ಇಲ್ಲಿನ ಆಲೂರಿನ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಹಸಿರು ಪರಿಸರದಲ್ಲಿ ಆಯೋಜಿಸಲಾಗಿದ್ದ ಚಿತ್ರಕೂಟ ಆಯುರ್ವೇದ ಹಬ್ಬವು ಅಭೂತಪೂರ್ವ ಯಶಸ್ಸು ಕಂಡಿದ್ದು, 8,000ಕ್ಕೂ ಅಧಿಕ ಮಂದಿ ಸಾಕ್ಷಿಯಾದರು. ಯುವ ಸಮೂಹವನ್ನು ಆಯುರ್ವೇದದೆಡೆಗೆ ಆಕರ್ಷಿಸಲು ಕೈಗೊಂಡಿದ್ದ ಚಿತ್ರಕೂಟ ಜೆನ್ ಜೀ ಆಯುರ್ವೇದ ಜಾಗೃತಿ ಅಭಿಯಾನವು ಸಾಮಾಜಿಕ ಜಾಲತಾಣಗಳಲ್ಲಿ ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ಜನರನ್ನು ತಲುಪಿ ಗಮನಾರ್ಹ ಮೈಲಿಗಲ್ಲು ಸ್ಥಾಪಿಸಿದೆ.
ಕುಂದಾಪುರ : ಇಲ್ಲಿನ ಆಲೂರಿನ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಹಸಿರು ಪರಿಸರದಲ್ಲಿ ಆಯೋಜಿಸಲಾಗಿದ್ದ ಚಿತ್ರಕೂಟ ಆಯುರ್ವೇದ ಹಬ್ಬವು ಅಭೂತಪೂರ್ವ ಯಶಸ್ಸು ಕಂಡಿದ್ದು, 8,000ಕ್ಕೂ ಅಧಿಕ ಮಂದಿ ಸಾಕ್ಷಿಯಾದರು. ಯುವ ಸಮೂಹವನ್ನು ಆಯುರ್ವೇದದೆಡೆಗೆ ಆಕರ್ಷಿಸಲು ಕೈಗೊಂಡಿದ್ದ ಚಿತ್ರಕೂಟ ಜೆನ್ ಜೀ ಆಯುರ್ವೇದ ಜಾಗೃತಿ ಅಭಿಯಾನವು ಸಾಮಾಜಿಕ ಜಾಲತಾಣಗಳಲ್ಲಿ ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ಜನರನ್ನು ತಲುಪಿ ಗಮನಾರ್ಹ ಮೈಲಿಗಲ್ಲು ಸ್ಥಾಪಿಸಿದೆ.
ಕಾರ್ಯಕ್ರಮಕ್ಕೆ ಭೇಟಿ ನೀಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕೇಂದ್ರ ಸರ್ಕಾರದಲ್ಲಿ ಆಯುರ್ವೇದಕ್ಕೆ ಪುನಃ ಶಕ್ತಿ ತುಂಬುವ ಗಂಭೀರ ಚಿಂತನೆ ನಡೆಯುತ್ತಿರುವಾಗ, ಆಲೂರಿನಂತಹ ಗ್ರಾಮೀಣ ಪ್ರದೇಶದಲ್ಲಿ 17–18 ಎಕರೆಯಲ್ಲಿ ಚಿತ್ರಕೂಟ ಆಯುರ್ವೇದದ ಸ್ಪಷ್ಟ ಚಿತ್ರಣವನ್ನು ಸಾರ್ವಜನಿಕರಿಗೆ ನೀಡುತ್ತಿದೆ. ಮುಂದಿನ ಆರೋಗ್ಯಕರ ಸಮಾಜಕ್ಕೆ ಆಯುರ್ವೇದ ಅನಿವಾರ್ಯ ಎಂಬ ಸಂದೇಶವನ್ನು ಡಾ. ರಾಜೇಶ್ ಬಾಯರಿ ಮತ್ತವರ ತಂಡ ಇಲ್ಲಿ ಅದ್ಭುತವಾಗಿ ಸಾಕಾರಗೊಳಿಸಿದೆ ಎಂದು ಶ್ಲಾಘಿಸಿದರು.ಶಾಸಕ ಗುರುರಾಜ್ ಗಂಟಿಹೊಳೆ, ತಮ್ಮ ಅನುಭವವನ್ನು ಆಯುರ್ವೇದ ಕ್ಲಿನಿಕ್‌ಗೆ ಮಾತ್ರ ಸೀಮಿತಗೊಳಿಸದೆ, ಇಡೀ ಸಮಾಜಕ್ಕೆ ಆಯುರ್ವೇದವನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಆಸಕ್ತಿ ಮೂಡಿಸುತ್ತಿರುವ ಡಾ. ರಾಜೇಶ್ ಬಾಯರಿ ಅವರ ಕಾರ್ಯ ಶ್ಲಾಘನೀಯ. ಹಳ್ಳಿಯ ಮೂಲೆಯಲ್ಲಿ ಆರಂಭವಾದ ಈ ಸಂಸ್ಥೆ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಜನರ ವಿಶ್ವಾಸ ಗಳಿಸಿರುವುದು ಅವರ ನಿಷ್ಠೆಗೆ ಸಂದ ಗೌರವ ಎಂದು ತಿಳಿಸಿದರು.
ಚಿತ್ರಕೂಟದ ಮುಖ್ಯಸ್ಥ ಡಾ. ರಾಜೇಶ್ ಬಾಯರಿ ಅವರ ಕಾರ್ಯವೈಖರಿಗೆ ಸಾರ್ವಜನಿಕರು ಹಾಗೂ ಗಣ್ಯರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.ಕಾರ್ಯಕ್ರಮದ ಯಶಸ್ಸಿನ ಕುರಿತು ಸಂತಸ ಹಂಚಿಕೊಂಡ ಡಾ. ರಾಜೇಶ್ ಬಾಯರಿ, ಇಂದಿನ ವೇಗದ ಬದುಕಿನಲ್ಲಿ ಬಿ.ಪಿ ಮತ್ತು ಶುಗರ್ ಕಾಯಿಲೆಗಳು ಯುವಜನತೆಯನ್ನು ಬಾಧಿಸುತ್ತಿರುವುದು ಆತಂಕಕಾರಿ ವಿಚಾರ. ಅದಕ್ಕಾಗಿಯೇ ಫಿಟ್ ಇಂಡಿಯಾ ನಿರ್ಮಾಣಕ್ಕೆ ಕೊಡುಗೆ ನೀಡಬೇಕೆಂಬ ಸಂಕಲ್ಪದೊಂದಿಗೆ, ಜೆನ್ ಜೀ ತಲೆಮಾರನ್ನು ಗುರಿಯಾಗಿಸಿಕೊಂಡು ಈ ಡಿಜಿಟಲ್ ಅಭಿಯಾನವನ್ನು ರೂಪಿಸಿದೆವು. ಅಭಿಯಾನವು ಸಾಮಾಜಿಕ ಜಾಲತಾಣಗಳ ಮೂಲಕ ಬರೋಬ್ಬರಿ 20 ಲಕ್ಷಕ್ಕೂ ಅಧಿಕ ಯುವ ಜನರನ್ನು ಮುಟ್ಟಿರುವುದು ನಮಗೆ ಅತೀವ ತೃಪ್ತಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು. 150ಕ್ಕೂ ಹೆಚ್ಚು ಗಿಡಮೂಲಿಕೆಗಳ ಪರಿಚಯ: ಹಬ್ಬದಲ್ಲಿ ಆಯುರ್ವೇದ ತಜ್ಞರಿಂದ ವಾತ-ಪಿತ್ತ-ಕಫ ಪ್ರಕೃತಿ ವಿಶ್ಲೇಷಣೆ, 150ಕ್ಕೂ ಹೆಚ್ಚು ಅಪರೂಪದ ಗಿಡಮೂಲಿಕೆಗಳ ಪರಿಚಯ ನಡಿಗೆ, ಮನೆಮದ್ದು ಕಷಾಯಗಳ ಪ್ರಾತ್ಯಕ್ಷಿಕೆ ಹಾಗೂ ಉಚಿತ ಗಿಡಗಳ ವಿತರಣೆ ಜನರ ಗಮನ ಸೆಳೆದವು. ದೇಸಿ ಗೋಶಾಲೆ ಭೇಟಿ, ಆಲೂರಿನ ಮಣ್ಣಿನ ಮಡಕೆಗಳು, ಮರದ ಪರಿಕರಗಳು, ಸಾವಯವ ತರಕಾರಿ ಬೀಜಗಳು ಹಾಗೂ ನಮ್ಮಭೂಮಿ ಸಂಸ್ಥೆಯ ಕರಕುಶಲ ವಸ್ತುಗಳ ಮಳಿಗೆಗಳು ಆಕರ್ಷಕವಾಗಿದ್ದವು. ಕುಂದಾಪುರ, ಬೈಂದೂರು, ಬ್ರಹ್ಮಾವರ ಹಾಗೂ ಉಡುಪಿ ಕಡೆಯ ನೂರಾರು ಶಾಲಾ ಮಕ್ಕಳು ಜಿಲ್ಲಾಮಟ್ಟದ ಭಾಷಣ, ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಸಾರ್ವಜನಿಕರಿಗೆ ಬಡಿಸಿದ ಸಾಂಪ್ರದಾಯಿಕ ಆಯುರ್ವೇದ ಊಟ ಪ್ರಶಂಸೆಗೆ ಪಾತ್ರವಾಯಿತು.