ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (ಕೆಬಿಜೆಎನ್ನೆಲ್‌) ವ್ಯಾಪ್ತಿಯಲ್ಲಿ ಕೈಗೊಂಡಿರುವ ಸುಮಾರು 800 ಕಾಮಗಾರಿಗಳ ₹35-40 ಕೋಟಿ ಬಿಲ್ ಕಳೆದೆರಡು ವರ್ಷಗಳಿಂದ ಬಾಕಿಯುಳಿದಿದ್ದು, 400ಕ್ಕೂ ಹೆಚ್ಚು ಗುತ್ತಿಗೆದಾರರು ಸಾಲಗಾರರ ಕಾಟಕ್ಕೆ ಕಣ್ಣೀರಿನ ಬದುಕು ಸಾಗಿಸುತ್ತಿದ್ದಾರೆ. ಅ.17ರೊಳಗೆ ಹಣ ಬಿಡುಗಡೆಯಾಗದಿದ್ದರೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನೂರಾರು ಗುತ್ತಿಗೆದಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (ಕೆಬಿಜೆಎನ್ನೆಲ್‌) ವ್ಯಾಪ್ತಿಯಲ್ಲಿ ಕೈಗೊಂಡಿರುವ ಸುಮಾರು 800 ಕಾಮಗಾರಿಗಳ ₹35-40 ಕೋಟಿ ಬಿಲ್ ಕಳೆದೆರಡು ವರ್ಷಗಳಿಂದ ಬಾಕಿಯುಳಿದಿದ್ದು, 400ಕ್ಕೂ ಹೆಚ್ಚು ಗುತ್ತಿಗೆದಾರರು ಸಾಲಗಾರರ ಕಾಟಕ್ಕೆ ಕಣ್ಣೀರಿನ ಬದುಕು ಸಾಗಿಸುತ್ತಿದ್ದಾರೆ. ಅ.17ರೊಳಗೆ ಹಣ ಬಿಡುಗಡೆಯಾಗದಿದ್ದರೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನೂರಾರು ಗುತ್ತಿಗೆದಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯ ಶಹಾಪುರ ಸಮೀಪದ ಭೀಮರಾಯನಗುಡಿಯ ಕೆಬಿಜೆಎನ್ನೆಲ್‌ ಕಾರ್ಯಪಾಲಕ ಅಭಿಯಂತರ ಕಚೇರಿ ಎದುರು ನೆರೆದಿದ್ದ ಗುತ್ತಿಗೆದಾರರು ತಮ್ಮ ಸಂಕಷ್ಟವನ್ನು ಮಾಧ್ಯಮಗಳ ಮುಂದೆ ತೋಡಿಕೊಂಡರು.

"ನಾವು ಸಣ್ಣ ಪುಟ್ಟ ಗುತ್ತಿಗೆದಾರರು. ₹1 ಲಕ್ಷ, ₹1.5 ಲಕ್ಷ, ₹2 ಲಕ್ಷದಂತಹ ಸಣ್ಣ ಮೊತ್ತದ ಬಿಲ್‌ಗಳು ಕಳೆದೆರಡು ವರ್ಷಗಳಿಂದ ಬಾಕಿ ಇವೆ. ನಮ್ಮಲ್ಲಿ ಒಬ್ಬರು ಮಗಳ ಮದುವೆಗೆ ಇಟ್ಟಿದ್ದ ಹಣವನ್ನು ತಂದು ಕಾಮಗಾರಿ ಮಾಡಿ, ಈಗ ಮದುವೆಯನ್ನೇ ಮುಂದೂಡಿದ್ದಾರೆ. ಹಣವಿಲ್ಲದೆ ವಿಷ ಕುಡಿದು ಸಾಯುವ ಸ್ಥಿತಿಗೆ ಬಂದಿದ್ದಾರೆ ಎಂದು ಗುತ್ತಿಗೆದಾರ ನಾನಾಗೌಡ ಅಳಲು ತೋಡಿಕೊಂಡರು. ಎಂಡಿ ಅವರಿಗೆ ಅನೇಕ ಬಾರಿ ಮನವಿ ಮಾಡಿದರೂ ಬಿಲ್‌ ಪಾವತಿಯಾಗುತ್ತಿಲ್ಲ ಎಂದು ದೂರಿದರು.

ರೈತರಿಗೆ ನೀರು ಹೋಗುತ್ತಿಲ್ಲ, ಬೇಗ ಕೆಲಸ ಮುಗಿಸಿ ಎಂದು ಇಂಜಿನೀಯರುಗಳು ಒತ್ತಾಯ ಮಾಡಿದ್ದರಿಂದ ಅದನ್ನು ನಂಬಿ ನಾವು ಶೇ.10ರ ಬಡ್ಡಿಗೆ ಹೊರಗಿನಿಂದ ಸಾಲ ತಂದು ಕಟ್ಟಡ, ಕೆನಾಲ್, ಸಿಟಿ ರಸ್ತೆ, ಡ್ಯಾಮೇಜ್ ಕಾಮಗಾರಿಗಳನ್ನು ಮಾಡಿದ್ದೇವೆ. ಎರಡು ವರ್ಷಗಳಿಂದ ಕಚೇರಿಗೆ ಅಲೆದಾಡುತ್ತಿದ್ದೇವೆ. ಎಂಡಿ ಸಾಹೇಬರಿಗೆ, ಚೀಫ್‌ ಇಂಜಿನೀಯರ್‌ ಅವರಿಗೆ ನಾಲ್ಕೈದು ಬಾರಿ ಮನವಿ ಸಲ್ಲಿಸಿದ್ದೇವೆ. ನಾಳೆ ಕೊಡುತ್ತೇವೆ, ಮುಂದಿನ ವಾರ ಕೊಡುತ್ತೇವೆ ಎಂಬ ಭರವಸೆ ಮಾತ್ರ ಸಿಗುತ್ತಿದೆ ಎಂದು ಹಿರಿಯ ಗುತ್ತಿಗೆದಾರರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ನಿತ್ಯವೂ ತಪ್ಪದ ಸಾಲಗಾರರ ಕಾಟ: ಬಿಲ್ ಹಣ ಕೈಗೆ ಬಾರದ ಕಾರಣ ಗುತ್ತಿಗೆದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳಗ್ಗೆ 8ಕ್ಕೆ ನಾವು ಕಚೇರಿಗೆ ಬಂದರೆ, ಸಾಲ ಕೊಟ್ಟವರು ಸಂಜೆ ನಮ್ಮ ಮನೆಗೆ ಬಂದು ಹೆಣ್ಣು ಮಕ್ಕಳಿಗೆ ಟಾರ್ಚರ್ ಕೊಡುತ್ತಾರೆ. ಆಸ್ಪತ್ರೆಗೆ ಹೋಗಲು, ಮಕ್ಕಳನ್ನು ಸಾಕಲು, ಕನಿಷ್ಠ ಟೀ ಕುಡಿಯಲು ಕೂಡ ನಮ್ಮ ಬಳಿ ಹಣವಿಲ್ಲ. ಇದಕ್ಕಾಗಿ ನಮ್ಮ ಮಕ್ಕಳು ದುಡಿಮೆಗಾಗಿ ಬೆಂಗಳೂರಿಗೆ ಹೋಗಿದ್ದಾರೆ ಎಂದು ಹಿರಿಯ ಗುತ್ತಿಗೆದಾರ ಹುಸೇನ್‌ಸಾಬ್‌ ಕಣ್ಣೀರು ಹಾಕಿದರು. ಒಟ್ಟು 400ಕ್ಕೂ ಹೆಚ್ಚು ಗುತ್ತಿಗೆದಾರರು ಇದೇ ಪರಿಸ್ಥಿತಿ ಎದುರಿಸುತ್ತಿದ್ದು, ಇಡೀ ಕುಟುಂಬಗಳು ಆರ್ಥಿಕವಾಗಿ ಕಂಗಾಲಾಗಿವೆ. ಬಾಕಿ ಬಿಲ್ ಕೂಡಲೇ ಪಾವತಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಗುತ್ತಿಗೆದಾರರು ಎಚ್ಚರಿಕೆ ನೀಡಿದ್ದಾರೆ. ಸರ್ಕಾರಕ್ಕೆ ಅ.15ರವರೆಗೆ ಗಡುವು ನೀಡಿದ್ದೇವೆ. ಅ.17ರೊಳಗೆ ಹಣ ಬಿಡುಗಡೆಯಾಗದಿದ್ದರೆ ನಾವು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ನಮ್ಮ ಸಾವಿಗೆ ಸರ್ಕಾರವೇ ಹೊಣೆ ಎಂದು ಅವರು ಎಚ್ಚರಿಸಿದ್ದಾರೆ. ಎರಡು ವರ್ಷದ ಬಿಲ್ ಬಾಕಿ ಉಳಿಸಿಕೊಂಡ ಸರ್ಕಾರ ಕೂಡಲೇ 35 ಕೋಟಿ ರು. ಬಿಡುಗಡೆ ಮಾಡಿ, ಸಣ್ಣ ಗುತ್ತಿಗೆದಾರರ ಬದುಕು ಉಳಿಸಬೇಕು ಎಂಬುದು ಅವರ ಆಗ್ರಹವಾಗಿದೆ.

ನಾವು ಸಣ್ಣ ಪುಟ್ಟ ಗುತ್ತಿಗೆದಾರರು. ₹1 ಲಕ್ಷ, ₹1.5 ಲಕ್ಷ, ₹2 ಲಕ್ಷದಂತಹ ಸಣ್ಣ ಮೊತ್ತದ ಬಿಲ್ಗಳು ಕಳೆದೆರಡು ವರ್ಷಗಳಿಂದ ಬಾಕಿ ಇವೆ. ನಮ್ಮಲ್ಲಿ ಒಬ್ಬರು ಮಗಳ ಮದುವೆಗೆ ಇಟ್ಟಿದ್ದ ಹಣವನ್ನು ತಂದು ಕಾಮಗಾರಿ ಮಾಡಿ, ಈಗ ಮದುವೆಯನ್ನೇ ಮುಂದೂಡಿದ್ದಾರೆ, ಹಣವಿಲ್ಲದೆ ವಿಷ ಕುಡಿದು ಸಾಯುವ ಸ್ಥಿತಿಗೆ ಬಂದಿದ್ದಾರೆ, ಎಂಡಿ ಅವರಿಗೆ ಅನೇಕ ಬಾರಿ ಮನವಿ ಮಾಡಿದರೂ ಬಿಲ್‌ ಪಾವತಿಯಾಗುತ್ತಿಲ್ಲ ಗುತ್ತಿಗೆದಾರ ನಾನಾಗೌಡ ಹೇಳಿದರು.

ಬಿಲ್ ಹಣ ಕೈಗೆ ಬಾರದ ಕಾರಣ ಗುತ್ತಿಗೆದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. "ಬೆಳಿಗ್ಗೆ 8 ಗಂಟೆಗೆ ನಾವು ಕಚೇರಿಗೆ ಬಂದರೆ, ಸಾಲ ಕೊಟ್ಟವರು ಸಂಜೆ ನಮ್ಮ ಮನೆಗೆ ಬಂದು ಹೆಣ್ಣು ಮಕ್ಕಳಿಗೆ ಟಾರ್ಚರ್ ಕೊಡುತ್ತಾರೆ. ಆಸ್ಪತ್ರೆಗೆ ಹೋಗಲು, ಮಕ್ಕಳನ್ನು ಸಾಕಲು, ಕನಿಷ್ಠ ಟೀ ಕುಡಿಯಲು ಕೂಡ ನಮ್ಮ ಬಳಿ ಹಣವಿಲ್ಲ. ಇದಕ್ಕಾಗಿ ನಮ್ಮ ಮಕ್ಕಳು ದುಡಿಮೆಗಾಗಿ ಬೆಂಗಳೂರಿಗೆ ಹೋಗಿದ್ದಾರೆ ಎಂದು ಗುತ್ತಿಗೆದಾರ ಹುಸೇನ್‌ ಸಾಬ್‌ ಹೇಳಿದರು.