶಿಕ್ಷಣ ಆ ಸಾಧನೆಗೆ ನೆರವಾಗುತ್ತದೆ. ನಿಮ್ಮ ಜೀವನದಲ್ಲಿ ನೀವು ಏನೇ ಸಾಧಿಸಿದರೂ ಮೊದಲು ಮಾನವರಾಗಿರಿ.-ಪ್ರೊ.ವಿದ್ಯಾಶಂಕರ.ಎಸ್,
ವಿಟಿಯು ಕುಲಪತಿ.ರಾಜೇಶ್ ಕೃಷ್ಣನ್ ಗಾನಕ್ಕೆ ತಲೆ ತೂಗಿದ ಬೆಳಗಾವಿಗುರುವಾರ ಸಂಜೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಯುಕ್ತಿ 2K25 ರಾಷ್ಟ್ರಮಟ್ಟದ ಸಾಂಸ್ಕೃತಿಕ ಮತ್ತು ತಾಂತ್ರಿಕ ಉತ್ಸವದ ಅಂಗವಾಗಿ ವಿಟಿಯುನಲ್ಲಿ ಹಮ್ಮಿಕೊಂಡಿದ್ದ ಸಂಗೀತ ಸಂಜೆಯ ರಾಜೇಶ್ ಕೃಷ್ಣನ್ ಗಾನಕ್ಕೆ ಇಡೀ ಬೆಳಗಾವಿ ಮನಸೋತು ತಲೆತೂಗಿತು. ರಾಜೇಶ್ ಕೃಷ್ಣನ್ ಅವರು ನೂರು ಜನ್ಮಕೂ, ಉಸಿರೇ ಉಸಿರೇ, ಮುಂಗಾರು ಮಳೆ, ಒಂದೇ ಉಸಿರಂತೆ ಗೀತೆಗಳೊಂದಿಗೆ ಪುನೀತ್ ರಾಜಕುಮಾರ ಗೀತೆಯೊಂದಿಗೆ ಅವರು ನಂತರದಲ್ಲಿ ಪುನೀತ ಬಾಲ್ಯದ ನಮ್ಮ ಶಿವ ಕೈಲಾಸ ಸೇರಿಕೊಂಡನೋ ಮುಂತಾದ ಪ್ರಸಿದ್ಧ ಗೀತೆಗಳನ್ನ ಹಾಡಿ ನೆರೆದಿದ್ದ ಜನರನ್ನು ರಂಜಿಸಿದರು. ಈ ಸಂಗೀತ ಸಂಜೆಯಲ್ಲಿ ಕುಲಪತಿಗಳಾದ ಪ್ರೊ.ವಿದ್ಯಾಶಂಕರ.ಎಸ್, ಕುಲಸಚಿವ ಪ್ರೊ.ಬಿ.ಈ.ರಂಗಸ್ವಾಮಿ, ಮೌಲ್ಯ ಮಾಪನ ಕುಲಸಚಿವರಾದ ಪ್ರೊ.ಟಿ.ಎನ್.ಶ್ರೀನಿವಾಸ, ವಿಟಿಯು ಕಾರ್ಯಕಾರಿ ಪರಿಷತ್ ಸದಸ್ಯರಾದ ದಿಲೀಪ್ ಕೃಷ್ಣ, ಡಾ.ಯು.ಜೆ.ಉಜ್ವಲ, ಹಣಕಾಸು ಅಧಿಕಾರಿ ಪ್ರಶಾಂತ್ ನಾಯಕ್.ಜಿ ಹಾಗೂ ನಗರದ ಹಿರಿಯ ಅಧಿಕಾರಿಗಳು ಸೇರಿದಂತೆ ಸುಮಾರು 7000ಕ್ಕಿಂತ ಹೆಚ್ಚಿನ ಜನಸ್ತೋಮ ಸಂಗೀತ ಸುಧೆಯನ್ನು ಸವಿದರು. ಈ ಸಮಯದಲ್ಲಿ ವಿಟಿಯು ವತಿಯಿಂದ ರಾಜೇಶ್ ಕೃಷ್ಣನ್ ಮತ್ತು ಡಾ.ಶಮಿತಾ ಮಲ್ನಾಡ್ ಅವರಿಗೆ ಸನ್ಮಾನಿಸಲಾಯಿತು.