ಕೆಲಸಕ್ಕೆ ಅನಗತ್ಯ ವಿಳಂಬ ಮಾಡಿದರೆ ಸಹಿಸಲ್ಲ: ಸಿದ್ಧರಾಜು

| Published : Sep 23 2024, 01:22 AM IST

ಸಾರಾಂಶ

ಸುರಪುರ ನಗರದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಲೋಕಾಯುಕ್ತ ಇಲಾಖೆಯಿಂದ ಸಾರ್ವಜನಿಕರಿಂದ ದೂರು ಹಾಗೂ ಕುಂದುಕೊರತೆ ಅರ್ಜಿ ಸ್ವೀಕಾರ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಸುರಪುರ

ಸರಕಾರಿ ಕಚೇರಿಗೆ ಸಾರ್ವಜನಿಕರು ಬಂದಾಗ ನ್ಯಾಯಯುತವಾದ ಕೆಲಸಕ್ಕೆ ಅನಗತ್ಯವಾಗಿ ವಿಳಂಬ ಮಾಡಿರುವುದರ ವಿರುದ್ಧ ದೂರು ನೀಡಿದರೆ, ತಕ್ಕ ಕ್ರಮ ಕೈಗೊಳ್ಳಲು ಕರ್ನಾಟಕ ಲೋಕಾಯುಕ್ತ ಕಚೇರಿಗೆ ವರದಿ ಸಲ್ಲಿಸಲಾಗುವುದು ಎಂದು ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಸಿದ್ಧರಾಜು ಬಳುರುಗಿ ಹೇಳಿದರು.

ನಗರದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಲೋಕಾಯುಕ್ತ ಇಲಾಖೆಯಿಂದ ಇತ್ತೀಚೆ ಹಮ್ಮಿಕೊಂಡಿದ್ದ ಸಾರ್ವಜನಿಕರಿಂದ ದೂರು ಹಾಗೂ ಕುಂದುಕೊರತೆ ಅರ್ಜಿ ಸ್ವೀಕಾರ ಸಭೆಯಲ್ಲಿ ಮಾತನಾಡಿದ ಅವರು, ಜನರಿಗೆ ಅನಗತ್ಯವಾಗಿ ಕಿರುಕುಳ ನೀಡುವಂತಿಲ್ಲ. ಸರಕಾರಿ ಹುದ್ದೆ ದುರ್ಬಳಕೆ ಮಾಡಿಕೊಂಡು ಅವ್ಯವಹಾರ ಮಾಡುತ್ತಿರುವುದು ಕಂಡು ಬಂದರೆ ಸಾರ್ವಜನಿಕರು ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಸರಕಾರಿ ಕಾಮಗಾರಿಗಳಲ್ಲಿ ಕಳಪೆ ಕಂಡುಬಂದಲ್ಲಿ ಹಾಗೂ ಸರಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಕೊಡಲು ಲಂಚ ಕೇಳಿದರೆ ಲೋಕಾಯುಕ್ತ ಕಚೇರಿ ಸಂಪರ್ಕಿಸಿ ದೂರು ನೀಡಬಹುದು. ತಾಲೂಕು ಮಟ್ಟದ ಅಧಿಕಾರಿಗಳು ತಪ್ಪದೇ ಸಭೆಯಲ್ಲಿ ಹಾಜರಿರಬೇಕು. ಸಮಸ್ಯೆಗಳಿದ್ದರೆ ಸ್ಥಳದಲ್ಲೇ ಇತ್ಯರ್ಥ ಪಡಿಸಬಹುದು. ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಕಚೇರಿಯಲ್ಲಿದ್ದು, ಸಭೆಗೆ ಬಾರದೆ ಅಧೀನ ಅಧಿಕಾರಿಗಳನ್ನು ಕಳುಹಿಸಿದರೆ ಸಹಿಸುವುದಿಲ್ಲ ಎಂದು ತಿಳಿಸಿದರು.

ಸಭೆಯಲ್ಲಿ ತಹಸೀಲ್ದಾರ್ ಎಫ್.ಎ.ಸರಕಾವಸ್, ತಾಪಂ ಇಒ ಬಸವರಾಜ ಸಜ್ಜನ್, ಟಿಎಚ್‌ಒ ಡಾ.ಆರ್.ವಿ. ನಾಯಕ, ಪೌರಾಯುಕ್ತ ಜೀವನ್ ಕಟ್ಟಿಮನಿ, ಲೋಕಾಯುಕ್ತ ಸಿಬ್ಬಂದಿಗಳಾದ ಮಹಮದ್ ಅಭೀದ್, ಸತೀಶಕುಮಾರ, ವಿನಯಕುಮಾರ, ವಿಕಾಸ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

12 ಅರ್ಜಿಗಳ ಸಲ್ಲಿಕೆ:

ಸಮೀಪದ ಪೇಠಾ ಅಮ್ಮಾಪುರದಿಂದ 9/11 ಜಾಗದ ಮಾಹಿತಿ ನೀಡಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಹೆಮ್ಮಡಗಿಯಲ್ಲಿ ಮಳೆಗಾಳಿಗೆ ಮನೆ ಬಿದ್ದರೂ ಪರಿಹಾರ ಕೊಟ್ಟಿಲ್ಲ, ಪಿಡಬ್ಲ್ಯೂಡಿ ಇಲಾಖೆಯು ಆರ್‌ಟಿಐ ನಡಿ ಅರ್ಜಿ ಸಲ್ಲಿಸದರು ಚಿಕ್ಕನಹಳ್ಳಿ, ಚಿಕ್ಕಹೆಬ್ಬಳ್ಳಿವರೆಗೆ ರಸ್ತೆ ಕಾಮಗಾರಿ ಮಾಹಿತಿ ನೀಡುತ್ತಿಲ್ಲ, ಬಾದ್ಯಾಪುರ ವ್ಯಕ್ತಿಯೊಬ್ಬರಿಗೆ ಪಿಡಿಪಿ ಪ್ರಮಾಣ ಪತ್ರ ನೀಡುತ್ತಿಲ್ಲ ಸೇರಿದಂತೆ ಒಟ್ಟು 12 ಅರ್ಜಿಗಳನ್ನು ಸಲ್ಲಿಸಲಾಗಿದೆ.