ಶಿಕಾರಿಪುರ ಬಂದ್‌ಗೆ ಅಭೂತಪೂರ್ವ ಬೆಂಬಲ

| Published : Oct 10 2025, 01:00 AM IST

ಸಾರಾಂಶ

ಪಟ್ಟಣದ ಹೊರವಲಯ ಕುಟ್ರಹಳ್ಳಿ ಸಮೀಪದಲ್ಲಿ ನಿರ್ಮಿಸಲಾದ ಅವೈಜ್ಞಾನಿಕ ಟೋಲ್‌ಗೇಟ್ ತೆರವು ಗೊಳಿಸುವಂತೆ ಆಗ್ರಹಿಸಿ ಗುರುವಾರ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಕರೆ ನೀಡಿದ್ದ ಶಿಕಾರಿಪುರ ಬಂದ್‌ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಅಂಗಡಿ ಮುಂಗಟ್ಟು ಸಹಿತ ವಾಹನ ಸಂಚಾರ ನಿಶ್ಯಬ್ದವಾಗಿ ಬಂದ್ ಮೂಲಕ ಸೂಕ್ತ ರೀತಿಯ ಎಚ್ಚರಿಕೆಯನ್ನು ರವಾನಿಸಲಾಗಿದೆ.

ಶಿಕಾರಿಪುರ: ಪಟ್ಟಣದ ಹೊರವಲಯ ಕುಟ್ರಹಳ್ಳಿ ಸಮೀಪದಲ್ಲಿ ನಿರ್ಮಿಸಲಾದ ಅವೈಜ್ಞಾನಿಕ ಟೋಲ್‌ಗೇಟ್ ತೆರವು ಗೊಳಿಸುವಂತೆ ಆಗ್ರಹಿಸಿ ಗುರುವಾರ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಕರೆ ನೀಡಿದ್ದ ಶಿಕಾರಿಪುರ ಬಂದ್‌ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಅಂಗಡಿ ಮುಂಗಟ್ಟು ಸಹಿತ ವಾಹನ ಸಂಚಾರ ನಿಶ್ಯಬ್ದವಾಗಿ ಬಂದ್ ಮೂಲಕ ಸೂಕ್ತ ರೀತಿಯ ಎಚ್ಚರಿಕೆಯನ್ನು ರವಾನಿಸಲಾಗಿದೆ.ಪಟ್ಟಣದ ಹೊರವಲಯ ಕುಟ್ರಹಳ್ಳಿ ಸಮೀಪ ಕಳೆದ 2 ವರ್ಷದ ಹಿಂದೆ ನಿರ್ಮಾಣವಾದ ಟೋಲ್‌ಗೇಟ್ ಅವೈಜ್ಞಾನಿಕವಾಗಿದ್ದು, ಕಾನೂನಿನ್ವಯ ಅವಕಾಶವಿಲ್ಲದಿದ್ದರೂ ಸವಳಂಗ ಸಮೀಪ ಹಾಗೂ ಕುಟ್ರಹಳ್ಳಿ ಬಳಿ 30 ಕಿ.ಮೀ ಅಂತರದಲ್ಲಿ ಎರಡು ಟೋಲ್‌ಗೇಟ್ ನಿರ್ಮಿಸಲಾಗಿದೆ ಎಂದು ಹಲವು ಬಾರಿ ಗ್ರಾಮಸ್ಥರು, ರೈತರು, ಖಾಸಗಿ ವಾಹನ ಮಾಲೀಕರು ತಾಲೂಕು ಆಡಳಿತ, ಜಿಲ್ಲಾಡಳಿತ, ಸಚಿವರಿಗೆ, ಸಂಸದ, ಶಾಸಕರಿಗೆ ಮನವಿ ಸಲ್ಲಿಸಿ ಹೈರಾಣಾಗಿದ್ದರು. ಸಂಬಂಧಿಸಿದ ಅಧಿಕಾರಿಗಳು ಜನಪ್ರತಿನಿಧಿಗಳಿಂದ ಸಕಾರಾತ್ಮಕ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಮೂಲಕ ಗೇಟ್ ತೆರವಿಗೆ ಕೈಗೊಂಡ ಹೋರಾಟ ತಾರ್ಕಿಕ ಅಂತ್ಯಕ್ಕೆ ಗುರುವಾರ ಹಮ್ಮಿಕೊಳ್ಳಲಾಗಿದ್ದ ಶಿಕಾರಿಪುರ ಬಂದ್‌ಗೆ ಜನತೆ ವ್ಯಾಪಕ ಬೆಂಬಲ ಸೂಚಿಸಿದ್ದು, ಪಟ್ಟಣದಲ್ಲಿನ ಬಹುತೇಕ ಅಂಗಡಿ ಮುಂಗಟ್ಟು ಮುಚ್ಚಲಾಗಿತ್ತು. ಖಾಸಗಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳು, ಬ್ಯಾಂಕ್ ಮತ್ತಿತರ ಹಣಕಾಸು ಸಂಸ್ಥೆಗಳು ಗ್ರಾಹಕರಿಲ್ಲದೆ ಕಳಾಹೀನವಾಗಿದ್ದವು.

ಬೆಳಿಗ್ಗೆ 11ರ ವೇಳೆಯಲ್ಲಿ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಪಟ್ಟಣದ ಆರಾಧ್ಯದೈವ ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಹೊರಟು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಹಾಕಿ ಬಸ್ ನಿಲ್ದಾಣದಲ್ಲಿ ನೂರಾರು ಜನತೆ ಸೇರಿಕೊಂಡು ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.ನಂತರದಲ್ಲಿ ತಾಲೂಕು ಕಚೇರಿ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿ ಕೂಡಲೇ ಟೋಲ್‌ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ಬಜನೆ ಹಮ್ಮಿಕೊಂಡು ಪಟ್ಟುಹಿಡಿದು ಕುಳಿತುಕೊಂಡರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಂಎಡಿಬಿ ಮಾಜಿ ಅಧ್ಯಕ್ಷ ಪದ್ಮನಾಭಭಟ್, ಕಾನೂನು ಪಾಲಿಸದೆ ನಿರ್ಮಿಸಲಾದ ಟೋಲ್‌ಗೇಟ್ ನಿತ್ಯ ಸಂಚರಿಸುವ ರೈತರು, ಕೂಲಿಕಾರ್ಮಿಕರ ಸಹಿತ ಅಕ್ಕಪಕ್ಕದ ತಾಲೂಕಿನ ಪ್ರಯಾಣಿಕರಿಗೆ ತೀವ್ರ ಹೊರೆಯಾಗಿದ್ದು, ಈ ಬಗ್ಗೆ ಹಲವು ಬಾರಿ ಸಲ್ಲಿಸಿದ ಮನವಿ ಬಗ್ಗೆ ನಿರ್ಲಕ್ಷಿಸಲಾಗಿದ್ದು ಅಕ್ಷ್ಯಮ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಗೇಟ್ ತೆರವುಗೊಳಿಸುವಂತೆ ಸಚಿವರು, ಸಂಸದರ ಗಮನ ಸೆಳೆಯಲಾಗಿದ್ದು, ಪ್ರಯೋಜನ ಮಾತ್ರ ಶೂನ್ಯ ಎಂದ ಅವರು ತಾಳಗುಂದ, ಉಡುಗಣಿ ಹೋಬಳಿ ಸಹಿತ ಸೊರಬ, ಆನವಟ್ಟಿ ಮತ್ತಿತರ ಕಡೆಗಳಿಂದ ಶಿವಮೊಗ್ಗಕ್ಕೆ ತೆರಳುವ ವಾಹನ ಸವಾರರು 2 ಕಡೆ ಹಣ ನೀಡಬೇಕಾಗಿದ್ದು, ಈಗಾಗಲೇ ಟೋಲ್ ಮೂಲಕ ಜನರ ಸುಲಿಗೆಯಾಗಿದೆ ಕೂಡಲೇ ತೆರವುಗೊಳಿಸಿ ರೈತಾಪಿ ವರ್ಗ, ಬಸ್ ಮಾಲೀಕರನ್ನು ಪಾರುಮಾಡುವಂತೆ ಒತ್ತಾಯಿಸಿದರು.ರೈತ ಮುಖಂಡ ಶ್ರೀಧರ್ ನಾಡಿಗ್ ಮಾತನಾಡಿ, ಟೋಲ್‌ಗೇಟ್ ತೆರವುಗೊಳಿಸಲು ನೀಡಲಾಗಿದ್ದ ಗಡುವು ಪೂರ್ಣಗೊಂಡಿದ್ದು, ಇದೀಗ ರೈತರು ಕಿತ್ತೊಗೆಯುವುದು ಅನಿವಾರ್ಯವಾಗಿದೆ. ಈ ದಿಸೆಯಲ್ಲಿ ಎಲ್ಲ ರೀತಿಯ ಕಾನೂನು ಹೋರಾಟಕ್ಕೆ ಸಜ್ಜುಗೊಳ್ಳುವಂತೆ ಕರೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಜಿಲ್ಲಾ ಗೌರವಾಧ್ಯಕ್ಷ ಈರಣ್ಣ ಪ್ಯಾಟಿ ಮಾತನಾಡಿ, ಕೂಡಲೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗೇಟ್ ತೆರವು ಬಗ್ಗೆ ಸ್ಪಷ್ಟನೆ ನೀಡದಿದ್ದಲ್ಲಿ ಶೀಘ್ರದಲ್ಲಿಯೇ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದು ಶತಸಿದ್ಧ ಎಂದು ಎಚ್ಚರಿಸಿದರು.

ನಂತರದಲ್ಲಿ ತಹಸೀಲ್ದಾರ್ ಸ್ಥಳಕ್ಕೆ ಆಗಮಿಸಿ ಸೋಮವಾರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹೋರಾಟ ಸಮಿತಿ ಸದಸ್ಯರ ಸಮ್ಮುಖದಲ್ಲಿ ತಾ.ಪಂ ಸಭಾಂಗಣದಲ್ಲಿ ಟೋಲ್ ಗೇಟ್ ತೆರವು ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಹಾಲಪ್ಪಗೌಡ್ರು, ಮಾಜಿ ಅಧ್ಯಕ್ಷ ಜಯಪ್ಪಗೌಡ್ರು, ಕಾರ್ಯದರ್ಶಿ ಪುಟ್ಟಣ್ಣಗೌಡ್ರು, ತಾ.ಅಧ್ಯಕ್ಷ ರಾಜಣ್ಣ ಮುಗಳಿಕೊಪ್ಪ, ಪ್ರ.ಕಾ ರಾಜಣ್ಣ ತಾಳಗುಂದ, ಹೋರಾಟ ಸಮಿತಿ ಅಧ್ಯಕ್ಷ ಶಿವರಾಜ್ ಪಾಟೀಲ್, ಪ್ರ.ಕಾ ನವೀದ್, ವಿನಯ್ ಪಾಟೀಲ್, ನ್ಯಾಯವಾದಿ ನಿಂಗಪ್ಪ ಮತ್ತಿತರರು ಹಾಜರಿದ್ದರು.