ಕಾವೇರಿ ನದಿ ತೀರದಲ್ಲಿ ಅವೈಜ್ಞಾನಿಕ ತಡೆಗೋಡೆ!

| Published : Dec 15 2023, 01:30 AM IST

ಸಾರಾಂಶ

ಪ್ರವಾಹ ನಿಯಂತ್ರಣ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮ ಮೂಲಕ ಅಂದಾಜು ನಾಲ್ಕು ಕೋಟಿ ರು. ವೆಚ್ಚದಲ್ಲಿ ತಡೆಗೋಡೆ ಕಾಮಗಾರಿ ಆರಂಭಗೊಂಡಿದ್ದು, ನದಿ ತೀರದಲ್ಲಿರುವ ಭಾರಿ ಗಾತ್ರದ ಮರಗಳನ್ನು ಅಕ್ರಮವಾಗಿ ತೆರವುಗೊಳಿಸಲಾಗಿದೆ. ಇದರಿಂದ ನದಿಯ ಬದಿಯ ಮಣ್ಣು ಸವೆತ ಉಂಟಾಗಲಿದೆ

ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರ ಕುವೆಂಪು ಬಡಾವಣೆ ಕಾವೇರಿ ನದಿ ತೀರದಲ್ಲಿ ಅವೈಜ್ಞಾನಿಕವಾಗಿ ತಡೆಗೋಡೆ ನಿರ್ಮಿಸುತ್ತಿರುವ ಬಗ್ಗೆ ಸ್ಥಳೀಯರು ಆರೋಪಿಸಿದ್ದಾರೆ.

ಪ್ರವಾಹ ನಿಯಂತ್ರಣ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮ ಮೂಲಕ ಅಂದಾಜು ನಾಲ್ಕು ಕೋಟಿ ರು. ವೆಚ್ಚದಲ್ಲಿ ತಡೆಗೋಡೆ ಕಾಮಗಾರಿ ಆರಂಭಗೊಂಡಿದ್ದು, ನದಿ ತೀರದಲ್ಲಿರುವ ಭಾರಿ ಗಾತ್ರದ ಮರಗಳನ್ನು ಅಕ್ರಮವಾಗಿ ತೆರವುಗೊಳಿಸಲಾಗಿದೆ. ಇದರಿಂದ ನದಿಯ ಬದಿಯ ಮಣ್ಣು ಸವೆತ ಉಂಟಾಗಲಿದೆ ಎಂದು ಸ್ಥಳೀಯ ನಿವಾಸಿಗಳಾದ ದೀಪಕ್ ಮತ್ತು ರಘು ಆರೋಪ ವ್ಯಕ್ತಪಡಿಸಿದ್ದಾರೆ.ಹಿಟಾಚಿ ಬಳಸಿ ಮಣ್ಣನ್ನು ಅಗೆದು ಸಡಿಲಗೊಳಿಸುವ ಮೂಲಕ ಮಳೆಗಾಲದಲ್ಲಿ ಅಪಾಯಕ್ಕೆ ಆಹ್ವಾನ ಮಾಡಿದಂತಾಗಿದೆ ಎಂದು ತಿಳಿಸಿರುವ ದೀಪಕ್, ಈ ಬಗ್ಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಆಗ್ರಹಿಸಿದ್ದಾರೆ.

ನದಿ ತಟದಲ್ಲಿ ಬೆಳೆಸಿರುವ ಮರ ಗಿಡಗಳನ್ನು ಧ್ವಂಸ ಮಾಡಿರುವ ಕಾರ್ಮಿಕರು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ. ಕಾಮಗಾರಿ ನಡೆಸಿ ಸರ್ಕಾರದ ಹಣವನ್ನು ಪೋಲು ಮಾಡಬಾರದೆಂದು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎಚ್‌.ಎನ್‌. ಮುರಳಿಧರ್ ಅಧಿಕಾರಿಗಳನ್ನು ಮನವಿ ಮಾಡಿದ್ದಾರೆ.ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕುಶಾಲನಗರ ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ.