ಸಹಕಾರ ಸಂಘ ರಚನೆಗೆ ಅನಗತ್ಯ ತೊಂದರೆ

| Published : Nov 22 2025, 01:30 AM IST

ಸಾರಾಂಶ

ತುಮುಲ್ ನಿರ್ದೇಶಕಿ ಭಾರತಿ ಶ್ರೀನಿವಾಸ್ ನೇತೃತ್ವದಲ್ಲಿ ಗುಬ್ಬಿ ತಾಲೂಕಿನ ವಿವಿಧ ಗ್ರಾಮಗಳ ಜನರು ಪ್ರತಿಭಟನೆ

ಕನ್ನಡಪ್ರಭ ವಾರ್ತೆ, ತುಮಕೂರುಗುಬ್ಬಿ ತಾಲೂಕಿನ ಕೆಲ ಹಳ್ಳಿಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ರಚನೆಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಅನುಮೋದನೆ ನೀಡದೆ, ಅನಗತ್ಯ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ತುಮುಲ್ ನಿರ್ದೇಶಕಿ ಭಾರತಿ ಶ್ರೀನಿವಾಸ್ ನೇತೃತ್ವದಲ್ಲಿ ಗುಬ್ಬಿ ತಾಲೂಕಿನ ವಿವಿಧ ಗ್ರಾಮಗಳ ಜನರು ಪ್ರತಿಭಟನೆ ನಡೆಸಿದರು. ನಗರದ ಟೌನ್‌ಹಾಲ್ ಬಳಿಯ ಅಂಬೇಡ್ಕರ್ ಪ್ರತಿಮೆಯ ಬಳಿ ಸಮಾವೇಶಗೊಂಡ ಗುಬ್ಬಿ ತಾಲೂಕಿನ ವಿವಿಧ ಗ್ರಾಮಗಳ ಜನರು ಎ.ಆರ್. ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಕೂಡಲೇ ಗುಬ್ಬಿ ತಾಲೂಕಿನಲ್ಲಿ ಪ್ರಾಸ್ತಾವನೆ ಸಲ್ಲಿಸಿರುವ ಗ್ರಾಮಗಳಲ್ಲಿ ಹಾಲಿನ ಡೈರಿ ಸ್ಥಾಪಿಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಮನವಿಯನ್ನು ಸಲ್ಲಿಸಿದರು.ಈ ವೇಳೆ ಮಾತನಾಡಿದ ತುಮುಲ್ ನಿರ್ದೇಶಕರಾದ ಭಾರತಿ ಶ್ರೀನಿವಾಸ್, ತುಮಕೂರು ಡೈರಿಗೆ ಬರುವ ಹಾಲಿನಲ್ಲಿ ಗುಬ್ಬಿ ತಾಲೂಕಿನ ಹಾಲಿನ ಪ್ರಮಾಣ ಹೆಚ್ಚಾಗಿದೆ. ಹೆಚ್ಚು ಹಾಲು ಉತ್ಪಾದಿಸುತ್ತಿರುವ ಸುಮಾರು 32 ಉಪಕೇಂದ್ರಗಳಲ್ಲಿ 9 ಕೇಂದ್ರಗಳಲ್ಲಿ ಮುಖ್ಯ ಡೈರಿಗಳಾಗಿ ಪರಿವರ್ತಿಸಲು ಅನುಮತಿ ಕೋರಿ 6 ತಿಂಗಳ ಹಿಂದೆಯೇ ಸಹಕಾರ ಇಲಾಖೆಗಳ ಸಹಾಯಕ ನಿಬಂಧಕರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಒಂದು ಡೈರಿ ಸ್ಥಾಪನೆಗೂ ಅನುಮತಿ ನೀಡಿಲ್ಲ. ಕಡಬ ಮತ್ತಿತರ ಗ್ರಾಮಗಳಲ್ಲಿ ಗ್ರಾಮಸಭೆಗಳನ್ನು ನಡೆಸಿ, ಅಲ್ಲಿನ ತೀರ್ಮಾನದಂತೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರೂ ಅನುಮತಿ ನೀಡಲು ಮೀನಮೇಷ ಎಣಿಸಲಾಗುತ್ತಿದೆ. ಸಕಾರಣ ನೀಡದೆ ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿದೆ ಎಂದು ದೂರಿದರು.

ಕಡಬ ಗ್ರಾಮಕ್ಕೆ ಸಂಬಂಧಪಡದ ವ್ಯಕ್ತಿಯೊಬ್ಬರು ನೀಡಿದ ತಕರಾರು ಅರ್ಜಿಯನ್ನು ಮುಂದಿಟ್ಟುಕೊಂಡು ಹಲವರು ಗ್ರಾಮಗಳ ಡೈರಿ ತೆರೆಯಲು ಅನುಮತಿ ನಿರಾಕರಿಸುವ ಕೆಲಸವನ್ನು ಎ.ಆರ್.ರವರು ಮಾಡಿದ್ದಾರೆ.ನಿಯಮದ ಪ್ರಕಾರ ಖಾಸಗಿ ಡೈರಿಗೆ ಹಾಲು ಹಾಕುತ್ತಿರುವ ವ್ಯಕ್ತಿಯಿಂದ ತುಮುಲ್ ಡೈರಿ ನಿರ್ಮಾಣಕ್ಕೆ ಷೇರ ಸಂಗ್ರಹಿಸಲು ಅವಕಾಶವಿಲ್ಲ.ಆದರೆ ತುಮುಲ್‌ನ ಎಂ.ಡಿ ಮತ್ತು ಅಧಿಕಾರಿಗಳು ಯಾರದೋ ಮುಲಾಜಿಗೆ ಒಳಗಾದವಂತೆ ಖಾಸಗಿ ಡೈರಿಗೆ ಹಾಲು ಹಾಕುವವರಿಂದಲೂ ಷೇರು ಸಂಗ್ರಹಿಸಿ ಎಂದು ಮೌಖಿಕವಾಗಿ ಹೇಳುತ್ತಾರೆ.ಲಿಖಿತ ರೂಪದಲ್ಲಿ ಕೊಡಿ ಎಂದರೆ ನೀಡಲು ಹಿಂಜರಿಯುತ್ತಿದ್ದಾರೆ. ಇದರ ಹಿಂದೆ ಮೂರನೇ ವ್ಯಕ್ತಿಯ ಕೈವಾಡ ಇರುವುದು ಕಂಡು ಬರುತ್ತಿದೆ.ಎ.ಆರ್.ಅವರ ವರ್ತನೆ ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಡೈರಿಗಾಗಿ ಅರ್ಜಿ ಸಲ್ಲಿಸಿರುವ ೩೨ ಗ್ರಾಮಗಳ ಜನರು ತಮ್ಮ ಎಮ್ಮೆ, ಹಸು,ಕರುಗಳೊಂದಿಗೆ ಎ.ಆರ್.ಕಚೇರಿ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಭಾರತಿ ಶ್ರೀನಿವಾಸ್ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕೋಡಿಯಾಲ ಮಹದೇವ್,ಮಳೆನಹಳ್ಳಿ ನಟರಾಜು, ಲಿಂಗಮನಹಳ್ಳಿ ಚೇತನ್, ಚೇಳೂರು ಸೋಮೇಶ್, ಕಡಬ ದರ್ಶನ್, ಯೋಗೀಶ್‌ಗೌಡ ಎಂ.ಹೆಚ್.ಪಟ್ನ,ಗುರುರೇಣುಕರಾಧ್ಯ, ಸಣ್ಣ ರಂಗಯ್ಯ ಹೂವಿನಕಟ್ಟೆ, ಯೋಗೀಶ್, ಫಣೀಂದ್ರ ಬಿದರೆ ಹಳ್ಳ ಕಾವಲ್, ಆರೀಫ್ ಸೋನಿ ಲಿಂಗಮನಹಳ್ಳಿ ಹಾಗೂ ಗುಬ್ಬಿ ತಾಲೂಕಿನ ವಿವಿಧ ಹಳ್ಳಿಗಳ ಜನರು ಭಾಗವಹಿಸಿದ್ದರು.