ಸಾರಾಂಶ
ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ. (ಪಿಎಲ್‌ಡಿ ಬ್ಯಾಂಕ್) ಆಡಳಿತ ಮಂಡಳಿಗೆ ಮುಂದಿನ 5 ವರ್ಷಗಳ ಅವಧಿಗೆ ಜ.12ರ ಭಾನುವಾರ ಹೊನ್ನಾಳಿಯಲ್ಲಿ ಚುನಾವಣೆ ನಡೆಯಿತು.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ. (ಪಿಎಲ್‌ಡಿ ಬ್ಯಾಂಕ್) ಆಡಳಿತ ಮಂಡಳಿಗೆ ಮುಂದಿನ 5 ವರ್ಷಗಳ ಅವಧಿಗೆ ಜ.12ರ ಭಾನುವಾರ ಚುನಾವಣೆ ನಡೆಯಿತು.ಒಟ್ಟು 12 ಕ್ಷೇತ್ರಗಳ ಪೈಕಿ 7 ಕ್ಷೇತ್ರಕ್ಕೆ ಅವಿರೋಧವಾಗಿ ಆಯ್ಕೆ ನಡೆಯಿತು. ಉಳಿದ 5 ಕ್ಷೇತ್ರಗಳಿಗೆ ಪಟ್ಟಣದ ಶ್ರೀ ಮೃತ್ಯುಂಜಯ ಕಾಲೇಜಿನಲ್ಲಿ ಚುನಾವಣೆ ನಡೆಯಿತು. 5 ಕ್ಷೇತ್ರಗಳಿಂದ 432 ಅರ್ಹ ಮತದಾರರು, ಕುಂದೂರು ಕ್ಷೇತ್ರದಲ್ಲಿ 48 ಅನರ್ಹ ಮತದಾರರು ಹಾಗೂ ಹೊನ್ನಾಳಿ ಟೌನ್ ಕ್ಷೇತ್ರದಲ್ಲಿ 72 ಅನರ್ಹ ಮತದಾರರು ಮತದಾನ ಮಾಡಿದರು.
ಅನಂತರ ನಡೆದ ಮತ ಎಣಿಕೆ ಕಾರ್ಯದಲ್ಲಿ ನ್ಯಾಮತಿ ತಾಲೂಕಿನ ಗೋವಿನಕೋವಿ ಪ್ರವರ್ಗ ಬ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಎಚ್.ಡಿ. ಸುನೀಲ್ 24 ಮತಗಳನ್ನು, ತಾಲೂಕಿನ ಲಿಂಗಾಪುರ ಸಾಮಾನ್ಯ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಸಿ.ಎಚ್. ಸಿದ್ದಪ್ಪ 18 ಮತಗಳನ್ನು, ಹೊನ್ನಾಳಿ ಗ್ರಾಮಾಂತರ ಮಹಿಳಾ ಮೀಸಲು ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಆಶಾ ಚಿಕ್ಕೇರೆಹಳ್ಳಿ 25 ಮತ ಪಡೆದು ವಿಜೇತರಾದರು.ಫಲಿತಾಂಶಕ್ಕೆ ತಡೆ:
ತಾಲೂಕಿನ ಕುಂದೂರು ಸಾಮಾನ್ಯ ಕ್ಷೇತ್ರಕ್ಕೆ ಹಾಗೂ ಹೊನ್ನಾಳಿ ಟೌನ್ ಪ್ರವರ್ಗ 2ಎ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಅನರ್ಹ ಮತದಾರರು ಮತದಾನ ಮಾಡಿದ್ದಾರೆ ಎನ್ನುವ ಆರೋಪದ ಹಿನ್ನೆಲೆ ಈ ಎರಡು ಕ್ಷೇತ್ರಗಳ ಫಲಿತಾಂಶವನ್ನು ನ್ಯಾಯಾಲಯ ಆದೇಶದ ಮೇರೆಗೆ ತಡೆಹಿಡಿಯಲಾಗಿದೆ. ಜ.22ರಂದು ವಿಚಾರಣೆ ನಡೆಯಲಿದ್ದು, ನ್ಯಾಯಾಲಯ ಆದೇಶದ ಮೇರೆಗೆ ಈ ಎರಡು ಕ್ಷೇತ್ರಗಳ ಫಲಿತಾಂಶವನ್ನು ನಂತರ ಪ್ರಕಟಿಸಲಾಗುವುದು ಎಂದು ಚುನಾವಣಾಧಿಕಾರಿ ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿ ನವೀನ್‌ಕುಮಾರ್ ಹೇಳಿದರು.ಅವಿರೋಧ ಆಯ್ಕೆಯಾದವರು:
ಕೆ.ಜಿ.ರಮೇಶ್ ಚೀಲೂರು ಕ್ಷೇತ್ರ, ಜಿ.ಶಂಕರಪ್ಪ ನ್ಯಾಮತಿ ಕ್ಷೇತ್ರ, ಅನಸೂಯಮ್ಮ ಅರಕರೆ ಕ್ಷೇತ್ರ, ಕೆ.ಚೇತನ್ ಬೆಳಗುತ್ತಿ ಕ್ಷೇತ್ರ, ಎಸ್.ಕುಬೇರ ನಾಯ್ಕ ಬೆನಕನಹಳ್ಳಿ ಕ್ಷೇತ್ರ, ರುದ್ರಮ್ಮ ಸಾಸ್ವೇಹಳ್ಳಿ ಕ್ಷೇತ್ರ, ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಕೆ.ವಿ. ನಾಗರಾಜ್ ಹೊನ್ನಾಳಿ ಕ್ಷೇತ್ರದಿಂದ ಅವಿರೋಧ ಆಯ್ಕೆಯಾಗಿದ್ದಾರೆ.ಬ್ಯಾಂಕ್‌ಗೆ ನಡೆದ ಚುನಾವಣೆ ಹಾಗೂ ಮತ ಎಣಿಕೆ ಕಾರ್ಯ ಶಾಂತಿಯುತವಾಗಿ ನಡೆದಿದ್ದು, ಎಲ್ಲ ಮತದಾರರು, ಚುನಾವಣಾ ಸಿಬ್ಬಂದಿ, ರಕ್ಷಣಾ ಇಲಾಖೆಗೆ ಧನ್ಯವಾದಗಳನ್ನು ಸಲ್ಲಿಸಲಾಗುವುದು ಎಂದು ಚುನಾವಣಾಧಿಕಾರಿ ತಿಳಿಸಿದರು.
- - - -12ಎಚ್,ಎಲ್.ಐ3:ಹೊನ್ನಾಳಿ ಪಿಎಲ್‌ಡಿ ಬ್ಯಾಂಕ್‌ನ ಲಿಂಗಾಪುರ ಸಾಮಾನ್ಯ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ 18 ಮತಗಳ ಪಡೆದು, ವಿಜೇತರಾದ ಸಿ.ಎಚ್. ಸಿದ್ದಪ್ಪ ಅವರನ್ನು ಮುಖಂಡರು ಅಭಿನಂದಿಸಿದರು.