ಅಕುಶಲ ಕೂಲಿಕಾರರು ಉದ್ಯೋಗ ಖಾತ್ರಿ ಸದುಪಯೋಗ ಪಡೆದುಕೊಳ್ಳಿ-ಕುಮಾರ ಪೂಜಾರ

| Published : Apr 22 2025, 01:51 AM IST

ಅಕುಶಲ ಕೂಲಿಕಾರರು ಉದ್ಯೋಗ ಖಾತ್ರಿ ಸದುಪಯೋಗ ಪಡೆದುಕೊಳ್ಳಿ-ಕುಮಾರ ಪೂಜಾರ
Share this Article
  • FB
  • TW
  • Linkdin
  • Email

ಸಾರಾಂಶ

ಉದ್ಯೋಗ ಖಾತ್ರಿ ಯೋಜನೆಯಡಿ 2025-26ನೇ ಸಾಲಿನಿಂದ ಪ್ರತಿಯೊಬ್ಬ ಕೂಲಿಕಾರರಿಗೆ ದಿನಕ್ಕೆ 370 ರು. ಕೂಲಿ ಸಿಗಲಿದ್ದು, ಅಕುಶಲ ಕೂಲಿಕಾರರು ಸದುಪಯೋಗ ಪಡೆಯಬೇಕು ಎಂದು ತಾಪಂ ಸಹಾಯಕ ನಿರ್ದೇಶಕ (ಗ್ರಾ.ಉ.) ಕುಮಾರ ಪೂಜಾರ ಹೇಳಿದರು.

ಗದಗ: ಉದ್ಯೋಗ ಖಾತ್ರಿ ಯೋಜನೆಯಡಿ 2025-26ನೇ ಸಾಲಿನಿಂದ ಪ್ರತಿಯೊಬ್ಬ ಕೂಲಿಕಾರರಿಗೆ ದಿನಕ್ಕೆ 370 ರು. ಕೂಲಿ ಸಿಗಲಿದ್ದು, ಅಕುಶಲ ಕೂಲಿಕಾರರು ಸದುಪಯೋಗ ಪಡೆಯಬೇಕು ಎಂದು ತಾಪಂ ಸಹಾಯಕ ನಿರ್ದೇಶಕ (ಗ್ರಾ.ಉ.) ಕುಮಾರ ಪೂಜಾರ ಹೇಳಿದರು.ತಾಲೂಕಿನ ಬೆಳಹೋಡ ಗ್ರಾಮದಲ್ಲಿ 2025-26ನೇ ಸಾಲಿನಲ್ಲಿ ನರೇಗಾ ಯೋಜನೆಯ ಸಮುದಾಯ ಬದು ನಿರ್ಮಾಣ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು.

ಉದ್ಯೋಗ ಖಾತ್ರಿ ಸಮುದಾಯ ಕಾಮಗಾರಿಗಳ ಹಾಜರಾತಿ ಕಡ್ಡಾಯವಾಗಿ ಎನ್ಎಂಎಂಎಸ್ ತಂತ್ರಾಂಶದಲ್ಲಿ ಪ್ರತಿದಿನ ಎರಡು ಬಾರಿ ಅಳವಡಿಸಬೇಕು. ಕಾಯಕ ಬಂಧುಗಳು ಮತ್ತು ಕೂಲಿಕಾರರು ಬೆಳಗ್ಗೆ 6ಕ್ಕೆ ಕೆಲಸಕ್ಕೆ ಹಾಜರಾಗಬೇಕು ಎಂದರು.

ಕಳೆದ ವರ್ಷ ಪ್ರತಿ ದಿನಕ್ಕೆ 349 ರು. ಕೂಲಿ ಇತ್ತು. ಏ.1ರಿಂದ ಕೂಲಿ ಮೊತ್ತ 370ಕ್ಕೆ ಹೆಚ್ಚಳವಾಗಿದೆ. ಅಳತೆಗೆ ತಕ್ಕಂತೆ ಕೆಲಸ ಮಾಡಬೇಕು. ಅಳತೆಯಂತೆ ಕೆಲಸ ಮಾಡಿದರಷ್ಟೆ ಸಂಪೂರ್ಣ ಕೂಲಿ ಮೊತ್ತ ಸಿಗಲಿದೆ. ಗ್ರಾಮೀಣ ಪ್ರದೇಶದ ಬಡ ಅಕುಶಲ ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಉದ್ಯೋಗ ಒದಗಿಸಲಾಗುತ್ತಿದೆ. ಕಂದಕ ಬದು ನಿರ್ಮಾಣ ಕಾಮಗಾರಿಯಿಂದ ರೈತರ ಜಮೀನಿನಲ್ಲಿ ಸುರಿದ ಮಳೆ ನೀರು ಮತ್ತು ಮಣ್ಣು ಹೊರ ಹೋಗದಂತೆ ತಡೆಯಬಹುದು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಳಕ್ಕೂ ಪೂರಕವಾಗಿದೆ ಎಂದರು.ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಜೊತೆಯಾಗಿರುವ ಉದ್ಯೋಗ ಖಾತ್ರಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ನರೇಗಾ ಯೋಜನೆಯಡಿ ಉದ್ಯೋಗ ಚೀಟಿ ಹೊಂದಿರುವ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 100 ದಿನಗಳ ಕೆಲಸ ನೀಡಲಾಗುತ್ತಿದೆ‌. ಅರ್ಹ ಕುಟುಂಬಕ್ಕೆ 5 ಲಕ್ಷ ರು. ಮಿತಿಯೊಳಗೆ ವೈಯಕ್ತಿಕ ಕಾಮಗಾರಿ ಸೌಲಭ್ಯ ಪಡೆದುಕೊಳ್ಳಲು ಅವಕಾಶವಿದೆ. ಪುರುಷ-ಮಹಿಳೆ ಎಂಬ ಭೇದವಿರದೆ ಎಲ್ಲರಿಗೂ ಸಮಾನ ಕೂಲಿ ನೀಡಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಗ್ರಾಪಂ ಕಾರ್ಯದರ್ಶಿ ಮಹಾಲಿಂಗಯ್ಯ ಹಿರೇಮಠ, ತಾಂತ್ರಿಕ ಸಹಾಯಕ ಅಲ್ತಾಫ್ ಅಮ್ಮಿನಬಾವಿ, ಬಿಲ್ ಕಲೆಕ್ಟರ್ ಉಮೇಶ ಮುದಕವಿ, ಬಿಎಫ್‌ಟಿ ಮಂಜುನಾಥ ಬಂಡಿವಾಡ, ಜಿಕೆಎಂ ಪೃಥ್ವಿ ಗಟ್ಟೇನ್ನವರ, ಕಾಯಕ ಬಂಧುಗಳು, ಕೂಲಿಕಾರರು ಇದ್ದರು.