ಮಹಿಳೆಯರು ಕ್ರೀಡಾ ಜಗತ್ತಿನಲ್ಲಿ ಅಭೂತ ಪೂರ್ವ ಸಾಧನೆಗೈದು ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಹೆಚ್ಚು ಪದಕಗಳನ್ನು ಗಳಿಸಿ ದೇಶದ ಕೀರ್ತಿ ಬೆಳಗುತ್ತಿದ್ದಾರೆ ಎಂದು ಗುಬ್ಬಿ ಪಿಎಸ್ಐ ಪಿ.ರಾಜೇಶ್ವರಿ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಮಹಿಳೆಯರು ಕ್ರೀಡಾ ಜಗತ್ತಿನಲ್ಲಿ ಅಭೂತ ಪೂರ್ವ ಸಾಧನೆಗೈದು ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಹೆಚ್ಚು ಪದಕಗಳನ್ನು ಗಳಿಸಿ ದೇಶದ ಕೀರ್ತಿ ಬೆಳಗುತ್ತಿದ್ದಾರೆ ಎಂದು ಗುಬ್ಬಿ ಪಿಎಸ್ಐ ಪಿ.ರಾಜೇಶ್ವರಿ ಅಭಿಪ್ರಾಯಪಟ್ಟರು.ಪಟ್ಟಣದ ಸರ್ಕಾರಿ ಕಾಲೇಜು ಮೈದಾನದಲ್ಲಿ ಶುಭೋದಯ ಪದವಿ ಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣಕ್ಕೆ ಒತ್ತು ನೀಡಿ ಪರೀಕ್ಷಾ ಫಲಿತಾಂಶದಲ್ಲಿ ಮುಂಚೂಣಿಯಲ್ಲಿ ಹೆಣ್ಣು ಮಕ್ಕಳು ಇರುತ್ತಿದ್ದರು. ಮುಂದುವರೆದು ಈಗ ಕ್ರೀಡಾ ಕ್ಷೇತ್ರದಲ್ಲಿ ಸಹ ತಮ್ಮ ಸಾಧನೆ ದೇಶ ವಿದೇಶದಲ್ಲಿ ಕಾಣಬಹುದಾಗಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ನಟರಾಜು ಮಾತನಾಡಿ ಪ್ರತಿಭಾವಂತ ಕ್ರೀಡಾಪಟು ದೇಶದ ಆಸ್ತಿ ಆಗಬಹುದಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ಕ್ರೀಡೆಗೆ ಸಮುದಾಯ, ಪೋಷಕರು ಪ್ರೋತ್ಸಾಹ ನೀಡಬೇಕು ಎಂದು ಕರೆ ನೀಡಿದರು.ಪಪಂ ಮಾಜಿ ಸದಸ್ಯ ಜಿ.ಆರ್.ಶಿವಕುಮಾರ್ ಮಾತನಾಡಿ ಕ್ರೀಡೆಗಳಿಂದ ಮಾನಸಿಕ ಒತ್ತಡ ಕಡಿಮೆ ಮಾಡಿಕೊಂಡು ಶಿಕ್ಷಣಕ್ಕೆ ಏಕಾಗ್ರತೆ ಸಾಧಿಸಬಹುದು ಎಂದರು.ಈ ಸಂದರ್ಭದಲ್ಲಿ ಪಪಂ ಮಾಜಿ ಸದಸ್ಯ ಜಿ.ಸಿ.ಕೃಷ್ಣಮೂರ್ತಿ, ಕಾಲೇಜು ನೋಡಲ್ ಅಧಿಕಾರಿ ಆರ್.ಬಿ.ಚಂದ್ರಶೇಖರ್, ತಾಲ್ಲೂಕು ದೈಹಿಕ ಪರಿವೀಕ್ಷಕಿ ನಾಗರತ್ನ ಗೌಡರ್, ಶುಭೋದಯ ಕಾಲೇಜು ಪ್ರಾಂಶುಪಾಲ ಎಸ್.ಗಂಗರಾಜು, ಸೇರಿದಂತೆ ತಾಲ್ಲೂಕಿನ ಎಲ್ಲಾ ಕಾಲೇಜು ಪ್ರಾಂಶುಪಾಲರು, ದೈಹಿಕ ಶಿಕ್ಷಣ ಉಪನ್ಯಾಸಕರು ಇತರರು ಇದ್ದರು.