ಆಹಾರ ಮಳಿಗೆಗಳಲ್ಲಿ ಅಸುರಕ್ಷಿತ ಆಹಾರ ನೀಡಿಕೆ: ಬೇಕ್ರಿ ರಮೇಶ್

| Published : Apr 12 2025, 12:45 AM IST

ಸಾರಾಂಶ

ಆಹಾರ ತಯಾರಿಕೆಗೆ ಸ್ವಚ್ಛತಾ ನಿಯಮಗಳನ್ನು ಅನುಸರಿಸುತ್ತಿಲ್ಲ. ಪಡೆಯುವ ಹಣಕ್ಕೆ ಸರಿಯಾದ ಪ್ರಮಾಣದ ಆಹಾರ ಪದಾರ್ಥಗಳನ್ನು ನೀಡುತ್ತಿಲ್ಲ. ಅಲ್ಲದೇ, ರಾಸಾಯನಿಕ ಅಂಶಗಳನ್ನು ಆಹಾರದಲ್ಲಿ ಸೇರಿಸಿ ಸಾರ್ವಜನಿಕರ ಆರೋಗ್ಯಕ್ಕೆ ಕುತ್ತು ತಂದೊಡ್ಡುತ್ತಿದ್ದಾರೆ. ಅದು ಮಾತ್ರವಲ್ಲದೇ ಸ್ವಚ್ಛತೆಯಿರದ ಕಡೆಗಳಲ್ಲಿ ಆಹಾರ ಮಾರಾಟ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಹೋಟೆಲ್, ರೆಸ್ಟೋರೆಂಟ್, ತಿಂಡಿ-ತಿನಿಸು, ಆಹಾರ ಸೇರಿದಂತೆ ಎಲ್ಲ ಬಗೆಯ ಆಹಾರ ಸಂಬಂಧಿತ ವ್ಯಾಪಾರ ಮಾಡುವವರು ನೋಂದಣಿ ಮಾಡಿಸಿ, ಕಡ್ಡಾಯವಾಗಿ ಆಹಾರ ಸ್ವಚ್ಛತಾ ಹಾಗೂ ಪರಿಸರ ನೈರ್ಮಲ್ಯ ಸಂಬಂಧಿತ ನಿಯಮಗಳನ್ನು ಪಾಲಿಸಬೇಕು ಎಂದು ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಆಗ್ರಹಿಸಿದರು.

ಜಿಲ್ಲೆಯ ಹಲವು ಆಹಾರ ಮಳಿಗೆಗಳು ನಿಯಮ ಪಾಲನೆ ಮಾಡದೇ ಇದ್ದು, ಗುಣಮಟ್ಟವಿಲ್ಲದ, ಅಸುರಕ್ಷಿತ ಆಹಾರ ತಯಾರಿಸಿ ವಿತರಣೆ ಮಾಡುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಆಹಾರ ತಯಾರಿಕೆಗೆ ಸ್ವಚ್ಛತಾ ನಿಯಮಗಳನ್ನು ಅನುಸರಿಸುತ್ತಿಲ್ಲ. ಪಡೆಯುವ ಹಣಕ್ಕೆ ಸರಿಯಾದ ಪ್ರಮಾಣದ ಆಹಾರ ಪದಾರ್ಥಗಳನ್ನು ನೀಡುತ್ತಿಲ್ಲ. ಅಲ್ಲದೇ, ರಾಸಾಯನಿಕ ಅಂಶಗಳನ್ನು ಆಹಾರದಲ್ಲಿ ಸೇರಿಸಿ ಸಾರ್ವಜನಿಕರ ಆರೋಗ್ಯಕ್ಕೆ ಕುತ್ತು ತಂದೊಡ್ಡುತ್ತಿದ್ದಾರೆ. ಅದು ಮಾತ್ರವಲ್ಲದೇ ಸ್ವಚ್ಛತೆಯಿರದ ಕಡೆಗಳಲ್ಲಿ ಆಹಾರ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಆಹಾರ ಇಲಾಖೆಗೆ ಸಂಬಂಧಿತ ಅಧಿಕಾರಿಗಳು, ನಗರಸಭೆಯ ಆರೋಗ್ಯ ಪರಿವೀಕ್ಷಕರು ಉದಾಸೀನತೆ ತೋರುತ್ತಿರುವುದರಿಂದ ಪರವಾನಗಿ ಪಡೆಯದೆ ಇಂದು ಎಲ್ಲೆಂದರಲ್ಲಿ ಆಹಾರ ತಯಾರಿಸುವ ಹೋಟೆಲ್‌ಗಳು ಆರಂಭಗೊಳ್ಳುತ್ತಿದ್ದು, ಸಾರ್ವಜನಿಕರನ್ನು ಅನಾರೋಗ್ಯದ ಕೂಪಕ್ಕೆ ತಳ್ಳುತ್ತಿದ್ದಾರೆ. ಅಧಿಕಾರಿಗಳು ಇವೆಲ್ಲವನ್ನೂ ಕಂಡೂ ಕಾಣದಂತೆ ಸುಮ್ಮನಾಗುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಆಹಾರ ಪದಾರ್ಥಗಳನ್ನು ತಯಾರಿಸುವವರು ಪರವಾನಗಿ ಪಡೆದು ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಆಹಾರ ಪದಾರ್ಥಗಳ ಬೆಲೆ ಮತ್ತು ತೂಕವನ್ನು ಫಲಕಗಳ ಮೂಲಕ ಪ್ರಕಟಿಸಬೇಕು. ಇಲ್ಲವಾದಲ್ಲಿ ಆಹಾರ ಸುರಕ್ಷತಾ ಕಾಯ್ದೆ ೨೧ ಮತ್ತು ೬೩ರಂತೆ ದಂಡ ಅಥವಾ ಸೆರೆವಾಸ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಜೋಸೆಫ್ ರಾಮು, ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ಜಿಲ್ಲಾ ಸಂಚಾಲಕ ಸಲ್ಮಾನ್, ಕರವೇ(ಪ್ರವೀಣ್ ಶೆಟ್ಟಿ ಬಣ) ಜಿಲ್ಲಾಧ್ಯಕ್ಷ ಅಶೋಕ್ ಇದ್ದರು.