ಅವೈಜ್ಞಾನಿಕ ಡಿವೈಡರ್ ತೆರವು ಕಾರ್ಯಾಚರಣೆ ಶುರು

| Published : Feb 10 2024, 01:48 AM IST / Updated: Feb 10 2024, 05:07 PM IST

ಸಾರಾಂಶ

ಚಿತ್ರದುರ್ಗ ಪ್ರಾದೇಶಿಕ ಕಚೇರಿ ಮುಂಭಾಗ ಶುಕ್ರವಾರ ರಾತ್ರಿ ಡಿವೈಡರ್ ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಯಿತು.

ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗದಲ್ಲಿ ನಿರ್ಮಿಸಲಾದ ಅವೈಜ್ಞಾನಿ ಡಿವೈಡರ್ ತೆರವು ಕಾರ್ಯಾಚರಣೆ ಅಂತೂ ಶುರುವಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಶುಕ್ರವಾರ ಸಂಜೆ ನಡೆದ ಸಭೆಯ ನಂತರ ಶಾಸಕ ವೀರೇಂದ್ರ ಪಪ್ಪಿ ಡಿವೈಡರ್ ತೆರವುಗೊಳಿಸುವ ತೀರ್ಮಾನ ಕೈಗೊಂಡಿದ್ದಾರೆ. ರಾತ್ರಿ 8.20ರ ವೇಳೆಗೆ ಪ್ರಾದೇಶಿಕ ಸಾರಿಗೆ ಕಚೇರಿ ಮುಂಭಾಗ ಶಾಸಕ ವೀರೇಂದ್ರ ಪಪ್ಪಿ ಖುದ್ದು ತೆರವು ಕಾರ್ಯಾಚರಣೆಗೆ ಚಾಲನೆ ನೀಡಿದರು. ನಗರಸಭೆ ಪೌರಾಯುಕ್ತೆ ರೇಣುಕಾ ಈ ವೇಳೆ ಹಾಜರಿದ್ದರು.

ಚಿತ್ರದುರ್ಗದಲ್ಲಿ ಅವೈಜ್ಞಾನಿ ಡಿವೈಡರ್‌ಗಳ ನಿರ್ಮಾಣ ಮಾಡಲಾಗುತ್ತದೆ ಎಂದು ಕನ್ನಡಪ್ರಭ 53 ದಿನಗಳ ಕಾಲ ಸರಣಿ ವರದಿ ಪ್ರಕಟಿಸಿತ್ತು. ಡಿವೈಡರ್ ನಿರ್ಮಿಸುವ ಪೂರ್ವದಲ್ಲಿ ಗ್ರಿಲ್ ಹಾಕುವಾಗಲೇ ಅವೈಜ್ಞಾನಿಕವೆಂಬ ಸಂಗತಿ ನೆನಪು ಮಾಡಿತ್ತು. ಆದರೆ ಅಧಿಕಾರಿಗಳು ಯಾವೊಂದು ನಿಯಮಗಳ ಪಾಲನೆ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಜನಪ್ರತಿನಿಧಿಗಳ ಒತ್ತಡವಿದೆ, ಈ ವಿಚಾರದಲ್ಲಿ ನಾವು ಅಸಹಾಯಕರು ಎಂದಷ್ಟೇ ಹೇಳುತ್ತಿದ್ದರು.

ಡಿವೈಡರ್‌ಗಳು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದಕ್ಕಿಂತ ಮಿಗಿಲಾಗಿ ರಾಜಕೀಯವಾಗಿ ಆಗದ ಶತ್ರೃಗಳ ಅಣಿಯಲೆಂದೇ ವ್ಯವಸ್ಥಿತ ಸಂಚು ಮಾಡಿದಂತೆ ಭಾಸವಾಗಿತ್ತು. ಪ್ರಾದೇಶಿಕ ಸಾರಿಗೆ ಕಚೇರಿ, ಜೆಸಿಆರ್ ಬಡಾವಣೆಯಲ್ಲಿ ಯಂತೂ ರಾಜಕೀಯ ದ್ವೇಷ ಕಾರಿಕೊಳ್ಳಲು ಸರ್ಕಾರಿ ಅನುದಾನ ಬಳಕೆ ಮಾಡಿಕೊಳ್ಳಲಾಗಿದೆಯಾ ಎಂಬ ಅನುಮಾನಗಳ ಮೂಡಿಸಿತ್ತು. 

ಇಂಡಿಯನ್ ರೋಡ್ ಕಾಂಗ್ರೆಸ್ ಯಾವುದೇ ನಿಯಮಗಳ ಪಾಲನೆ ಮಾಡದ ಅಧಿಕಾರಿಗಳು ಸರ್ಕಾರಿ ದುಡ್ಡು ರಸ್ತೆ ಮೇಲೆ ಸುರಿದು ಡಿವೈಡರ್ ನಿರ್ಮಿಸಿದ್ದರು. ಪ್ರಾದೇಶಿಕ ಸಾರಿಗೆ ಕಚೇರಿಗೆ ಹೊಸದಾಗಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಲು ವಾಹನಗಳ ಹೋಗಲು ಸಾಧ್ಯವಾಗದಷ್ಟರ ಮಟ್ಟಿಗೆ ಡಿವೈಡರ್‌ಗಳ ನಿರ್ಮಿಸಲಾಗಿತ್ತು.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಹೋಗುವ ಮಾರ್ಗ ಒನ್ ವೇ ಆಗಿದ್ದು ಅಲ್ಲಿ ಕೇವಲ 22 ಅಡಿಯಷ್ಟು ಜಾಗವಿತ್ತು. ಇಂತಹ ಇಕ್ಕಟ್ಟಾದ ಜಾಗದಲ್ಲಿ ಡಿವೈಡರ್ ನಿರ್ಮಿಸಲಾಗಿತ್ತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳು ನಿತ್ಯವೂ ಡಿವೈಡರ್‌ಗಳಿಗೆ ಉಜ್ಚಿಕೊಂಡೇ ಹೋಗುತ್ತಿದ್ದವು. ಒಮ್ಮುಖ ಮಾರ್ಗದಲ್ಲಿ ಎದುರಿಗೆ ಬಸ್ಸುಗಳು ಬರುವುದಿಲ್ಲವೆಂದಾದಲ್ಲಿ ಅಲ್ಲಿ ಡಿವೈಡರ್‌ಗಳ ನಿರ್ಮಿಸುವ ಅಗತ್ಯವಿತ್ತೇ ಎಂಬ ಪ್ರಶ್ನೆಗೆ ಅಧಿಕಾರಿಗಳ ಬಳಿ ಉತ್ತರವಿರಲಿಲ್ಲ. 

ಇಂಜಿನಿಯರ್ ಗಳಂತೂ ನಗೆ ಪಾಟಲಿಗೆ ಈಡಾಗಿದ್ದರು. ದುರ್ಗದ ತುಂಬಾ ನಿರ್ಮಿಸಿರುವ ಡಿವೈಡರ್‌ಗಳು ಚೈನಾ ವಾಲ್ ಗಳಂತೆ ಭಾಸವಾಗುತ್ತಿದ್ದವು. ಎದೆ ಮಟ್ಟದ ಡಿವೈಡರ್ ಗಳಲ್ಲಿ ಮಣ್ಣು ತುಂಬಿ ಅದರ ಮೇಲೆ ಅಲಂಕಾರಿಕ ಗಿಡಗಳ ಬೆಳೆಸುವ ಪ್ರಯತ್ನ ನಡೆಸಿ ಇದಕ್ಕಾಗಿ ಎರಡು ಕೋಟಿ ರುಪಾಯಿ ವ್ಯಯ ಮಾಡಲಾಗಿತ್ತು. 

ಸರ್ಕಾರಿ ಅನುದಾನ ಮೂರಾಬಟ್ಟೆಯಾಗಿ ಬಳಸಲು ಇರುವ ಮಾರ್ಗಗಳ ಅಧಿಕಾರಿಗಳು ಜಗಜ್ಜಾಹೀರು ಮಾಡಿದ್ದರು. ಜನ, ವಾಹನಗಳು ಸಂಚರಿಸದ ಜೈಲ್ ರಸ್ತೆಗೂ ಕೂಡಾ ಡಿವೈಡರ್ ನಿರ್ಮಿಸಲಾಗಿದೆ. ಡಿವೈಡರ್ ಗಳಿಗೆ ವಾಹನ ಡಿಕ್ಕಿಯಾಗಿ ನಾಲ್ಕು ಮಂದಿ ಅಸು ನೀಗಿದ್ದರು. ಪ್ರಾಣದ ಜೊತೆ ಚೆಲ್ಲಾಟವಾಡುವ ರಸ್ತೆ ವಿಭಜಕಗಳ ಅಗತ್ಯವಿತ್ತೇ ಎಂಬ ಪ್ರಶ್ನೆಗಳಿಗೆ ಉತ್ತರಗಳು ಇದುವರೆಗೂ ದೊರೆತಿಲ್ಲ.

ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಶುಕ್ರವಾರ ಸಂಜೆ ಹಿಂದಿನ ಜಿಲ್ಲಾಧಿಕಾರಿ ದಿವ್ಯಾಪ್ರಭು ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು ಶಾಸಕ ವೀರೇಂದ್ರ ಪಪ್ಪಿ ಕೂಡಾ ಪಾಲ್ಗೊಂಡಿದ್ದರು. 

ತಮ್ಮ ಭಾಷಣದಲ್ಲಿ ಡಿವೈಡರ್ ವಿಷಯ ಪ್ರಸ್ತಾಪಿಸಿದ ವೀರೇಂದ್ರಪಪ್ಪಿ, ಡಿವೈಡರ್ ತೆರವುಗೊಳಿಸುವ ಕೆಲಸವಿದೆ ಎಂದು ಹೇಳಿ ಸಭೆಯಿಂದ ನಿರ್ಗಮಿಸಿದರು. ಅಲ್ಲಿಂದ ನೇರವಾಗಿ ಪ್ರಾದೇಶಿಕ ಸಾರಿಗೆ ಕಚೇರಿ ಮುಂಭಾಗ ಆಗಮಿಸಿ ಡಿವೈಡರ್ ತೆರವು ಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿ ನಿರ್ಗಮಿಸಿದರು.

ತೆರವು ಗೊಳಿಸುವುದು ಎಂದರೆ ಹೇಗೆ ?, ಕೇವಲ ಓಪನ್ ಬಿಡಲಾಗುತ್ತದೆಯೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಗಳು ಲಭ್ಯವಾಗಲಿಲ್ಲ. ತೆರವುಗೊಳಿಸುವ ಕಾರ್ಯಕ್ಕೆ ಹಿಟಾಚಿ ಯಂತ್ರ ಮುಂದಾಗುತ್ತಿದ್ದಂತೆ ವೀರೇಂದ್ರ ಪಪ್ಪಿ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ರಾತ್ರಿ 9-45ರ ಸುಮಾರಿಗೆ ಐವತ್ತು ಅಡಿಯಷ್ಟು ಡಿವೈಡರ್ ನೆಲಸಮ ಮಾಡಿ ಹಿಟಾಚಿ ಯಂತ್ರ ಕಾರ್ಯಾಚರಣೆ ನಿಲ್ಲಿಸಿತ್ತು. ಹಾಗಾಗಿ ತೆರವುಗೊಳಿಸುವ ಕಾರ್ಯಾಚರಣೆ ಪೂರ್ವಾಪರ ಮಾಹಿತಿ ಇನ್ನೊಂದೆರೆಡು ದಿನಗಳಲ್ಲಿ ಬಹಿರಂಗಗೊಳ್ಳಲಿದೆ.