ಮಂಡ್ಯ ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯದ ನೂತನ ಅಧ್ಯಕ್ಷರಾಗಿ ಎಚ್.ಎಸ್.ದೀಪಕ್ ಹಾಗೂ ಉಪಾಧ್ಯಕ್ಷರಾಗಿ ಮಂಜುಳಾ ಕೃಷ್ಣೇಗೌಡ ಅವಿರೋಧ ಆಯ್ಕೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯದ ನೂತನ ಅಧ್ಯಕ್ಷರಾಗಿ ಎಚ್.ಎಸ್.ದೀಪಕ್ ಹಾಗೂ ಉಪಾಧ್ಯಕ್ಷರಾಗಿ ಮಂಜುಳಾ ಕೃಷ್ಣೇಗೌಡ ಅವರು ಅವಿರೋಧ ಆಯ್ಕೆಯಾದರು.೧೭ ಮಂದಿ ನಿರ್ದೇಶಕರಿರುವ ೨೦೨೫- ೨೦೩೦ನೇ ಸಾಲಿನ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ದೀಪಕ್ ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕೆ ಮಂಜುಳಾ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಅನಿತಾ ಅವರು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯನ್ನು ಅವಿರೋಧವಾಗಿ ಘೋಷಿಸಿದರು.
ನೂತನ ಅಧ್ಯಕ್ಷ ದೀಪಕ್ ಮಾತನಾಡಿ, ಎಲ್ಲರ ಸಹಕಾರದಿಂದ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಸಂಘದ ಹಿರಿಯರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.ಮಂಡ್ಯ ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯ ನಿರ್ದೇಶಕ ಬೇಲೂರು ಸೋಮಶೇಖರ್ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಶಾಸಕರಾದ ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಪಿ.ರವಿಕುಮಾರ್, ಉದಯ್ ಅವರ ಮಾರ್ಗದರ್ಶನದಲ್ಲಿ ಪಕ್ಷಾತೀತವಾಗಿ ಹಾಗೂ ೧೭ ಜನ ನಿರ್ದೇಶಕರ ಸಹಕಾರದೊಂದಿಗೆ ನಾಮನಿರ್ದೇಶಕ ಸದಸ್ಯರಾದ ದೀಪಕ್ ಅವರು ಕಳೆದ ಬಾರಿ ಅಧ್ಯಕ್ಷರಾಗಲು ಅವಕಾಶ ವಂಚಿತರಾಗಿದ್ದರು. ಈ ಬಾರಿ ದೀಪಕ್ ಅವರನ್ನು ಒಮ್ಮತವಾಗಿ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದೇವೆ ಎಂದರು.
ರಾಜ್ಯದಲ್ಲಿಯೇ ಶಿರಸಿ ಹಾಗೂ ಮಂಡ್ಯ ಅತ್ಯಂತ ಹಳೇಯದಾದ ಮುದ್ರಣ ಸಹಕಾರಿ ಸಂಸ್ಥೆಯಾಗಿದೆ. ಇಂತಹ ಮಂಡ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆಗೆ ಹೊಸ ಪ್ರಿಂಟಿಂಗ್ ಪ್ರೆಸ್ ತಂದಿದ್ದೇವೆ. ಈ ಸಹಕಾರ ಸಂಸ್ಥೆ ಉಳಿಯಬೇಕು. ಸಂಘದ ಹಿರಿಯರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಕೆಲಸ ಮಾಡಲು ನೂತನ ಆಡಳಿತ ಮಂಡಳಿ ಪ್ರಯತ್ನಪಡುತ್ತೇವೆ ಎಂದರು.ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯ ನಿಯಮಿತ ನಿರ್ದೇಶಕ ಎನ್.ದಾಸೇಗೌಡ, ಎಚ್.ಎಂ.ಸಿದ್ದರಾಜು, ಬಿ.ವಿ.ಹರೀಶ್, ಎ.ಆರ್.ರಾಜರಾಯಕ, ಕೆ.ಟಿ.ಗಿರೀಶ್, ಟಿ.ಬಿ. ಚೈತ್ರಾ , ಡಿ.ಕೃಷ್ಣೇಗೌಡ, ಪಿ.ಕೆ.ಚಂದ್ರಶೇಖರ್, ಉಮೇಶ್, ಟಿ.ಎಲ್.ನಾಗರಾಜ, ಎಂ.ಎನ್.ಶಿವನಾಗರಾಜು, ಬಿ.ಡಿ.ಧನಂಜಯ, ರೇಣುಕಾ, ಲತಾಮುರಳಿ ಅಭಿನಂದಿಸಿದರು.