ಸಾರಾಂಶ
ನಿರಂತರ ಶ್ರಮ, ಪ್ರಯತ್ನವೊಂದಿದ್ದರೇ ಪ್ರಸಕ್ತ ಸವಾಲಿನ ಬದುಕಿನಲ್ಲಿ ಸಾರ್ವಜನಿಕ ವಲಯದಲ್ಲಿ ಬೇಕಾದ್ದನ್ನು ಸಾಧಿಸಬಹುದೆನ್ನುವುದಕ್ಕೆ ಶಿಕ್ಷಕ ವೃತ್ತಿಯಿಂದ ಜಿಲ್ಲಾಧಿಕಾರಿಯಾಗಿ ಉತ್ತಮ ಆಡಳಿತದೊಂದಿಗೆ ಜನಸ್ನೇಹಿಯಾಗಿರುವ ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರೇ ಮಾದರಿಯಾಗಿದ್ದಾರೆ ಎಂದು ರಾಜ್ಯ ಸರಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದರು.
ಗದಗ: ನಿರಂತರ ಶ್ರಮ, ಪ್ರಯತ್ನವೊಂದಿದ್ದರೇ ಪ್ರಸಕ್ತ ಸವಾಲಿನ ಬದುಕಿನಲ್ಲಿ ಸಾರ್ವಜನಿಕ ವಲಯದಲ್ಲಿ ಬೇಕಾದ್ದನ್ನು ಸಾಧಿಸಬಹುದೆನ್ನುವುದಕ್ಕೆ ಶಿಕ್ಷಕ ವೃತ್ತಿಯಿಂದ ಜಿಲ್ಲಾಧಿಕಾರಿಯಾಗಿ ಉತ್ತಮ ಆಡಳಿತದೊಂದಿಗೆ ಜನಸ್ನೇಹಿಯಾಗಿರುವ ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರೇ ಮಾದರಿಯಾಗಿದ್ದಾರೆ ಎಂದು ರಾಜ್ಯ ಸರಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದರು. ಅವರು ನಗರದ ಕರ್ನಾಟಕ ರಾಜ್ಯ ಸರಕಾರಿ ನೌಕರ ಭವನದಲ್ಲಿ 2022-23ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಗದಗ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ಸರಕಾರಿ ನೌಕರರ ವಾರ್ಷಿಕ ಮಹಾಸಭೆಯ ಉಪಸ್ಥಿತಿ ವಹಿಸಿ ಮಾತನಾಡಿದರು.
ಸಾಧಿಸುವ ಗುರಿಯ ಹಾದಿಯಲ್ಲಿ ಛಲದಿಂದಾಗಿ ನಿರಂತರ ಶ್ರಮ ಮತ್ತು ಪ್ರಯತ್ನದಿಂದ ಸಾಗಿದರೇ ಬೇಕಾದ ಸಾಧನೆ ಮಾಡಬಹುದು ಎನ್ನುವುದಕ್ಕೆ ಹಲವಾರು ಸಾಮಾಜಿಕ ವ್ಯಕ್ತಿತ್ವಗಳು ನಿದರ್ಶನಗಳಿವೆ, ಈಗಿನ ಜಿಲ್ಲಾಧಿಕಾರಿಗಳು ಮೊದಲಿಗೆ ಶಿಕ್ಷಕ ವೃತ್ತಿಯನ್ನು ಆರಂಭಿಸಿದರು. ಶಿಕ್ಷಕ ವೃತ್ತಿಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನ ಎದುರಿಸಿದ ಫಲವಾಗಿ ಅವರು ಗದಗ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಇಂದು ಮಾನವ ಸಮಸ್ಯೆಗಳ ಆಗರದಲ್ಲಿಯೇ ಬದುಕುತ್ತಿದ್ದಾನೆ. ಸಮಸ್ಯೆ ಇಲ್ಲದ ಮನುಷ್ಯ ಸೃಷ್ಟಿಯಲ್ಲಿಯೇ ಸಿಗಲ್ಲಾ, ಅವರವರಿಗೆ ಅವರದೇ ಆದ ಸಮಸ್ಯೆಗಳಿರುತ್ತವೆ ಎಂದರು. ಸಮಸ್ಯೆ ಹೊತ್ತು ಜೀವನ ನಡೆಸುವ ಅನಿವಾರ್ಯತೆಯಲ್ಲಿ ನಾವಿದ್ದೇವೆ, ಸಮಸ್ಯೆನು ಇದೆ, ಅದಕ್ಕೆ ಪರಿಹಾರನೂ ಇದೆ, ಸಮಸ್ಯೆ ಎಂದು ಹೆದರಿದರೇ ಅದು ನಮಗೆ ಸಾಯಿಸುತ್ತದೆ, ಅದಕ್ಕೆ ಪರಿಹಾರ ಕಂಡುಕೊಂಡು ಬದುಕಿದರೇ ಸಮಸ್ಯೆ ಸಾಯುತ್ತದೆ, ಸುಖ ದುಃಖ ಮಿಶ್ರಿತ ಜೀವನವಾಗಿದೆ. ಜೀವನದಲ್ಲಿ ಯಾವುದು ಶಾಶ್ವತವಲ್ಲ. ಎಲ್ಲವೂ ತಾತ್ಕಾಲಿಕವಾಗಿದೆ, ದೇಶದ ಭವಿಷ್ಯ ಮಕ್ಕಳ ಮೇಲೆ ಅವಲಂಬಿತವಾಗಿದೆ, ಮಕ್ಕಳು ಗುಣಾತ್ಮಕ ಶಿಕ್ಷಣದೊಂದಿಗೆ ಉಜ್ವಲ ಬದುಕು ರೂಪಿಸಿಕೊಳ್ಳಲಿ, ಉತ್ತಮ ಬದುಕು ಕಟ್ಟಿಕೊಂಡು ತಂದೆ ತಾಯಿಯ ಪಾಲನೆಯ ಮೂಲಕ ಹೆತ್ತವರ ಋಣವನ್ನು ತೀರಿಸುವ ಹೊಣೆಗಾರಿಕೆ ಮೆರೆಯಲು ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ರಾಜ್ಯ ಉಪಾಧ್ಯಕ್ಷ ರವಿ ಗುಂಜೀಕರ ಮಾತನಾಡಿ, ಸಿ.ಎಸ್.ಷಡಕ್ಷರಿ ಅವರ ನೇತೃತ್ವದಲ್ಲಿ ಸಂಘಟನೆ ಕ್ರಿಯಾಶೀಲವಾಗಿದೆ ಎಂದರು. ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಮಾತನಾಡಿ, ಸರಕಾರಿ ನೌಕರರ ಜೀವನ ನೆಮ್ಮದಿ ಮತ್ತು ಸಂತೋಷದಿಂದ ಕೂಡಿರುತ್ತದೆ ಎಂಬುದು ಸಮಾಜದ ನಿರೀಕ್ಷೆ ಆಗಿದೆ, ಆದರೇ ಸರಕಾರಿ ನೌಕರರು ಎದುರಿಸುತ್ತಿರುವ ಕರ್ತವ್ಯದ ಒತ್ತಡ ಮತ್ತು ಚೌಕಟ್ಟಿನ ಅವರ ಜೀವನ ಅವರಿಗೆ ಮತ್ತು ಅವಲಂಬಿತವಾದ ಅವರ ಪರಿವಾರಕ್ಕೆ ಗೊತ್ತು, ಸರಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಹಾಗೂ ರಾಜ್ಯ ಉಪಾಧ್ಯಕ್ಷ ರವಿ.ಎಲ್. ಗುಂಜೀಕರ ನೇತೃತ್ವದ ಸರಕಾರಿ ನೌಕರ ಸಂಘ ಭಾರಿ ಕ್ರಿಯಾಶೀಲವಾಗಿ ಸುಮಾರು 25 ಆದೇಶಗಳನ್ನು ರಾಜ್ಯ ಸರಕಾರದಿಂದ ಮಾಡಿಸುವ ಕಾರ್ಯ ಸಾಮಾನ್ಯವೇನಲ್ಲ ಎಂದರು.ಗದಗ ಜಿಲ್ಲಾ ಸರಕಾರಿ ನೌಕರ ವರ್ಗದವರ 2022-23 ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ದ್ವಿತಿಯ ಪಿಯುಸಿ ಉತ್ತಮ ಪ್ರತಿಭೆ ಮೆರೆದ 95 ವಿದ್ಯಾರ್ಥಿಗಳಿಗೆ ನಗದು ಮತ್ತು ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಸತ್ಕರಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸರಕಾರಿ ನೌಕರ ಸಂಘದ ಗೌರವಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ರಾಜ್ಯ ಪರಿಷತ್ ಸದಸ್ಯರಾದ ಡಾ. ಶರಣು ಗೋಗೇರಿ, ಕೆ.ಬಿ.ಕೊಣ್ಣುರ, ಸಿದ್ದಪ್ಪ ಲಿಂಗದಾಳ, ಎಸ್.ಎಫ್. ಸಿದ್ದನಗೌಡರ, ಪ್ರಲ್ಹಾದ ಗೆಜ್ಜಿ, ಆರ್.ಎಂ. ಹೊಲ್ತೊಕೋಟೆ, ಆರ್.ಎಸ್. ಬುರುಡಿ, ಎಸ್.ಎಸ್. ಸೋಮಣ್ಣ್ಣವರ, ವಿ.ಎಂ. ಹಿರೇಮಠ, ಪಿ.ಎಚ್.ಕಡಿವಾಲ, ಎಮ್.ಕೆ.ಲಮಾಣಿ, ಕುಮಾರ ಪೂಜಾರ, ಎಂ.ಎಸ್. ಕುಚಬಾಳ, ವಸಂತ ಕಲಕಂಬಿ, ಜಗದೀಶ ಮಡಿವಾಳರ, ನಾಗರಾಜ ಹಳ್ಳಿಕೇರಿ, ಶರಣಗೌಡ ಪಾಟೀಲ, ಡಾ. ಎಮ್.ವಿ. ಹಾದಿಮನಿ, ಡಿ.ಎಚ್. ಪಾಟೀಲ್, ಆನಂದ ಬನಪ್ಪಣ್ಣವರ, ವಿವಿಧ ಇಲಾಖೆಗಳ ನೌಕರ ಸಂಘದ ಪದಾಧಿಕಾರಿಗಳು, ನೌಕರ ವರ್ಗದವರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿದ್ದರು.