ಕನ್ನಡಪ್ರಭ ವಾರ್ತೆ ಮುಂಡಗೋಡ

ಅವೈಜ್ಞಾನಿಕವಾಗಿ ಕೈಗೊಂಡ ಸೇತುವೆ ಕಾಮಗಾರಿಯಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡು ಸುಮಾರು ಅರ್ಧ ದಿನಗಳ ಕಾಲ ವಾಹನ ಸವಾರರು ಪರದಾಡಿದ ಪ್ರಸಂಗ ಮಂಗಳವಾರ ನಡೆದಿದೆ.

ಪಟ್ಟಣದ ಹೊರ ವಲಯ ಹುಬ್ಬಳ್ಳಿ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಚಿಕ್ಕ ಸೇತುವೆ ಕಾಮಗಾರಿ ಕೈಗೊಂಡಿದ್ದು, ಪೂರ್ವ ತಯಾರಿಯಾಗಿ ಪರ್ಯಾಯ ರಸ್ತೆ ನಿರ್ಮಾಣ ಮಾಡದೆ ನಿರ್ಲಕ್ಷ್ಯ ಧೋರಣೆಯಿಂದಾಗಿ ಈ ಸ್ಥಿತಿ ಎದುರಾಗಿದೆ.

ಮಂಗಳವಾರ ಬೆಳಗಿನ ಜಾವ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಸಂಪೂರ್ಣ ನೀರು ತುಂಬಿಕೊಂಡಿತಲ್ಲದೇ ರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಯಿತು. ಇದರಿಂದ ಕೆಲ ಭಾರಿ ವಾಹನಗಳು ಕೆಸರಿನಲ್ಲಿ ಸಿಲುಕೊಂಡಿದ್ದರಿಂದ ಎರಡೂ ಕಡೆಗೆ ನೂರಾರು ವಾಹನಗಳು ಸರದಿ ಸಾಲಿನಲ್ಲಿ ನಿಲ್ಲಬೇಕಾಯಿತು. ಬೆಳಗ್ಗೆ ೬ರ ವೇಳೆಗೆ ಕೆಸರು ಗದ್ದೆಯಲ್ಲಿ ಸಿಲುಕಿಕೊಂಡಿದ್ದ ಭಾರಿ ವಾಹನಗಳನ್ನು ಸಾಕಷ್ಟು ಸಮಯದ ಬಳಿಕ ಜೆಸಿಬಿ ಮೂಲಕ ಎಳೆದು ಹೊರತರಲಾಯಿತು. ಮಧ್ಯಾಹ್ನದವರೆಗೂ ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡಿತ್ತು. ಬಹುತೇಕ ಬಸ್, ಕಾರು ಮುಂತಾದ ವಾಹನಗಳು ಮುಂಡಗೋಡ-ಕೋಣನಕೇರಿ-ತಡಸ ಮಾರ್ಗವಾಗಿ ಹುಬ್ಬಳ್ಳಿಗೆ ತೆರಳಿದವು. ಮಧ್ಯಾಹ್ನದ ಬಳಿಕ ತಾತ್ಕಾಲಿಕವಾಗಿ ಮಣ್ಣು ಹಾಕಿ ಸಮತಟ್ಟು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಪರ್ಯಾಯವಾಗಿ ಸಮರ್ಪಕವಾದ ರಸ್ತೆ ನಿರ್ಮಾಣ ಮಾಡದೆ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಕಾಮಗಾರಿ ಕೈಗೊಂಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯತನದಿಂದಾಗಿ ಇಂತಹ ಅವಘಡ ಸಂಭವಿಸಲು ಕಾರಣವಾಗಿದ್ದು, ಇದರಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ.


ಅವೈಜ್ಞಾನಿಕವಾಗಿ ಕೈಗೊಳ್ಳಲಾದ ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆ ಮಾತ್ರವಲ್ಲದೇ ಸರ್ಕಾರಕ್ಕೂ ಹಾನಿಯಾಗಿದೆ. ಇತ್ತೀಚೆಗಷ್ಟೇ ದಲೈಲಾಮಾ ಮುಂಡಗೋಡಗೆ ಆಗಮಿಸುತ್ತಿದ್ದ ವೇಳೆಯಲ್ಲಿ ನಿರ್ವಹಣೆ ಕಾಮಗಾರಿಯಡಿಯಲ್ಲಿ ಈ ರಸ್ತೆಯನ್ನು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಡಾಂಬರೀಕರಣ ಮಾಡಲಾಗಿತ್ತು. ಇದರಿಂದ ಡಾಂಬರೀಕರಣಕ್ಕೆ ವ್ಯಯ ಮಾಡಿದ ಹಣ ವ್ಯರ್ಥವಾಗಿದೆ. ಹಾಗೇನಾದರೂ ಸೇತುವೆ ನಿರ್ಮಾಣ ಮಾಡುವುದಿದ್ದರೆ ರಸ್ತೆ ಡಾಂಬರೀಕರಣ ಮಾಡುವ ಮೊದಲೇ ಸೇತುವೆ ನಿರ್ಮಾಣ ಮಾಡಬಹುದಿತ್ತು ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.