ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣಗಳಲ್ಲಿ ಮಧ್ಯವರ್ತಿಗಳ ಶೋಷಣೆ ತಪ್ಪಿಸಿ ರೈತರಿಗೆ ಪೂರ್ಣ ಬೆಲೆ ಸಿಗುವಂತೆ ಮಾಡಲು ರೂಪಿಸಲಾದ ಕಾಯ್ದೆ, ಕಾನೂನುಗಳು ಕಾಗದದಲ್ಲೇ ಉಳಿದಿವೆ.
ಕಾನೂನಾಗಿ 20 ವರ್ಷ ಕಳೆದರೂ ಅನ್ನದಾತನ ಹಣಕ್ಕೆ ಬೀಳುತ್ತಿದೆ ಕತ್ತರಿ!
ರಾಜ್ಯದ 160 ಎಪಿಎಂಸಿಗಳಲ್ಲಿ ವಾರ್ಷಿಕ ₹40 ಸಾವಿರ ಕೋಟಿ ವಹಿವಾಟು ಡಿಜಿಟಲ್ ಪಾವತಿ ಬದಿಗೊತ್ತಿ ರೈತರಿಂದಲೇ ಅಕ್ರಮ ಕಮಿಷನ್ ವಸೂಲಿಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ ಗದಗರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣಗಳಲ್ಲಿ ಮಧ್ಯವರ್ತಿಗಳ ಶೋಷಣೆ ತಪ್ಪಿಸಿ ರೈತರಿಗೆ ಪೂರ್ಣ ಬೆಲೆ ಸಿಗುವಂತೆ ಮಾಡಲು ರೂಪಿಸಲಾದ ಕಾಯ್ದೆ, ಕಾನೂನುಗಳು ಕಾಗದದಲ್ಲೇ ಉಳಿದಿವೆ. ಎಪಿಎಂಸಿಗಳಲ್ಲಿ ಕಮಿಷನ್ ಏಜೆಂಟರು (ದಲ್ಲಾಳಿಗಳು) ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿ ರೈತರಿಂದಲೇ ನೇರವಾಗಿ ಕಮಿಷನ್ ಕಡಿತ ಮಾಡಿಕೊಳ್ಳುತ್ತಿರುವ ಅಕ್ರಮ ವ್ಯವಹಾರ ರಾಜ್ಯಾದ್ಯಂತ ಅವ್ಯಾಹತವಾಗಿ ಸಾಗಿದೆ.
ರಾಜ್ಯದಲ್ಲಿ ಸದ್ಯ 160ಕ್ಕೂ ಅಧಿಕ ಮುಖ್ಯ ಎಪಿಎಂಸಿ ಮಾರುಕಟ್ಟೆಗಳು ಹಾಗೂ 350ಕ್ಕೂ ಹೆಚ್ಚು ಉಪ ಮಾರುಕಟ್ಟೆಗಳು ಕಾರ್ಯ ನಿರ್ವಹಿಸುತ್ತಿವೆ. ಈ ಮಾರುಕಟ್ಟೆಗಳಲ್ಲಿ 35 ಸಾವಿರಕ್ಕೂ ಹೆಚ್ಚು ನೋಂದಾಯಿತ ವರ್ತಕರು ಮತ್ತು ಕಮಿಷನ್ ಏಜೆಂಟರಿದ್ದಾರೆ. ಪ್ರಸ್ತುತ ರಾಜ್ಯದ ಎಲ್ಲ ಎಪಿಎಂಸಿಗಳಲ್ಲಿ ವರ್ಷಕ್ಕೆ ಸರಾಸರಿ ₹40 ಸಾವಿರ ಕೋಟಿಯಿಂದ ₹50 ಸಾವಿರ ಕೋಟಿ ಮೊತ್ತದ ಕೃಷಿ ವಹಿವಾಟು ನಡೆಯುತ್ತದೆ.ಅನ್ನದಾತರಿಗೆ ನಷ್ಟ:
ರೈತರಿಂದ ಕಮಿಷನ್ ಪಡೆಯುವುದು ಕಾನೂನು ಬಾಹಿರವಾಗಿದ್ದರೂ, ಶೇ. 2ರಿಂದ ಶೇ. 3ರಷ್ಟು ಕಮಿಷನ್ ಕಡಿತ ಮಾಡಲಾಗುತ್ತಿದೆ. ಇದರ ಪರಿಣಾಮವಾಗಿ ರಾಜ್ಯದ ರೈತ ಸಮುದಾಯ ಪ್ರತಿವರ್ಷ ಕನಿಷ್ಠ ₹800ರಿಂದ ₹1000 ಕೋಟಿಗೂ ಅಧಿಕ ಮೊತ್ತವನ್ನು ದಲ್ಲಾಳಿಗಳಿಗೆ ಕಳೆದುಕೊಳ್ಳುವಂತಾಗಿದೆ. ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ 1966ರ ಸೆಕ್ಷನ್ 70 ಹಾಗೂ ಲೇವಾದೇವಿ ನಿಯಮಗಳಿಗೆ ಸುಮಾರು ಎರಡು ದಶಕಗಳ ಹಿಂದೆಯೇ (ಡಿ.ಆರ್. ಪಾಟೀಲರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ) ಐತಿಹಾಸಿಕ ತಿದ್ದುಪಡಿ ತರಲಾಗಿತ್ತು. ನಿಯಮದ ಪ್ರಕಾರ, ಕಮಿಷನ್ ಏಜೆಂಟರು ಸರಕು ಖರೀದಿಸುವ ವರ್ತಕರಿಂದ ಮಾತ್ರ ಶೇ. 1.5ರಿಂದ ಶೇ. 2ರಷ್ಟು ಕಮಿಷನ್ ಪಡೆಯಬೇಕು. ರೈತರಿಗೆ ಯಾವುದೇ ರೀತಿಯ ಕಡಿತವಿಲ್ಲದೆ ಸಂಪೂರ್ಣ ಮೊತ್ತವನ್ನು ಪಾವತಿಸುವುದು ಕಡ್ಡಾಯವಿದೆ.ನಗದು ವ್ಯವಹಾರದಲ್ಲೇ ಅಕ್ರಮ:
ರಾಜ್ಯದಲ್ಲಿ ಇ-ನಾಮ್ ತಂತ್ರಾಂಶದಡಿ ವರ್ತಕರು ಮತ್ತು ಕಮಿಷನ್ ಏಜೆಂಟರ ನಡುವಿನ ಹಣಕಾಸಿನ ವ್ಯವಹಾರ ಡಿಜಿಟಲ್ ರೂಪದಲ್ಲೇ ನಡೆಯುತ್ತಿದೆ. ನಿಯಮದಂತೆ ಏಜೆಂಟರು ಸಹ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಡಿಜಿಟಲ್ ಪಾವತಿ ಮಾಡಬೇಕು. ಆದರೆ, ಬಹುತೇಕ ಎಪಿಎಂಸಿಗಳಲ್ಲಿ ದಲ್ಲಾಳಿಗಳು ತಂತ್ರಾಂಶವನ್ನು ಬದಿಗೊತ್ತಿ, ರೈತರಿಗೆ ನಗದು ಅಥವಾ ಚೆಕ್ ನೀಡುವ ಪದ್ಧತಿಯನ್ನೇ ಮುಂದುವರಿಸಿದ್ದಾರೆ. ಈ ನಗದು ವ್ಯವಹಾರದ ನೆಪದಲ್ಲೇ ರೈತರ ಪಾಲಿನ ಹಣದಲ್ಲಿ ಕಮಿಷನ್ ಮುರಿದುಕೊಳ್ಳಲಾಗುತ್ತಿದೆ. ಕಮಿಷನ್ ಏಜೆಂಟರು ಮತ್ತು ರೈತರ ನಡುವಿನ ವಹಿವಾಟನ್ನು ಕಡ್ಡಾಯವಾಗಿ ನೂರಕ್ಕೆ ನೂರು ಡಿಜಿಟಲೀಕರಣಗೊಳಿಸಿದಾಗ ಮಾತ್ರ ಈ ಸುಲಿಗೆಗೆ ಕಡಿವಾಣ ಬೀಳಲು ಸಾಧ್ಯ.ಸಿಎಂಗೆ ಮನವಿ:
ರೈತರು ಕಷ್ಟಪಟ್ಟು ಬೆಳೆದ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಸಿಗುತ್ತಿಲ್ಲ. ಒಂದೊಮ್ಮೆ ಉತ್ತಮ ಬೆಲೆ ದೊರೆತರೂ ದಲ್ಲಾಳಿಗಳು ಅಕ್ರಮವಾಗಿ ಕಮಿಷನ್ ಮುರಿದುಕೊಳ್ಳುತ್ತಿದ್ದಾರೆ. ನಿಯಮಗಳ ಪ್ರಕಾರ ದಲ್ಲಾಳಿಗಳು ಖರೀದಿದಾರರಾದ ವರ್ತಕರಿಂದ ಮಾತ್ರ ಕಮಿಷನ್ ಪಡೆಯಬೇಕೇ ವಿನಹ ಯಾವುದೇ ಕಾರಣಕ್ಕೂ ರೈತರಿಂದಲ್ಲ ಎಂದು ರಾಜ್ಯ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಡಿ.ಆರ್. ಪಾಟೀಲ ಹೇಳಿದ್ದಾರೆ.ಈ ಬಗ್ಗೆ ಕಾನೂನಿಗೆ ತಿದ್ದುಪಡಿ ತಂದು ಎರಡು ದಶಕಗಳೇ ಸಂದಿದ್ದರೂ ಅಸಂಪ್ರದಾಯಿಕವಾಗಿ ಕಮಿಷನ್ ಪಡೆಯುವ ಪ್ರಕ್ರಿಯೆ ಮುಂದುವರಿದಿದ್ದು, ಇದು ಅನ್ನದಾತರನ್ನು ನೇರವಾಗಿ ಶೋಷಣೆಗೆ ದೂಡಿದಂತಾಗಿದೆ. ಈ ದಲ್ಲಾಳಿ ಹಾವಳಿಗೆ ಕಡಿವಾಣ ಹಾಕಿ ಸಂಪೂರ್ಣ ಡಿಜಿಟಲ್ ಪಾವತಿ ಜಾರಿಗೊಳಿಸುವಂತೆ ಗದಗ ನಗರಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಭೇಟಿ ನೀಡಿದ ವೇಳೆಯಲ್ಲಿ ಮನವಿ ಮಾಡಿದ್ದೇನೆ ಎಂದು ಹೇಳಿದರು.