ಲಕ್ಷ್ಮೇಶ್ವರದಲ್ಲಿ ನಿಲ್ಲದ ಯೂರಿಯಾ ಪರದಾಟ

| Published : Aug 10 2025, 01:32 AM IST

ಲಕ್ಷ್ಮೇಶ್ವರದಲ್ಲಿ ನಿಲ್ಲದ ಯೂರಿಯಾ ಪರದಾಟ
Share this Article
  • FB
  • TW
  • Linkdin
  • Email

ಸಾರಾಂಶ

ಲಕ್ಷ್ಮೇಶ್ವರ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದ ಬೆಳೆ ಉಳಿಸಿಕೊಳ್ಳುವ ಭರದಲ್ಲಿ ರೈತರು ಯೂರಿಯಾ ಗೊಬ್ಬರ ಎಲ್ಲಿ ಸಿಗುತ್ತದೆ ಎಂದು ಅಲೆಯುತ್ತಿರುವ ಹಾಗೂ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಲಕ್ಷ್ಮೇಶ್ವರ: ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದ ಬೆಳೆ ಉಳಿಸಿಕೊಳ್ಳುವ ಭರದಲ್ಲಿ ರೈತರು ಯೂರಿಯಾ ಗೊಬ್ಬರ ಎಲ್ಲಿ ಸಿಗುತ್ತದೆ ಎಂದು ಅಲೆಯುತ್ತಿರುವ ಹಾಗೂ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಅತಿಯಾದ ಮಳೆಯಿಂದ ಬೆಳೆ ಉಳಿಸಿಕೊಳ್ಳಲು ರೈತರ ಹರಸಾಹಸ ಪಡುತ್ತಿರುವ ವೇಳೆ ಸುಟ್ಟ ಮನೆಯಲ್ಲಿ ಗಳ ಹಿರಿಯುವ ಪ್ರವೃತ್ತಿಯಲ್ಲಿ ತೊಡಗಿರುವವರು ರೈತರ ಜೀವ ಹಿಂಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಅತಿಯಾದ ಯೂರಿಯಾ ಬೇಡಿಕೆ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ₹ 300 ಗೆ ಮಾರಾಟವಾಗುತ್ತಿದ್ದ ಗೊಬ್ಬರವು ದುಪ್ಪಟ್ಟು ದರಕ್ಕೆ ಅಂದರೆ ₹ 600 ಗಳಿಗೆ ಮಾರಾಟ ಮಾಡುವ ದುಷ್ಟ ಕೂಟವು ಅಲ್ಲಲ್ಲಿ ಹುಟ್ಟಿಕೊಂಡು ರೈತರ ಜೀವ ಹಿಂಡುವಲ್ಲಿ ನಿರತವಾಗಿದೆ ಎಂದು ರೈತರೇ ಆರೋಪಿಸುತ್ತಾರೆ.

ಪಟ್ಟಣದ ಹಲವು ಅಂಗಡಿಗಳಲ್ಲಿ ಯೂರಿಯಾ ಗೊಬ್ಬರಕ್ಕಾಗಿ ರೈತರು ಆಧಾರ ಕಾರ್ಡ್‌ ಹಿಡಿದು ಕಾಯುತ್ತ ನಿಂತಿರುವ ದೃಶ್ಯ ಕಂಡು ಬಂದಿತು.

ಕಳೆದ 4-5 ದಿನಗಳಿಂದ ತಾಲೂಕಿನ ವಿವಿಧ ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಯೂರಿಯಾ ಗೊಬ್ಬರಕ್ಕಾಗಿ ಪರದಾಡುತ್ತಿದ್ದಾರೆ. ತಾಲೂಕಿನಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಗೋವಿನ ಜೋಳ ಬಿತ್ತನೆ ಮಾಡಲಾಗಿದೆ. ಅತಿಯಾದ ತೇವಾಂಶದಿಂದ ಗೋವಿನ ಜೋಳದ ಬೆಳೆಯು ಹಳದಿ ಬಣ್ಣಕ್ಕೆ ತಿರುಗುವುದನ್ನು ತಪ್ಪಿಸಲು ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ರೈತರು ಯೂರಿಯಾ ಗೊಬ್ಬರಕ್ಕಾಗಿ ಕಳೆದ 1 ತಿಂಗಳಿಂದ ಪರದಾಡುತ್ತಿರುವ ದೃಶ್ಯ ಮಾಮೂಲಿಯಾಗಿದೆ. ಸರ್ಕಾರ ರೈತರಿಗೆ ಸಮರ್ಪಕವಾಗಿ ಯೂರಿಯಾ ಗೊಬ್ಬರ ಪೂರೈಕೆ ಮಾಡಬೇಕು. ರೈತರು ಯಾವ ಪಾಪದ ಕೆಲಸ ಮಾಡದೆ ಅವರಿವರ ಮನೆಯ, ಅಂಗಡಿಯ ಬಾಗಿಲು ಕಾಯುವಂತೆ ಮಾಡಿರುವ ಅಧಿಕಾರಿಗಳಿಗೆ ಹಾಗೂ ರಾಜಕೀಯ ಮುಖಂಡರಿಗೆ ನಾಚಿಕೆ ಬರಬೇಕು. ಈಗಲಾದರೂ ರೈತರಿಗೆ ಬೇಕಾಗಿರುವ ಗೊಬ್ಬರ ಪೂರೈಕೆ ಮಾಡಬೇಕು ರೈತ ಮುಖಂಡ ಚನ್ನಪ್ಪ ಷಣ್ಮುಖಿ ಹೇಳಿದರು.