ಸಾರಾಂಶ
ಕನ್ನಡಪ್ರಭ ವಾರ್ತೆ ಔರಾದ್
ಪಟ್ಟಣದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಮಹತ್ವಕಾಂಕ್ಷಿ ಯೋಜನೆಗೆ ಸರ್ಕಾರದಿಂದ ಅನುದಾನ ಮಂಜೂರಾಗಿ ಎರಡು ವರ್ಷವಾಗಿ ಟೆಂಡರ್ ಪ್ರಕ್ರಿಯೆ ಮುಗಿದು ವರ್ಷವಾಗುತ್ತ ಬಂದರೂ ಗುತ್ತಿಗೆದಾರನ ಮೀನಾಮೇಷದಿಂದ ಯೋಜನೆಯೊಂದು ಜನರಿಂದ ದೂರವಾಗ್ತಿದೆ.ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಗ್ರಾಮದ ಕಾರಂಜಾ ಜಲಾಶಯದಿಂದ ಪೈಪ್‌ಲೈನ್ ಮೂಲಕ ಔರಾದ್ ಹಾಗೂ ಕಮಲನಗರ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವುದು ಅಲ್ಲದೆ ಈ ನಡುವೆ ಬರುವ 6 ಗ್ರಾಮಗಳಿಗೂ ಕುಡಿಯುವ ನೀರು ಪೋರೈಸಲು ಅಮೃತ ಯೋಜನೆಯ 2.0 ಅಡಿಯಲ್ಲಿ ಸರ್ಕಾರ ಒಟ್ಟು 84.82 ಕೋಟಿ ರು. ವೆಚ್ಚದ ಯೋಜನೆಯನ್ನು 2022ರಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಮಂಜೂರಾತಿ ಪಡೆದು ಟೆಂಡರ್ ಪ್ರಕ್ರಿಯೆ ಕೂಡ ಮುಗಿದಿದೆ.
ಯೋಜನೆ ಅನುಷ್ಠಾನದ ಹೊಣೆಗಾರಿಕೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ವಹಿಸಲಾಗಿತ್ತು. ಮಂಡಳಿ ಯೋಜನೆಯ ಟೆಂಡರ್ ಪ್ರಕ್ರಿಯೆ ಮುಗಿಸಿ ತುಮಕುರು ಮೂಲದ ಎಂಎನ್ ರಮೇಶ ಎಂಜಿನಿಯರಿಂಗ್ ಆ್ಯಂಡ್ ಕನ್ಸಟ್ರಕ್ಷನ್ ಅವರ ಹೆಸರಿಗೆ ಕಾಮಗಾರಿ ಆರಂಭಿಸಲು ಅನುಮತಿ ಪತ್ರ ಕೂಡ 19/01/2024 ರಂದೇ ನೀಡಿದ್ದಾರೆ ಆದರೆ ಗುತ್ತಿಗೆದಾರ ಇಲ್ಲಿಯವರೆಗೆ ಕಾಮಗಾರಿ ಆರಂಭಿಸುವದನ್ನು ಬಿಟ್ಟು ಅನಗತ್ಯ ವಿಳಂಬ ಮಾಡ್ತಿರುವುದು ಬೆಳಕಿಗೆ ಬಂದಿದೆ.ಸರ್ಕಾರ ಬದಲಾಗಿ ಈಗ ಸಿಎಂ ಸಿದ್ದರಾಮಯ್ಯ ಅರ ನೇತೃತ್ವದ ಸರ್ಕಾರ ಟೆಂಡರ್ ಪ್ರಕ್ರಿಯೆ ನಡೆಸಿದೆ. ಇನ್ನೇನು ಕಾಮಗಾರಿ ಆರಂಭಿಸಬೇಕು. ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೇನೆ ಬೇಸಿಗೆಯಲ್ಲಿ ಜನರಿಗೆ ನೀರಿನ ಸಮಸ್ಯೆ ಆಗ್ತದೆ. ತಕ್ಷಣ ಭೂಸ್ವಾಧೀನ ಕಾರ್ಯ ಮಾಡುವುದು. ಅಲ್ಲಲ್ಲಿ ಬರುವ ಅರಣ್ಯ ಇಲಾಖೆಯ ಅನುಮತಿಗಾಗಿ ಅನಗತ್ಯ ವಿಳಂಬ ಮಾಡಲಾಗ್ತಿದೆ ಇದೇ ರೀತಿ ವಿಳಂಬ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಿದ್ರೆ ಮುಂಬರುವ ದಿನಗಳಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.
ಸದ್ಯಕ್ಕೆ ಪಟ್ಟಣದಲ್ಲಿ ತೆಗಂಪೂರ್ ಕೆರೆ ನೀರು, ಬೋರಾಳ ನೀರು ಸರಬರಾಜಾಗ್ತಿದೆ. ಈ ನೀರು ಮಳೆಗಾಲದಲ್ಲಿಯೇ ಸಾಕಾಗ್ತಿಲ್ಲ. ಇನ್ನೂ ಬೇಸಿಗೆಯಲ್ಲಂತೂ ನಿವಾಸಿಗರು ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತೆ. ಸಧ್ಯಕ್ಕೆ ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡ್ತಿರುವ ಪಟ್ಟಣ ಪಂಚಾಯತ್ ನೀರಿನ ಕೊರತೆ ಇದೆ ಹೀಗಾಗಿ ಪ್ರತಿ ದಿನ ನೀರು ಬಿಡಲು ಸಾಧ್ಯವಾಗ್ತಿಲ್ಲ ಎಂದು ಪ.ಪಂ ಸದಸ್ಯ ಸಂತೋಷ ಪೋಕಲವಾರ್ ಹೇಳಿದರು.ಇನ್ನು, ಪಟ್ಟಣದಲ್ಲಿ ಹೆಚ್ಚಾಗ್ತಿರುವ ಜನಸಂಖ್ಯೆ ಹಾಗೂ ವಲಸಿಗರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ನೀರಿನ ಅಭಾವ ಹೆಚ್ಚಾಗ್ತಿದೆ ಕಾರಂಜಾ ಜಲಾಶಯದ ನೀರು ಸರಬರಾಜು ಯೋಜನೆ ಜಾರಿಯಾದ್ರೆ ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಪ.ಪಂ ಅಧ್ಯಕ್ಷೆ ಸರೂಬಾಯಿ ಘೂಳೆ ಹೇಳಿದರು.
ಯೋಜನೆ ಅನುಷ್ಠಾನಕ್ಕೆ ಅನಗತ್ಯ ವಿಳಂಬವೇಕೆ?ಇನ್ನು, ಈ ಯೋಜನೆಯ ಕಾಮಗಾರಿ ಆರಂಭವಾದ್ರೆ ಒಂದು ವರ್ಷ ಬೇಕು. ಈ ವರ್ಷದ ಬೇಸಿಗೆಯ ನೀರಿನ ಬವಣೆಯಾದ್ರೂ ಕಡಿಮೆಯಾಗುತ್ತೆ ಎನ್ನುವ ನಿರೀಕ್ಷೆ ಇಟ್ಟಕೊಂಡಿದ್ದ ನಿವಾಸಿಗರಲ್ಲಿ ನಿರಾಸೆ ಮೂಡುವಂತಾಗಿದೆ. ಅಷ್ಟಕ್ಕೂ ಸರ್ಕಾರ ಬದಲಾಗಿದೆ ಅಂತ ಯೋಜನೆ ಅನುಷ್ಠಾನಕ್ಕೆ ಅನಗತ್ಯ ವಿಳಂಬ ವಾಗ್ತಿ ದೆಯಾ..? ಅನುದಾನ ಬಿಡುಗಡೆಯಾಗಿ ಅಧಿಕಾರಿಗಳು ಕಾಮಗಾರಿ ಆರಂಭಿಸದೆ ಇರುವ ಗುತ್ತಿಗೆದಾರನ ವಿರುದ್ಧ ಕ್ರಮ ಯಾಕೆ ಕೈಗೊಳ್ತಿಲ್ಲ.? ಬಿಜೆಪಿ ಕಾಲದ ಯೋಜನೆ ಕಾಂಗ್ರೆಸ್ ಅವಧಿಯಲ್ಲಿ ಅನುಷ್ಠಾನ ಅನುಮಾನವಾ..? ಈ ಎಲ್ಲಾ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯಾಗ್ತಿವೆ.