ಸಾರಾಂಶ
ಹುಬ್ಬಳ್ಳಿ:
ಅಂಜಲಿ ಅಂಬಿಗೇರ ಹತ್ಯೆಯಲ್ಲಿ ಬೇರೆಯವರ ಕೈವಾಡವೂ ಇರುವ ಅನುಮಾನಗಳಿವೆ. ಆರೋಪಿ ಗಿರೀಶ ಸಾವಂತ್ ಮುಂದಿಟ್ಟುಕೊಂಡು ಕೊಲೆ ಮಾಡಲಾಗಿದೆ ಎಂಬ ಮಾತು ಕೇಳಿ ಬರುತ್ತಿವೆ. ಹೀಗಾಗಿ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಸಮತಾ ಸೇನಾ ಹಾಗೂ ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳದ ಪದಾಧಿಕಾರಿಗಳು ಸಿಐಡಿ ಡಿಜಿಪಿ ಡಾ. ಎಂ.ಎ. ಸಲೀಂ ಅವರಿಗೆ ಮನವಿ ಸಲ್ಲಿಸಿದರು.ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಿಐಡಿ ಡಿಜಿಪಿ ಅವರನ್ನು ಭೇಟಿಯಾದ ಪದಾಧಿಕಾರಿಗಳು ಈ ಕುರಿತು ಮನವಿ ಸಲ್ಲಿಸಿದರು. ಅಂಜಲಿ ಹತ್ಯೆ ಪ್ರಕರಣದಲ್ಲಿ ಕಾಣದ ಕೈಗಳು ಕೂಡಿಕೊಂಡು ಯಾರನ್ನೋ ಉಳಿಸುವ ಪ್ರಯತ್ನ ಮಾಡುತ್ತಿವೆ. ದಿನಕ್ಕೊಂದು ಹೇಳಿಕೆ ನೀಡಿ ತನಿಖೆ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಈಗಾಗಲೇ ವೀರಾಪುರ ಓಣಿಯಲ್ಲಿ ಆರೋಪಿ ಗಿರೀಶನನ್ನು ಮುಂದಿಟ್ಟುಕೊಂಡು ಅಂಜಲಿ ಕೊಲೆ ಮಾಡಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕಾಗಿ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಮನವಿ ಸ್ವೀಕರಿಸಿದ ಡಿಜಿಪಿ ಸಲೀಂ ಅವರು, ಸಮಗ್ರ ತನಿಖೆ ನಡೆಸುವುದಾಗಿ ಹೇಳಿದರು.
ಮನವಿ ಸಲ್ಲಿಕೆ ವೇಳೆ ಮಹಾಮಂಡಳದ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ, ಮಂಜುನಾಥ ಉಳ್ಳಿಕಾಶಿ, ಲೋಹಿತ ಗಾಮನಗಟ್ಟಿ, ಇಮ್ತಿಯಾಜ್ ಬಿಜಾಪುರ, ಕವಿತಾ ನಾಯ್ಕರ್, ರವಿ ಕದಂ, ರಮೇಶ ಪವಾರ, ಫಾರೂಕ್ ಬೇಪಾರಿ ಸೇರಿದಂತೆ ಇತರರು ಇದ್ದರು.ಸಮಗ್ರ ತನಿಖೆ ನಡೆಸಿ:ಮನವಿ ಸಲ್ಲಿಕೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಗುರುನಾಥ ಉಳ್ಳಿಕಾಶಿ, ಅಂಜಲಿ ಕೊಲೆ ಹಿಂದೆ ಯಾರ್‍ಯಾರು ಇದ್ದಾರೆ ಎಂದು ಸಂಪೂರ್ಣ ತನಿಖೆ ನಡೆಸಬೇಕು. ಕೆಲವರು ತನಿಖೆಯ ದಿಕ್ಕು ತಪ್ಪಿಸುತ್ತಿರುವ ಪರಿಣಾಮ ಸರ್ಕಾರ ದಲಿತ ವಿರೋಧಿಯಂತೆ ದಕ್ಷ ಮತ್ತು ದಲಿತ ಸಮುದಾಯದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದೆ. ಇದರಿಂದ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದೆ ಎಂದು ದೂರಿದರು.
ಅಂಜಲಿ ಅಜ್ಜಿ 2021ರಲ್ಲಿ ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣವೊಂದನ್ನು ದಾಖಲಿಸಿದ್ದರು. ಅದರ ದೋಷಾರೋಪಣೆ ಪಟ್ಟಿಯಲ್ಲಿ ಈರಣ್ಣ ಅಲಿಯಾಸ್ ವಿಜಯ ಕಲ್ಲನಮಠ (ಹಿರೇಮಠ) ಎಂಬಾತ ಪ್ರಮುಖ ಆರೋಪಿ ಎಂದು ನಮೂದಿಸಲಾಗಿದೆ. ಈ ಪ್ರಕರಣದ ವಿಚಾರಣೆ ಮುಂದಿನ ತಿಂಗಳು 18ರಂದು ನಡೆಯಲಿದೆ. ಅಂಜಲಿ ಕೊಲೆ ಮಾಡಿದರೆ ಪ್ರಕರಣವೇ ಮುಚ್ಚಿಹೋಗಲಿದೆ ಎಂದು ಗಿರೀಶನನ್ನು ಮುಂದಿಟ್ಟುಕೊಂಡು ಕೊಲೆ ಮಾಡಿಸಿರುವ ಗುಮಾನಿ ಇದೆ. ಅದರಲ್ಲೂ ಗಿರೀಶ ಜತೆಗೆ ಈರಣ್ಣ ನಿರಂತರ ಸಂಪರ್ಕದಲ್ಲಿದ್ದನು ಎಂಬ ಮಾಹಿತಿಯೂ ಇದೆ ಎಂದರು.ಈ ನಿಟ್ಟಿನಲ್ಲಿ ತನಿಖೆ ನಡೆದರೆ ಮತ್ತಷ್ಟು ಸತ್ಯಾಸತ್ಯತೆ ಹೊರಬೀಳಲಿದೆ. ಹಾಗಾಗಿ ಪ್ರಕರಣ ದಾಖಲಾದಾಗ ಆರೋಪಿಯನ್ನು ಯಾರು ರಕ್ಷಿಸಿದರು? ಆತನಿಗೆ ಯಾರು ಆಶ್ರಯ ನೀಡಿದ್ದರು? ಆತನ ಜತೆ ಯಾರ್‍ಯಾರು ಸಂಪರ್ಕದಲ್ಲಿದ್ದರು? ಎಂದು ತಿಳಿಯಲಿದೆ. ಈರಣ್ಣ ವಿರುದ್ಧ ಪ್ರಕರಣ ದಾಖಲಾದಾಗ ಜಾಮೀನು ಕೊಡಿಸಿದ್ಯಾರು? ಅಂಜಲಿ ಕೊಲೆ ನಂತರ ಆತ ಏಕೆ ತಲೆಮರೆಸಿಕೊಂಡಿದ್ದಾನೆ? ಎಂಬುದರ ಕುರಿತು ಕೂಲಂಕುಷ ತನಿಖೆಯಾದರೆ ಸತ್ಯಾಂಶ ಬಹಿರಂಗವಾಗಲಿದೆ ಎಂದು ತಿಳಿಸಿದರು.
2021ರ ದಾಖಲಾದ ಪ್ರಕರಣದ ಆರೋಪಿಯು ನಿರಂಜನಯ್ಯ ಹಿರೇಮಠ ಅವರ ಆಪ್ತ ಸಹಾಯಕ ಎಂಬ ಮಾಹಿತಿ ನನಗೆ ಗೊತ್ತಿಲ್ಲ. ಆದರೆ, ಅಂಜಲಿ ಕೊಲೆಯಾದಾಗ ನಡೆದ ಪ್ರತಿಭಟನೆಯಲ್ಲಿ ನಿರಂಜನಯ್ಯ ಅವರೇ ಮುಂಚೂಣಿಯಲ್ಲಿದ್ದರು. ಅವರು ಕೂಡಾ ಅಂಜಲಿ ಕೊಲೆ ಪ್ರಕರಣದ ಹಿಂದೆ ಕಾಣದ ಕೈಗಳಿವೆ ಎಂದು ದೂರಿದ್ದರು. ಹೀಗಾಗಿ ಸಿಐಡಿ ಅಧಿಕಾರಿಗಳ ತಂಡ ಯಾರ ಒತ್ತಡಕ್ಕೂ ಮಣಿಯದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಈ ಮೂಲಕ ಸತ್ಯಾಂಶ ಬಯಲಿಗೆ ತರುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.ಕಮಿಷನರ್ ಜತೆ ಡಿಜಿಪಿ ಸಭೆಅಂಜಲಿ ವಿಚಾರವಾಗಿ 2021ರಲ್ಲಿ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮತಾ ಸೇನಾ ಹಾಗೂ ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ ಸಿಐಡಿ ಡಿಜಿಪಿ ಡಾ. ಎಂ.ಎ. ಸಲೀಂ ಅವರಿಗೆ ಮನವಿ ಸಲ್ಲಿಸಿದ ಬೆನ್ನಲ್ಲೆ ನಗರದ ಪ್ರವಾಸಿ ಮಂದಿರದಲ್ಲಿ ಹು-ಧಾ ಮಹಾನಗರ ಕಮಿಷನರ್ ರೇಣುಕಾ ಸುಕುಮಾರ್, ಡಿಸಿಪಿಗಳಾದ ಕುಶಾಲ ಚೌಕ್ಸೆ ಮತ್ತು ರವೀಶ್ ಸಿ.ಆರ್, ಎಸಿಪಿ ಶಿವಪ್ರಕಾಶ ನಾಯ್ಕ ಜತೆ ದಿಢೀರ್ ಸಭೆ ನಡೆಸಿದರು.
ನಂತರ 2021ರ ಬೆಂಡಿಗೇರಿ ಠಾಣೆಯಲ್ಲಿ ದಾಖಲಾದ (ಅಪರಾಧ ಸಂಖ್ಯೆ 0166/2021) ಪ್ರಕರಣದ ತನಿಖೆಯ ಕಡತ ಪರಿಶೀಲಿಸಿ ಅಗತ್ಯ ಮಾಹಿತಿ ಪಡೆದರು. 2021ರ ಪ್ರಕರಣದ ಆರೋಪಿ ಈರಣ್ಣ ಅಲಿಯಾಸ್ ವಿಜಯ್ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದು, ಆ ನಿಟ್ಟಿನಲ್ಲಿ ತನಿಖೆ ನಡೆಸಲು ಯೋಜನೆ ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ.