ಸಾರಾಂಶ
ವಾಹನ ಸವಾರರಿಗೆ ಸಾವಿನ ಮನೆಯಂತಿರುವ ರಸ್ತೆ । ಇಳಿಜಾರು ರಸ್ತೆಯ ತಿರುವಿನಿಂದ ಹೆಚ್ಚು ಅಪಘಾತ
ಕನ್ನಡಪ್ರಭ ವಾರ್ತೆ ಸಕಲೇಶಪುರರಾಷ್ಟ್ರೀಯ ಹೆದ್ದಾರಿ ೭೫ ರ ಗುಲಗಳಲೆ ಗ್ರಾಮ ವಾಹನ ಸಾವರರ ಪಾಲಿಗೆ ಯಮದಾರಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ೭೫ ಚತುಷ್ಪಥ ರಸ್ತೆ ನಿರ್ಮಾಣಗೊಂಡ ನಂತರ ಗ್ರಾಮದ ನೂರು ಮೀಟರ್ ಅಂತರದಲ್ಲಿ ಕಳೆದ ಡಿಸಂಬರ್ ೨೩ ರಿಂದ ಜನವರಿ ೧೮ ನಡುವಿನ ೨೫ ದಿನಗಳ ಅವಧಿಯಲ್ಲಿ ೧೩ ಅಪಘಾತಗಳು ಸಂಭವಿಸಿದ್ದು ಐವರು ಮೃತಪಟ್ಟರೆ. ೧೨ ಜನರು ಗಾಯಗೊಂಡಿದ್ದಾರೆ.
ಡಿಸಂಬರ್ ಕೊನೆಯ ವಾರ ಕ್ರಿಸ್‌ಮಸ್ ಹಬ್ಬ ಹಾಗೂ ಹೊಸವರ್ಷ ಆಚರಣೆಗಾಗಿ ತಾಲೂಕಿಗೆ ಬಾರಿ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿದ್ದು, ನಿತ್ಯ ಹೆದ್ದಾರಿಯಲ್ಲಿ ೩೦ ಸಾವಿರಕ್ಕೂ ಅಧಿಕ ವಾಹನಗಳು ಸಂಚರಿಸಿವೆ ಎನ್ನಲಾಗುತಿದೆ. ಇದರಿಂದಾಗಿ ಹಾಸನದಿಂದ ಸಕಲೇಶಪುರದ ವರೆಗಿನ ೪೦ ಕಿ.ಮೀ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ವಾಹನ ದಟ್ಟಣೆಯಿಂದ ಕೂಡಿತ್ತು. ಡಿಸಂಬರ್ ತಿಂಗಳ ೭ ದಿನಗಳ ಅವಧಿಯಲ್ಲಿ ಗುಲಗಳಲೆ ಗ್ರಾಮದ ಒಂದೆ ಪ್ರದೇಶದಲ್ಲಿ ನಾಲ್ಕು ಅಪಘಾತಗಳು ಸಂಭವಿಸುವ ಮೂಲಕ ರಸ್ತೆ ಭಯನಾಕ ಎಂಬ ಮನಸ್ಥಿತಿ ಹುಟ್ಟುಹಾಕಿದೆ. ಡಿಸಂಬರ್ ೨೪ ರಂದು ಸಂಭವಿಸಿದ ಕಾರು ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕ ಮೂಲದ ವ್ಯಕ್ತಿ ಇಬ್ರಾಹಿಂ ಎಂಬುವವರು ಮೃತಪಟ್ಟರೆ, ಡಿಸಂಬರ್ ೨೫ ರಂದು ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಪಟ್ಟಣದ ಅಜಾದ್ ರಸ್ತೆಯ ರಿಯಾಜ್ ಎಂಬ ಯುವಕನೊಬ್ಬ ಗಾಯಗೊಂಡಿದ್ದ. ಅದೆ ತಿಂಗಳ ೨೭ ರಂದು ಕಾರುಗಳ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಗಾಯಗೊಂಡರೆ ಡಿಸಂಬರ್ ೩೧ ರಂದು ಕಾರು ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಇಬ್ಬರು ಮರಣಾಂತಿಕವಾಗಿ ಗಾಯಗೊಂಡಿದ್ದರು. ನಂತರ ಹೊಸವರ್ಷದ ನಾಲ್ಕನೆ ದಿನ ಕಾರುಗಳ ಮುಖಾಮುಖಿ ಡಿಕ್ಕಿಯಿಂದ ಹಾಸನದ ಸಾಲಿಗ್ರಾಮ ಮೂಲದ ಹರೀಶ್ ಎಂಬ ವ್ಯಕ್ತಿಯೊಬ್ಬರು ಮೃತಪಟ್ಟರೆ ಮತ್ತೊಂದು ಕಾರಿನಲ್ಲಿದ್ದ ಮಂಗಳೂರಿನ ಬಜ್ಫೆ ಮೂಲದ ಭೂಷಣ್ ಶೆಟ್ಟಿ ಎಂಬುವವರು ಮರಣಾಂತಿಕವಾಗಿ ಗಾಯಗೊಂಡಿದ್ದರು.ಇದಾದ ಮರುದಿನವೇ ಲಾರಿ ಹಾಗೂ ಮಿನಿಟ್ರಕ್ ಮದ್ಯೆ ಡಿಕ್ಕಿ ಸಂಭವಿಸಿ ಮಿನಿ ಟ್ರಕ್ ಚಾಲಕ ಚನ್ನರಾಯಪಟ್ಟಣದ ಗಾಡೇನಹಳ್ಳಿಯ ಪ್ರಕಾಶ್ ತೀವ್ರವಾಗಿ ಪೆಟ್ಟಾಗಿದೆ. ಜನವರಿ ಹತ್ತರಂದು ಸಂಭವಿಸಿದ ಅಪಘಾತದಲ್ಲಿ ಬಾಳ್ಳು ಪೇಟೆ ಅಂಬೇಡ್ಕರ್ ನಗರದ ಸುಬ್ರಮಣ್ಯ ಎಂಬುವವರು ಕಾಲು ತುಂಡಾದರೆ, ಜನವರಿ ೧೩ ರಂದು ಇದೆ ಪ್ರದೇಶದಲ್ಲಿ ಕಾರುಗಳ ಮದ್ಯೆ ನಡೆದ ಅವಘಡದಲ್ಲಿ ಬೆಂಗಳೂರಿನ ಜೆ.ಪಿ ನಗರದ ವಿಡ್ಸರ್ ಎಂಬುವವರು ಗಾಯಗೊಂಡಿದ್ದರು. ಜನವರಿ ೧೪ ರಂದು ಸಹ ಬೈಕ್‌ಗಳ ಮದ್ಯೆ ಅಪಘಾತ ಸಂಭವಿಸಿದೆಯಾದರು ಹೆಚ್ಚಿನ ಗಾಯಗಳಾಗದೆ ಪೋಲಿಸ್ ಠಾಣೆಯಿಂದ ಹೊರಗೆ ಪ್ರಕರಣ ಇತ್ಯರ್ಥಗೊಂಡಿದೆ.
ಜನವರಿ ೧೫ ರಂದು ಆಟೋ ಹಾಗೂ ಖಾಸಗಿ ಬಸ್ ನಡುವೆ ನಡೆದ ಅಪಘಾತದಲ್ಲಿ ಪಟ್ಟಣದ ಕುಡಗರಹಳ್ಳಿ ಬಡಾವಣೆಯ ಮೋಹನ್‌ಕುಮಾರ್, ರಾಜು ಎಂಬುವವರು ಮೃತಪಟ್ಟರೆ ಜನವರಿ ೧೬ ರಂದು ಕಂಟೈನರ್‌ಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಚಾಲಕರು ಮರಣಾಂತಿಕವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲಾಗಿದೆ. ಜನವರಿ ೧೭ ರಂದು ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರನ ತಲೆ ಹೊರಬಂದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸಾಗಿಸಲಾಗಿದೆ. ಇದರಿಂದಾಗಿ ಗ್ರಾಮ ಸಮೀಪದ ಹೆದ್ದಾರಿ ಸಾವಿನಮನೆ ಯಾಗುತ್ತಿದ್ದು ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ೪೬ ಅಪಘಾತ:ತಾಲೂಕಿನ ಬಾಳ್ಳುಪೇಟೆಯಿಂದ ಸಕಲೇಶಪುರದ ನಡುವಿನ ೧೦ ಕಿ.ಮಿ ಅಂತರದ ಚತುಷ್ಪಥ ಹೆದ್ದಾರಿ ನಿರ್ಮಿಸಲಾಗಿದೆ. ಈ ರಸ್ತೆ ನಿರ್ಮಾಣಗೊಂಡ ನಂತರದ ಒಂದು ವರ್ಷದಲ್ಲಿ ಗುಲಗಳಲೆ ಗ್ರಾಮದ ಅವಘಡಗಳನ್ನು ಹೊರತುಪಡಿಸಿ ೪೬ ಅಪಘಾತಗಳು ಸಂಭವಿಸಿದ್ದು ೧೧ ಜನರು ಮೃತಪಟ್ಟಿದ್ದಾರೆ.
ಬಾಕ್ಸ್.....ಗುಲಗಳಲೆ ದುರಂತಕ್ಕೆ ಕಾರಣ:ತಾಲೂಕಿನ ಯಡೇಹಳ್ಳಿ ಗ್ರಾಮದಿಂದ ಬಾಗೆ ಗ್ರಾಮದವರಗಿನ ಸುಮಾರು ೩ ಕಿ.ಮಿ ಇಳಿಜಾರು ರಸ್ತೆಯಿಂದ ಕೂಡಿದ್ದು, ಅತಿ ವೇಗದಲ್ಲಿ ಬರುವ ವಾಹನ ಸವಾರರಿಗೆ ಗುಲಗಳಲೆ ಗ್ರಾಮದ ತಿರುವು ರಸ್ತೆಯಲ್ಲಿ ನಿಯಂತ್ರಣ ತಪ್ಪತ್ತಿವೆ. ಅಲ್ಲದೆ ಇದೆ ಪ್ರದೇಶದಲ್ಲಿ ಗುತ್ತಿಗೆದಾರರು ಮತ್ತೊಂದು ಬದಿಯನ್ನು ಬಂದ್ ಮಾಡಿದ್ದು ಏಕಮುಖ ಸಂಚಾರಕ್ಕೆ ಅವಕಾಶ ಮಾಡಿದ್ದಾರೆ ಇದು ಸಹ ಅಪಘಾತಗಳಿಗೆ ಕಾರಣವಾಗುತ್ತಿದೆ. ಇದಲ್ಲದೆ ಗುತ್ತಿಗೆದಾರರು ರಸ್ತೆ ಡಿವೈಡರ್ ಇರುವ ಬಗ್ಗೆ ಎಚ್ಚರಿಕೆ ಫಲಕವಾಗಲಿ ರಿಪ್ಲೇಕ್ಟರ್ ಆಗಲಿ, ಸ್ಪೀಡ್ ಬ್ರೇಕರ್ ಹಾಕದೆ ಇರುವುದು ನಿರಂತರ ಅವಘಡಗಳಿಗೆ ಕಾರಣವಾಗುತ್ತಿದೆ. ಮುಸ್ಸಂಜೆ ಅಪಘಾತ:
ಗುಲಗಳಲೆ ಗ್ರಾಮ ಸಮೀಪ ನಡೆದಿರುವ ಅಪಘಾತಗಳೆಲ್ಲ ಮುಸ್ಸಂಜೆ ಅಂದರೆ ಸಂಜೆ ೬ ರಿಂದ ೭ ಗಂಟೆ ನಡುವೆ ನಡೆದಿರುವುದು ಮತ್ತೊಂದು ಆಶ್ಚರ್ಯಕ್ಕೆ ಕಾರಣವಾಗಿದೆ. ಭರತವಳ್ಳಿ ಕ್ರಾಸ್ ನೆನಪು21ನೇ ಶತಮಾನದ ಆರಂಭದಲ್ಲಿ ಆಲೂರು ತಾಲೂಕು ಭರತವಳ್ಳಿ ಗ್ರಾಮ ಸಮೀಪದ ತಿರುವು ರಸ್ತೆ ಸಹ ಅಪಘಾತಗಳ ತವರಾಗಿದ್ದು ೨೦೦೧ ರಿಂದ ೨೦೧೦ ರ ನಡುವೆ ಇದೊಂದೆ ತಿರುವು ರಸ್ತೆಯಲ್ಲಿ ೪೧೦ ಅಪಘಾತಗಳು ಸಂಭವಿಸಿದ್ದು ೫೦ ಕ್ಕೂ ಅಧಿಕ ಜನರು ಪ್ರಾಣಕಳೆದುಕೊಂಡಿದ್ದರು. ನಿರಂತರ ಅಪಘಾತಗಳಿಂದ ಎಚ್ಚೆತ್ತ ಹೆದ್ದಾರಿ ಇಲಾಖೆ ತಿರುವು ರಸ್ತೆಯನ್ನು ೨೦೧೧ ರಲ್ಲಿ ಅಗಲೀಕರಣಗೊಳಿಸುವ ಮೂಲಕ ಅಪಘಾತಗಳಿಗೆ ಕಡಿವಾಣ ಹಾಕಿತ್ತು.ಗುಲಗಳಲೇ ಗ್ರಾಮ ಸಮೀಪ ಬಾರಿ ಪ್ರಮಾಣದಲ್ಲಿ ಅಪಘಾತಗಳಾಗುತ್ತಿರುವುದು ಸತ್ಯ ಈ ಬಗ್ಗೆ ಮುಂಜಾಗ್ರತ ಕ್ರಮಕೈಗೊಳ್ಳುವಂತೆ ಹೆದ್ದಾರಿ ಇಲಾಖೆಯ ಇಂಜಿನಿಯರ್‌ಗಳಿಗೆ ಸೂಚಿಸಿದ್ದೇನೆ.ಪ್ರಮೋದ್ ಜೈನ್. ಡಿವೈಎಸ್ಪಿ ಸಕಲೇಶಪುರ ವಿಭಾಗ.