ಸಾರಾಂಶ
ಮಡಿಕೇರಿ : ಮಡಿಕೇರಿಯ ಹೊರವಲಯದಲ್ಲಿರುವ ಕ್ಯಾಪಿಟಲ್ ವಿಲೇಜ್ ನಲ್ಲಿ ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ನ 66 ನೇ ಎರಡು ದಿನಗಳ ವಾರ್ಷಿಕ ಸಮ್ಮೇಳನ ಆಯೋಜಿತವಾಗಿದೆ.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಭಾರತ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಮ್ಯಾಥ್ಯು ಅಬ್ರಾಹಂ ಕಾರ್ಮಿಕರನ್ನೇ ನಂಬಿರುವ ಕಾಫಿ ಉದ್ಯಮವು ಇಂದು ಕವಲುದಾರಿಯಲ್ಲಿದೆ. ಕಾಫಿ ಬೆಳೆಗೆ ಇನ್ನು 3 ವರ್ಷಗಳ ಕಾಲ ಅತ್ಯುತ್ತಮ ಬೆಲೆ ನಿರೀಕ್ಷಿಸಬಹುದಾಗಿದ್ದರೂ ಅಕಾಲಿಕ ಮಳೆ, ಗಾಳಿಯಂಥ ಹವಾಮಾನ ವೈಪರೀತ್ಯದಿಂದಾಗಿ ಕಾಫಿಯ ಉತ್ಪಾದನೆ ನಿರೀಕ್ಷೆಗೂ ಮೀರಿ ಕಡಮೆಯಾಗುತ್ತಿದೆ, ಅಂತೆಯೇ ಅಕಾಲಿಕ ಮಳೆ ಹಾಗೂ ಕಾರ್ಮಿಕರು ಸರಿಯಾದ ಸಮಯಕ್ಕೆ ದೊರಕದ ಹಿನ್ನೆಲೆಯಲ್ಲಿಯೂ ಕಾಫಿ ಬೆಳೆಯ ಗುಣಮಟ್ಟ ಕೂಡ ಕುಂಠಿತವಾಗಿದೆ. ಈ ಸವಾಲುಗಳನ್ನು ಎದುರಿಸುವುದೇ ಇಂದಿನ ತುರ್ತು ಅಗತ್ಯವಾಗಿದೆ ಎಂದು ಹೇಳಿದರು.
ಬ್ರೆಜಿಲ್, ಕೊಲಂಬಿಯಾ, ಮೆಕ್ಸಿಕೋದಂಥ ಜಗತ್ತಿನ ಪ್ರಮುಖ ಕಾಫಿ ಬೆಳೆಗಾರ ದೇಶಗಳಲ್ಲಿಯೂ ಈಗ ಕಾಫಿ ಉತ್ಪಾದನೆ ಗಣನೀಯವಾಗಿ ಕುಂಠಿತವಾಗಿದೆ, ಹೀಗಾಗಿ ಭಾರತದ ಕಾಫಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಮುಂದಿನ 3 ವರ್ಷಗಳ ಕಾಲ ಉತ್ತಮ ಬೇಡಿಕೆ ಲಭಿಸುವ ಎಲ್ಲ ಸಾಧ್ಯತೆಗಳಿದೆ, ಹೀಗಿದ್ದಾಗ ಹೆಚ್ಚಿನ ಅಥವಾ ಕಡಮೆ ಮಳೆ, ಜತೆಗೆ ಅಕಾಲಿಕವಾಗಿ ಸುರಿಯುತ್ತಾ ಫಸಲಿನ ಮೇಲೆ ಪರಿಣಾಮ ಬೀರುತ್ತಿರುವ ಮಳೆಯಿಂದಾಗಿ ಭಾರತದಲ್ಲಿಯೂ ಕಾಫಿ ಉತ್ಪಾದನೆ ಇಳಿಮುಖವಾಗಲಿದೆ, ಇದು ಬೆಳೆಗಾರರ ಪಾಲಿಗೆ ಕಳವಳಕಾರಿಯಾದ ವಿಚಾರ ಎಂದು ಅಬ್ರಾಹಂ ವಿಷಾದಿಸಿದರು.
ಕರ್ನಾಟಕದಲ್ಲಿ ಈ ಕೃಷಿ ಸಾಲಿನಲ್ಲಿ ಅರೆಬಿಕಾ ಕಾಫಿಯ ಉತ್ಪಾದನೆಯಲ್ಲಿ ಶೇ. 50 ರಷ್ಟು ಕುಂಠಿತವಾಗಲಿದ್ದು, ಕಾಫಿ ಕೃಷಿಕರ ನೆರವಿಗೆ ಸರ್ಕಾರಗಳು ಇನ್ನಾದರೂ ಬರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಅವರು ಆಗ್ರಹಿಸಿದರು.
ಉಪಾಸಿಯ ಕಾಫಿ ಸಮಿತಿ ಅಧ್ಯಕ್ಷ ಸಹದೇವ ಬಾಲಕೃಷ್ಣ ಮಾಹಿತಿ ನೀಡಿ, ಕಾಫಿಗೆ ಕಳೆದ 4-5 ವರ್ಷಗಳಿಂದ ಸುಸ್ಥಿರವಾದ ಬೆಲೆ ಲಭಿಸುತ್ತಿದೆ. ಆದರೆ, ಕಾಫಿ ಕಣ, ಯಂತ್ರೋಪಕರಣಗಳು, ಕಾಫಿ ಉದ್ಯಮಗಳಿಗೆ ಅಗತ್ಯ ಪರಿಕರಗಳನ್ನು ಖರೀದಿಸಲು ಅಗತ್ಯವಾದ ಅಧಿಕ ಆರ್ಥಿಕ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ, 15 ವರ್ಷಗಳಿಂದಲೂ ಕಾಫಿ ಬೆಳೆಗಾರರು, ಉದ್ಯಮಿಗಳು ಕಷ್ಟದ ದಿನಗಳನ್ನೇ ಎದುರಿಸುತ್ತಾ ಬಂದಿದ್ದಾರೆ ಎಂದು ವಿಷಾದಿಸಿದರು.
ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಕಳ್ಳಿಚಂಡ ರಾಜೀವ್ ಗಣಪತಿ ಮಾತನಾಡಿ, ಕಾಫಿ ಉದ್ಯಮದ ಸಮಸ್ಯೆಗಳ ಪರಿಹಾರಕ್ಕಾಗಿ ಸೂಕ್ತ ರೀತಿಯಲ್ಲಿ ಸಂಶೋಧನೆ ನಡೆಯಬೇಕಾಗಿದೆ, ಅಂತೆಯೇ ಅಗತ್ಯವಾದ ಅಭಿವೃದ್ಧಿ ಕಾರ್ಯಯೋಜನೆಗಳೂ ಜಾರಿಯಾಗಬೇಕಾಗಿದೆ, ಹವಾಮಾನ ವೈಪರೀತ್ಯ, ಕೀಟಗಳ ನಿವಾರಣೆಗೆ ಮಾರ್ಗೋಪಾಯ ಕಂಡುಕೊಳ್ಳುವಿಕೆ, ಕಾಫಿ ಗಿಡಗಳಿಗೆ ತಗುಲುತ್ತಿರುವ ಮಾರಕ ರೋಗ, ಕೀಟಬಾಧೆಗೆ ಪರಿಹಾರ, ಹೊಸ ತಳಿಗಳಿಗೆ ಪ್ರೋತ್ಸಾಹ, ತಾಂತ್ರಿಕತೆಯ ಉನ್ನತೀಕರಣ ಮತ್ತು ಅಭಿವೃದ್ಧಿ , ಕಾಫಿ ಉತ್ಪನ್ನಗಳ ಗುಣಮಟ್ಟ ಹೆಚ್ಚಳದ ಬಗ್ಗೆಯೂ ಸಮಗ್ರ ಸಂಶೋಧನೆ ನಡೆಸಲು ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಕಾಫಿ ಮತ್ತು ಟೀಯನ್ನು ಆಂತರಿಕ ಬಳಕೆ ಹೆಚ್ಚಳಕ್ಕೆ ಹೆಚ್ಚು ಪ್ರೋತ್ಸಾಹದ ಪ್ರಚಾರ ನೀಡುವ ಅಗತ್ಯವಿದೆ. ವಿಶ್ವವಿದ್ಯಾಲಯಗಳು ಮತ್ತು ವಿವಿಧ ಸಂಘಸಂಸ್ಥೆಗಳ ಸಹಯೋಗ ಪಡೆದು ಕಾಫಿ ಸೇರಿದಂತೆ ಕೃಷಿ ಬೆಳೆಗಳ ಉತ್ಪಾದನೆ ಹಾಗೂ ಮಾರುಕಟ್ಟೆ ವೃದ್ಧಿಗೆ ಸರ್ಕಾರ ಯೋಜನೆ ರೂಪಿಸುವಂತಾಗಬೇಕು ಎಂದು ರಾಜೀವ್ ಸಲಹೆ ನೀಡಿದರು.
ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಎ ಅರವಿಂದ್ ರಾವ್, ಉಪಾಸಿಯ ಉಪಾಧ್ಯಕ್ಷ ಅಜಯ್ ತಿಮ್ಮಯ್ಯ, ಕಾರ್ಯದರ್ಶಿ ಆರ್ ಸಂಜಿತ್ ಸುದ್ದಿಗೋಷ್ಠಿಯಲ್ಲಿದ್ದರು.
ಸಮ್ಮೇಳನದ ಅಂಗವಾಗಿ ಕೃಷಿ ಯಂತ್ರೋಪಕರಣಗಳು, ಕಾಫಿಯ ಹೊಸ ಅವಿಷ್ಕಾರಗಳ ಬಗೆಗಿನ ಪ್ರದರ್ಶನ ಮಳಿಗೆಗಳು ಗಮನ ಸೆಳೆದವು.