ರಂಗಾಯಣದ ಮಕ್ಕಳ ಸಂತೆಗೆ ಅಭೂತಪೂರ್ವ ಸ್ಪಂದನೆ

| Published : Apr 28 2025, 12:46 AM IST

ಸಾರಾಂಶ

ಹಳ್ಳಿಯ ಸಂತೆಯನ್ನೆ ರಂಗಾಯಣದ ಆವರಣದಲ್ಲಿ ಸೃಷ್ಠಿಸಿ, ಪ್ರಾಯೋಗಿಕವಾಗಿ ಮಕ್ಕಳಿಗೆ ಗ್ರಾಮೀಣ ಬದುಕು, ಖರೀದಿದಾರೊಂದಿಗೆ ಸಂಭಾಷಣೆ ಮಾಡುವ ಕೌಶಲ್ಯ ಹಾಗೂ ವ್ಯವಹಾರದ ಜ್ಞಾನವನ್ನು ನೀಡುವಲ್ಲಿ ಧಾರವಾಡ ರಂಗಾಯಣ ಯಶಸ್ವಿಯಾಯಿತು.

ಧಾರವಾಡ: ನಗರದ ಯಾವ ಮಾರುಕಟ್ಟೆಗೂ ಕಡಿಮೆ ಇಲ್ಲದ ರೀತಿಯಲ್ಲಿ ರಂಗಾಯಣದಲ್ಲಿ ಭಾನುವಾರ ನಡೆದ ಮಕ್ಕಳ ಸಂತೆಯು ಹತ್ತಾರು ವೈಶಿಷ್ಟ್ಯತೆಗಳಿಂದ ಕೂಡಿತ್ತು. ತಾವು ತಂದಿರುವ ವಸ್ತುಗಳನ್ನು ಮಾರುಕಟ್ಟೆಯಲ್ಲಿ ಕೂಗಿ ಕೂಗಿ ಕರೆದಂತೆ ಮಕ್ಕಳು ಜನರನ್ನು ಕರೆದು ತಮ್ಮ ವಸ್ತುಗಳನ್ನು ಮಾರಾಟ ಮಾಡಿದರು.

ರಂಗಾಯಣವು “ನಮ್ಮ ಸಂವಿಧಾನ ನಮ್ಮ ಕಲರವ” ಧ್ಯೇಯವಾಕ್ಯದಡಿ ಆಯೋಜಿಸಿರುವ ಬೇಸಿಗೆ ಶಿಬಿರದ ಭಾಗವಾಗಿ ಮಕ್ಕಳಿಗೆ ಗ್ರಾಮೀಣ ಬದುಕು ಹಾಗೂ ವ್ಯವಹಾರದ ಜ್ಞಾನವನ್ನು ನೀಡುವುದಕ್ಕಾಗಿ ಆಯೋಜಿಸಿದ್ದ ಮಕ್ಕಳ ಸಂತೆ ಸಂಪೂರ್ಣ ಯಶಸ್ವಿಯಾಯಿತು.

ಶಿಬಿರದ ಮಕ್ಕಳು ಮನೆಯಲ್ಲಿ ತಯಾರಿಸಿದ ಶೇಂಗಾ ಚಿಕ್ಕೆ, ಉಂಡೆಗಳು, ಕಡಲೆ ಉಸುಳಿ, ಚುರುಮುರಿ, ತಂಪು ಪಾನೀಯಗಳು, ಮಿರ್ಚಿ-ಗಿರಮಿಟ್, ಸಾವಯುವ ಕೃಷಿಯಿಂದ ತಯಾರಿಸಿದ ವಸ್ತುಗಳು, ಚಿತ್ರಕಲೆಯ ಚಿತ್ರಪಟಗಳು, ಗುಡಿ ಕೈಗಾರಿಕೆ ವಸ್ತುಗಳು, ಕರಕುಶಲ ವಸ್ತುಗಳು, ಪುಸ್ತಕಗಳು, ಪೆನ್ನು, ಸಿಹಿತಿನಿಸುಗಳು, ತರಕಾರಿ, ಮಾವಿನ ಹಣ್ಣು ಹೀಗೆ ನೂರಾರು ವಸ್ತುಗಳನ್ನು ಮಕ್ಕಳು ಮಾರಾಟ ಮಾಡಿದರು. ಇದರಿಂದ ಮಕ್ಕಳು ವ್ಯಾಪಾರ ಮಾಡುವ ಕಲೆಯನ್ನು ಕಲಿತುಕೊಳ್ಳುವ ಮೂಲಕ ವ್ಯವಹಾರದ ಜ್ಞಾನವನ್ನು ಬೆಳಸಿಕೊಂಡರು.

ಮಕ್ಕಳ ಸಂತೆಯನ್ನು ವೃತ್ತಿ ರಂಗಭೂಮಿ ಕಲಾವಿದೆ ಪ್ರೇಮಾ ತಾಳಿಕೋಟಿ ಉದ್ಘಾಟಿಸಿ, ಮಕ್ಕಳು ಮಾರಾಟ ಮಾಡುವ ಆಹಾರದ ತಿಂಡಿ-ತಿನಿಸುಗಳನ್ನು ಹಾಗೂ ವಸ್ತುಗಳನ್ನು ಖರೀದಿಸುವ ಮೂಲಕ ಮಕ್ಕಳಿಗೆ ಪ್ರೋತ್ಸಾಹವನ್ನು ನೀಡಿದರು.

ಆಧುನಿಕತೆಯ ಭರಾಟೆಯಲ್ಲಿ ಮಕ್ಕಳು ಕೇವಲ ಮೊಬೈಲ್‌ಗಳಿಗೆ ಸೀಮಿತವಾಗಿದ್ದಾರೆ. ಹೊರಗಡೆಯ ಆಟಗಳನ್ನು ನಿಲ್ಲಿಸಿದ್ದಾರೆ. ಮನೆಯ ನಾಲ್ಕು ಗೋಡೆಗಳ ಮಧ್ಯೆ ಮೊಬೈಲ್‌ಗಳಲ್ಲಿಯ ಗೇಮ್‌ಗಳನ್ನು ಒಬ್ಬರೆ ಆಡುತ್ತಾ, ಬೇರೆಯವರೊಂದಿಗೆ ಬೆರೆಯದೇ, ಹೊರಗಿನ ಸುಂದರವಾದ ಪ್ರಪಂಚವನ್ನು ಮರೆತಿದ್ದಾರೆ. ಇಂತಹ ಮಕ್ಕಳಿಗೆ ಹಳ್ಳಿಯ ಸಂತೆಯನ್ನೆ ರಂಗಾಯಣದ ಆವರಣದಲ್ಲಿ ಸೃಷ್ಠಿಸಿ, ಪ್ರಾಯೋಗಿಕವಾಗಿ ಮಕ್ಕಳಿಗೆ ಗ್ರಾಮೀಣ ಬದುಕು, ಖರೀದಿದಾರೊಂದಿಗೆ ಸಂಭಾಷಣೆ ಮಾಡುವ ಕೌಶಲ್ಯ ಹಾಗೂ ವ್ಯವಹಾರದ ಜ್ಞಾನವನ್ನು ನೀಡುವಲ್ಲಿ ಧಾರವಾಡ ರಂಗಾಯಣ ಯಶಸ್ವಿಯಾಯಿತು ಎಂದರು.

ಹಿರಿಯ ವಕೀಲರಾದ ರಾಜೇಂದ್ರ ಪಾಟೀಲ, ರಂಗ ನಿರ್ದೇಶಕ ಪ್ರಭು ಹಂಚಿನಾಳ, ಶಿಬಿರದ ನಿರ್ದೇಶಕ ಲಕ್ಷ್ಮಣ ಪೀರಗಾರ ರಂಗಾಯಣದ ಸಿಬ್ಬಂದಿ ಇದ್ದರು. ಇಲ್ಲಿಯ ನಾಟಕ ನಿರ್ದೇಶಕರು, ಸಹ ನಿರ್ದೇಶಕರು ಸಂತೆಯಲ್ಲಿ ಕಳ್ಳತನ ಮಾಡುವ, ತೃತೀಯ ಲಿಂಗಿಗಳು ವಸೂಲಿ ಮಾಡುವ ಹಾಗೂ ರಂಗಾಯಣದ ಸಿಬ್ಬಂದಿ ಟ್ಯಾಕ್ಸ್ ಕೇಳುವ ದೃಶ್ಯಗಳನ್ನು ನೈಜವೆಂಬಂತೆ ಮಕ್ಕಳಿಗೆ ನಿಜವಾದ ಸಂತೆಯ ವಾತಾವರಣವನ್ನು ಕಲ್ಪಿಸಿಕೊಡುವ ಮೂಲಕ ರಂಗಾಯಣದ ಮಕ್ಕಳ ಸಂತೆ ಯಶಸ್ವಿಯಾಯಿತು. ಪಾಲಕರು ತಮ್ಮೊಂದಿಗೆ ಸಂಬಂಧಿಕರನ್ನು ಕರೆತಂದು ಮಕ್ಕಳ ವಸ್ತುಗಳನ್ನು ಖರೀದಿಸುವ ಮೂಲಕ ಪ್ರೋತ್ಸಾಹಿಸಿದರು.