ಸಾರಾಂಶ
ವೈ. ರಾಮಕೃಷ್ಣ ಅವರು ವಿಧಾನಸಭೆಯಲ್ಲಿ ಮಾತನಾಡುವಂತಹ ಶೈಲಿಯೇ ಆಕರ್ಷಣೆಯಾಗಿತ್ತು.
ಕನ್ನಡಪ್ರಭ ವಾರ್ತೆ ಮೈಸೂರು
ಮಾಜಿ ಸಚಿವ ವೈ. ರಾಮಕೃಷ್ಣ ಅವರು ಅನೇಕ ಕ್ಷೇತ್ರಗಳಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿದ್ದು, ಅವರ ಸೇವೆ ಮತ್ತು ಹೋರಾಟ ಇಂದಿಗೂ ಸಹ ಸ್ಮರಣೀಯವಾಗಿದೆ ಎಂದು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.ಮೈಸೂರು ವಿವಿ ಡಾ. ಬಾಬೂ ಜಗಜೀವನರಾಮ್ ಅಧ್ಯಯನ, ಸಂಶೋಧನ ಮತ್ತು ವಿಸ್ತರಣ ಕೇಂದ್ರವು ಶುಕ್ರವಾರ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಆಯೋಜಿಸಿದ್ದ ವಿವೇಕಯುತ ಸಂಸದೀಯಪಟು ವೈ. ರಾಮಕೃಷ್ಣ ಅವರ ಸಾಧನೆಗಳು ಬದುಕು, ಸಂಘಟನೆ ಮತ್ತು ರಾಜಕಾರಣ ಕುರಿತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ವೈ. ರಾಮಕೃಷ್ಣ ಅವರು ವಿಧಾನಸಭೆಯಲ್ಲಿ ಮಾತನಾಡುವಂತಹ ಶೈಲಿಯೇ ಆಕರ್ಷಣೆಯಾಗಿತ್ತು. ರಾಜಕೀಯ ಪಕ್ಷಗಳು ಇವರನ್ನು ನಾಯಕನಾಗಿ ಮಾಡಿಕೊಳ್ಳಬೇಕೆಂದು ಪ್ರೋತ್ಸಾಹ ನೀಡುತ್ತಿದ್ದರು. ಇವರ ನಡವಳಿಕೆ, ಭಾಷಣಗಳು, ಕಮಿಟ್ ಮೆಂಟ್ ಗಳು ಇವರನ್ನು ಇಲ್ಲಿಯವರೆಗೂ ಕರೆ ತಂದಿತು. ಇವರು ಯಾರ ಜೊತೆ ಇದ್ದರೂ ರಾಯಲ್ ಆಗಿ ಸಿನ್ಸಿಯರ್ ಆಗಿ ಇರುತ್ತಿದ್ದರು ಎಂದು ಅವರು ಹೇಳಿದರು.ರಾಮಕೃಷ್ಣ ಅವರು ಕರ್ನಾಟಕದ ಜನಪ್ರಿಯ ರಾಜಕಾರಣಿಯಾಗಿದ್ದರು. ಸಾಮಾಜಿಕ ಸುಧಾರಣೆಗಾಗಿ, ಬದ್ಧತೆಗಾಗಿ, ಸಮಾಜದಲ್ಲಿ ಸುಧಾರಣೆ ತರಬೇಕೆಂದು ಹೋರಾಡಿದವರು ಹಾಗೂ ಸಾರ್ವಜನಿಕರ ಹಿತಾಸಕ್ತಿಗಾಗಿ ಶ್ರಮಿಸಿದವರು ಎಂದು ಅವರು ಸ್ಮರಿಸಿದರು.
ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಮಾಜಿ ಸಚಿವರಾದ ಬಿ. ಸೋಮಶೇಖರ್, ಕೋಟೆ ಎಂ. ಶಿವಣ್ಣ, ವಿಧಾನಪರಿಷತ್ತು ಸದಸ್ಯ ಎಚ್. ವಿಶ್ವನಾಥ್, ಮಾಜಿ ಸದಸ್ಯ ಆರ್. ಧರ್ಮಸೇನ, ಮತಂಗ ಫೌಂಡೇಶನ್ ಅಧ್ಯಕ್ಷ ಆರ್. ಲೋಕೇಶ್, ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಡಾ. ಬಾಬೂ ಜಗಜೀವನ್ ರಾಮ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಕೆ. ಸದಾಶಿವ ಮೊದಲಾದವರು ಇದ್ದರು.----
ಕೋಟ್...ಒಳಮೀಸಲಾತಿಗಾಗಿ ಹೆಚ್ಚು ಹೋರಾಟ ಮಾಡಿದವರು ವೈ. ರಾಮಕೃಷ್ಣ ಅವರು ಒಳಮೀಸಲಾತಿಗಾಗಿ ಉತ್ತಮವಾದಂತಹ ಕೊಡುಗೆ ನೀಡಿದ್ದಾರೆ. ಇಂತಹ ಲೀಡರ್ ಕರ್ನಾಟಕದಲ್ಲಿ ಹುಟ್ಟಿರುವುದು ನಮ್ಮ ಹೆಮ್ಮೆ. ನಾವೆಲ್ಲರೂ ಜಾತಿ ಜಾತಿ ಎಂದು ಬೇಧ ಭಾವ ಮಾಡದೆ ಎಲ್ಲರೂ ಒಗ್ಗಟ್ಟಾಗಿ ಸಮಬಾಳ್ವೆಯಿಂದ ಬದುಕಬೇಕು. ಜೊತೆಗೆ ಇಂತಹ ಮಹಾನ್ ವ್ಯಕ್ತಿಗಳ ಹೆಸರು ಸವಿನೆನಪಾಗಿ ಉಳಿಯುವಂತೆ ಮಾಡಬೇಕು.
- ಸಿ.ಎಂ. ಇಬ್ರಾಹಿಂ, ಕೇಂದ್ರದ ಮಾಜಿ ಸಚಿವ