ಅಳವಂಡಿ–ಭೈರಾಪುರ ರಸ್ತೆಗೆ ಅವೈಜ್ಞಾನಿಕ ಸೇತುವೆ ನಿರ್ಮಿಸಿದ್ದರಿಂದ ಹಳ್ಳದ ನೀರು ರೈತರ ಜಮೀನುಗಳಿಗೆ ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಭಾರಿ ಮಳೆಯಿಂದ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾದ ಪರಿಣಾಮ ಈ ಘಟನೆ ನಡೆದಿದೆ.

ಕೊಪ್ಪಳ: ಅಳವಂಡಿ–ಭೈರಾಪುರ ರಸ್ತೆಗೆ ಅವೈಜ್ಞಾನಿಕ ಸೇತುವೆ ನಿರ್ಮಿಸಿದ್ದರಿಂದ ಹಳ್ಳದ ನೀರು ರೈತರ ಜಮೀನುಗಳಿಗೆ ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಭಾರಿ ಮಳೆಯಿಂದ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾದ ಪರಿಣಾಮ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಭಾನುವಾರ ಸಂಜೆ ಸುರಿದ ಭಾರಿ ಮಳೆಯಿಂದ ಅಳವಂಡಿ ಗ್ರಾಮದ ಮುಂದಿನ ಹಳ್ಳದಲ್ಲಿ ನೀರಿನ ಹರಿವು ಏಕಾಏಕಿ ಹೆಚ್ಚಾಗಿತ್ತು. ಸೇತುವೆಯ ಕೆಳಭಾಗದಲ್ಲಿ ನೀರು ಸರಾಗವಾಗಿ ಹರಿದುಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ನೀರು ಜಮೀನುಗಳತ್ತ ಹರಿದಿದೆ.

ನೀರಿನ ರಭಸಕ್ಕೆ ರೈತ ಚೌಡಪ್ಪ ಅವರ ಕಬ್ಬಿನ ಗದ್ದೆಗೆ ನೀರು ನುಗ್ಗಿದ್ದು, ಜಮೀನಿನ ಮಣ್ಣು ಕೊಚ್ಚಿಹೋಗುವ ಜತೆಗೆ ಕಬ್ಬಿನ ಬೆಳೆಯೂ ಹಾನಿಗೊಳಗಾಗಿದೆ. ಇದರಿಂದ ಸುಮಾರು ₹25ರಿಂದ ₹30 ಲಕ್ಷ ನಷ್ಟವಾಗಿದೆ ಎಂದು ಚೌಡಪ್ಪ ತಿಳಿಸಿದ್ದಾರೆ.

ಹಲವು ಬಾರಿ ಮನವಿ, ಕ್ರಮವಿಲ್ಲ: ಸೇತುವೆ ನಿರ್ಮಾಣದಲ್ಲಿನ ಸಮಸ್ಯೆಯಿಂದ ಈ ಹಿಂದೆಯೂ ಇದೇ ರೀತಿಯ ಘಟನೆಗಳು ಸಂಭವಿಸಿವೆ. ಈ ಕುರಿತು ಸ್ಥಳೀಯ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದಿದ್ದರೂ ಯಾವುದೇ ಶಾಶ್ವತ ಪರಿಹಾರ ಕಲ್ಪಿಸಿಲ್ಲ ಎಂದು ಚೌಡಪ್ಪ ಆರೋಪಿಸಿದ್ದಾರೆ.

ಮಳೆಯಿಂದ ಉಂಟಾಗಿರುವ ಬೆಳೆ ಹಾಗೂ ಜಮೀನಿನ ಹಾನಿಯ ಕುರಿತು ಅಧಿಕಾರಿಗಳು ತಕ್ಷಣ ಸಮೀಕ್ಷೆ ನಡೆಸಿ, ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮುಂದಿನ ದಿನಗಳಲ್ಲಿ ಇದೇ ರೀತಿಯ ಅವಘಡಗಳು ಮರುಕಳಿಸದಂತೆ ಮುಖ್ಯ ಎಂಜಿನಿಯರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು. ಅಗತ್ಯವಿದ್ದಲ್ಲಿ ಸೇತುವೆಯ ಸ್ಥಳ ಅಥವಾ ವಿನ್ಯಾಸ ಬದಲಿಸಿ, ಹಳ್ಳದ ನೀರು ಸರಾಗವಾಗಿ ಹರಿದುಹೋಗುವಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಚೌಡಪ್ಪ ಅವರು ಒತ್ತಾಯಿಸಿದ್ದಾರೆ.