ನಿಯಮ ಮೀರಿ ಬೇರೆ ಸ್ಥಳಗಳಿಗೆ ವರ್ಗಾವಣೆ: ಆರೋಪ

| Published : Jan 29 2025, 01:31 AM IST

ಸಾರಾಂಶ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರ ವರ್ಗಾವಣೆ ಅಥವಾ ನಿಯೋಜನೆಯನ್ನು ಮಾಡಲು ಸರ್ಕಾರದ ಅನುಮೋದನೆ ಪಡೆಯುವುದು ಕಡ್ಡಾಯಗೊಳಿಸಲಾಗಿರುತ್ತದೆ. ಆದರೆ, ಗ್ರಾಮ ಪಂಚಾಯ್ತಿ ಮಟ್ಟದ ಅಧಿಕಾರಿಗಳನ್ನು ಸರ್ಕಾರದ ನಿಯಮ ಮೀರಿ ಸರ್ಕಾರದ ಅನುಮೋದನೆ ಇಲ್ಲದೆ ಮೂಲ ಸ್ಥಾನದಿಂದ ಬೇರೆ ಬೇರೆ ಸ್ಥಳಗಳಿಗೆ ನಿಯೋಜನೆ, ವರ್ಗಾವಣೆ ಮಾಡಲಾಗಿರುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರ ವರ್ಗಾವಣೆ ಅಥವಾ ನಿಯೋಜನೆಯನ್ನು ಮಾಡಲು ಸರ್ಕಾರದ ಅನುಮೋದನೆ ಪಡೆಯುವುದು ಕಡ್ಡಾಯಗೊಳಿಸಲಾಗಿರುತ್ತದೆ. ಆದರೆ, ಗ್ರಾಮ ಪಂಚಾಯ್ತಿ ಮಟ್ಟದ ಅಧಿಕಾರಿಗಳನ್ನು ಸರ್ಕಾರದ ನಿಯಮ ಮೀರಿ ಸರ್ಕಾರದ ಅನುಮೋದನೆ ಇಲ್ಲದೆ ಮೂಲ ಸ್ಥಾನದಿಂದ ಬೇರೆ ಬೇರೆ ಸ್ಥಳಗಳಿಗೆ ನಿಯೋಜನೆ, ವರ್ಗಾವಣೆ ಮಾಡಲಾಗಿರುತ್ತದೆ ಎಂದು ಆರೋಪಿಸಿ ಜಿಪಂ ಉಪ ಕಾರ್ಯದರ್ಶಿ ಎಂ.ಬಾಬು ಅವರಿಗೆ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಚಾಮರಾಜು ಮನವಿ ಸಲ್ಲಿಸಿದರು.

ಈ ಕೂಡಲೇ ಸರ್ಕಾರದ ಅನುಮೋದನೆ ಇಲ್ಲದೆ ಮಾಡಿರುವ ನಿಯೋಜನೆ ಅಥವಾ ವರ್ಗಾವಣೆಯನ್ನು ರದ್ದುಗೊಳಿಸಿ ಎಲ್ಲಾ ಅಧಿಕಾರಿಗಳನ್ನು ಮೂಲ ಸ್ಥಾನಕ್ಕೆ ಹಿಂದಿರುಗಿಸಿ ಕರ್ತವ್ಯ ನಿರ್ವಹಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತೆ ಅರುಂಧತಿ ಅವರು ಜ.೧೫ರಂದು ಹೊರಡಿಸಿರುವ ಆದೇಶದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಜಿಲ್ಲೆಯ ಗ್ರಾಮ ಪಂಚಾಯ್ತಿ, ಜಿಲ್ಲಾ, ತಾಲೂಕು ಪಂಚಾಯ್ತಿ ಕಚೇರಿಗಳಲ್ಲಿ ಪಿಡಿಒ, ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನು ಮೂಲ ಸ್ಥಾನದಿಂದ ಬೇರೆ ಕಡೆಗೆ ವರ್ಗಾವಣೆ- ನಿಯೋಜನೆ ಮಾಡಿರುವುದನ್ನು ಸರ್ಕಾರದ ಆದೇಶದಂತೆ ರದ್ದುಪಡಿಸುವಂತೆ ಆಗ್ರಹಿಸುವಂತೆ ಒತ್ತಾಯಿಸಿದರು.

ನಾಳೆ ಪ್ರೊ.ಎಂ.ಕರೀಮುದ್ದೀನ್‌ ಸಂಸ್ಮರಣಾ ಗ್ರಂಥ ಬಿಡುಗಡೆ

ಕನ್ನಡಪ್ರಭ ವಾರ್ತೆ ಮಂಡ್ಯ

ನಡೆದಾಡುವ ಗ್ರಂಥಾಲಯ ಪ್ರೊ.ಎಂ.ಕರೀಮುದ್ದಿನ್ ಅವರ ಬಗ್ಗೆ ರಚಿಸಲಾಗಿರುವ ‘ಗಂಜಾಂ ಪ್ರೊ.ಎಂ.ಕರೀಮುದ್ದಿನ್’ ಸಂಸ್ಮರಣಾ ಗ್ರಂಥ ಬಿಡುಗಡೆ ಕಾರ್ಯಕ್ರಮ ಜ.೩೦ರಂದು ಸಂಜೆ ೪.೩೦ಕ್ಕೆ ಶ್ರೀರಂಗಪಟ್ಟಣದ ಓ ಶ್ರೀನಿಕೇತನ ಶಾಲೆಯಲ್ಲಿ ಆಯೋಜಿಸಲಾಗಿದೆ ಎಂದು ಯೋಗ ಶಿಕ್ಷಕ ಅಪ್ಪಾಜಿ ತಿಳಿಸಿದರು.

ಪ್ರೊ.ಎಂ.ಕರೀಮುದ್ದಿನ್‌ರ ಬಾಲ್ಯಾವಸ್ಥೆ, ಶೈಕ್ಷಣಿಕ, ವೃತ್ತಿಪರ, ವಿಚಾರ, ಚಿಂತನೆಗಳು ಹಾಗೂ ಅವರ ಜೀವನ ಆಧಾರಿತ ಗ್ರಂತವಾಗಿದ್ದು, ಅವರ ಜೀವನದ ಮಾಹಿತಿ ನೀಡುವ ೨೦೦ ಪುಟಗಳ ಗ್ರಂಥವಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಿವೃತ್ತ ಪ್ರಾಧ್ಯಾಪಕ ಡಾ.ಪಿ.ಕೆ.ರಾಜಶೇಖರ್ ಅಧ್ಯಕ್ಷತೆ ವಹಿಸುವರು. ಮೈಸೂರು ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಉದ್ಘಾಟಿಸುವರು. ಶಾಸಕ ಎ.ಬಿ.ರಮೇಶ್ ಬಾಬು ಬಂಡಿಸಿದ್ದೇಗೌಡ ಪುಸ್ತಕ ಬಿಡುಗಡೆ ಮಾಡುವರು, ಹಿರಿಯ ವಕೀಲ ಎಂ.ಪುಟ್ಟೇಗೌಡ ಅವರು ಕರೀಮುದ್ದಿನ್ ಕುರಿತು ಮಾತನಾಡುವರು. ರಾಜ್ಯ ಸಂಪನ್ಮೂಲ ಕೇಂದ್ರದ ನಿವೃತ್ತ ನಿರ್ದೇಶಕ ಪುಸ್ತಕದ ಕುರಿತು ಮಾತನಾಡುವರು ಎಂದರು.

ಶ್ರೀರಂಗಪಟ್ಟಣದ ಮುಸ್ಲಿಂ ಸೌಹಾರ್ದ ಒಕ್ಕೂಟದ ಪ್ರೊ.ಇಲ್ಯಾಸ್ ಅಹ್ಮದ್‌ಖಾನ್ ಹಾಗೂ ಹಿರಿಯ ವೈದ್ಯ ಡಾ.ಬಿ.ಸುಜಯ್‌ಕುಮಾರ್ ಉಪಸ್ಥಿತರಿರುವರು ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಡಾ.ಕೆ.ವೈ.ಶ್ರೀನಿವಾಸ್, ಜಯಶಂಕರ್, ಎಸ್.ಎಂ.ಶಿವಕುಮಾರ್ ಇದ್ದರು.