ಅಧಿಕಾರಿಗಳ ನಿರ್ಲಕ್ಷ್ಯದಿಂದ ಪೌರಕಾರ್ಮಿಕರ ಅಕಾಲಿಕ ಮರಣ

| Published : Feb 10 2024, 01:49 AM IST

ಸಾರಾಂಶ

ಕನಕಪುರ: ಅಧಿಕಾರಿಗಳ ನಿರ್ಲಕ್ಷದಿಂದ ಪೌರಕಾರ್ಮಿಕರಿಗೆ ಸೂಕ್ತ ಆರೋಗ್ಯ ತಪಾಸಣೆ ಮತ್ತು ಅಗತ್ಯ ಸೌಲಭ್ಯಗಳು ಸಿಗದೇ ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ ಎಂದು ಧಮ್ಮ ದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಆರೋಪಿಸಿದರು.

ಕನಕಪುರ: ಅಧಿಕಾರಿಗಳ ನಿರ್ಲಕ್ಷದಿಂದ ಪೌರಕಾರ್ಮಿಕರಿಗೆ ಸೂಕ್ತ ಆರೋಗ್ಯ ತಪಾಸಣೆ ಮತ್ತು ಅಗತ್ಯ ಸೌಲಭ್ಯಗಳು ಸಿಗದೇ ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ ಎಂದು ಧಮ್ಮ ದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಆರೋಪಿಸಿದರು.

ಇತ್ತೀಚೆಗೆ ಅಕಾಲಿಕ ಮರಣಕ್ಕೆ ತುತ್ತಾದ ಪೌರಕಾರ್ಮಿಕ ಇಂದಿರಾನಗರದ ನಿವಾಸಿ ವೆಂಕಟೇಶ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಮಾತನಾಡಿದ ಅವರು, ದೇಶದ ಗಡಿಯಲ್ಲಿ ಸೈನಿಕರು ತಮ್ಮ ಪ್ರಾಣ ಒತ್ತೆ ಇಟ್ಟು ದೇಶ ರಕ್ಷಣೆ ಮಾಡುತ್ತಾರೆ. ಆದರೆ, ನಗರದಲ್ಲಿ ಸ್ವಚ್ಛತೆ ಮತ್ತು ಸಾರ್ವಜನಿಕರ ಆರೋಗ್ಯ ಕಾಪಾಡಲು ಸಾಂಕ್ರಾಮಿಕ ರೋಗಗಳ ವಿರುದ್ಧ ಸೇನಾನಿಯಂತೆ ಕೆಲಸ ಮಾಡುವ ಪೌರಕಾರ್ಮಿಕರನ್ನು ನಿಕೃಷ್ಟವಾಗಿ ಸರ್ಕಾರ ನೋಡುತ್ತಿರುವುದು ದುರದೃಷ್ಟಕರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೌರಕಾರ್ಮಿಕರ ಹಿತಾಸಕ್ತಿ ಕಾಪಾಡಬೇಕಾದದ್ದು ಪೌರಾಯುಕ್ತರು ಮತ್ತು ಮೇಲ್ವಿಚಾರಕರ ಆದ್ಯ ಕರ್ತವ್ಯ. ಆದರೆ ಅವರ ನಿರ್ಲಕ್ಷ ಮತ್ತು ಬೇಜವಾಬ್ದಾರಿಯಿಂದಾಗಿ ಗುಣಮಟ್ಟದ ಚಿಕಿತ್ಸೆ ಮತ್ತು ಪೌರಕಾರ್ಮಿಕರ ಪರ ಕಾಳಜಿ ಇಲ್ಲದ್ದರಿಂದ ಪೌರ ಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲಿ ಹೃದಯಘಾತ ಇನ್ನಿತರ ಕಾಯಿಲೆಗಳಿಂದ ಅಕಾಲಿಕ ಮರಣಕ್ಕೆ ತುತ್ತಾಗುತ್ತಿರುವುದು ನಮ್ಮ ದೌರ್ಭಾಗ್ಯ. ನಗರಸಭೆಯಲ್ಲಿ 30ಕ್ಕೂ ಹೆಚ್ಚು ಪುರಪಿತೃಗಳಿದ್ದಾರೆ. ಅವರ ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಆಗದಿದ್ದರೆ ಪೌರ ಕಾರ್ಮಿಕರ ನೆನೆಪಾಗುತ್ತದೆ. ಆದರೆ ಅವರರ ಆರೋಗ್ಯ ಕಾಪಾಡುವ ಕ್ರಮ ಕೈಗೊಳ್ಳಲು ಸಭೆಗಳಲ್ಲಿ ಯಾವುದೆ ಚರ್ಚೆ ಮಾಡುವುದಿಲ್ಲ ಎಂದರು.ಪೌರಕಾರ್ಮಿಕರು ದಲಿತರು, ಎಸ್ಸಿಎಸ್ಟಿ ಕೀಳು ಜಾತಿಗೆ ಸೇರಿದವರು ಎಂಬ ಕಾರಣಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಪೌರಕಾರ್ಮಿಕರ ಅಂತಿಮ ದರ್ಶನ ಪಡೆಯದೆ ತಾರತಮ್ಯ ಮಾಡುತ್ತಿದ್ದಾರೆ. ಮೃತಪಟ್ಟ ವ್ಯಕ್ತಿ ಜಾತಿ ನೋಡುವುದನ್ನು ಬಿಟ್ಟು ಅವನು ತನ್ನ ಜೀವಮಾನದಲ್ಲಿ ಸಲ್ಲಿಸಿದ ಸಾಮಾಜಿಕ ಸೇವೆಗಾದರೂ ಜಿಲ್ಲಾಡಳಿತ, ತಾಲೂಕು ಆಡಳಿತ, ಜನಪ್ರತಿನಿಧಿಗಳು ಮೃತರ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವನ ಹೇಳುವ ಸೌಜನ್ಯ ಬೆಳೆಸಿಕೊಳ್ಳಬೇಕು. ಈ ಶಿಷ್ಟಾಚಾರವನ್ನು ಪಾಲಿಸಬೇಕು. ಪೌರಕಾರ್ಮಿಕರಿಗೆ ಕಾಲಕಾಲಕ್ಕೆ ಗುಣಮಟ್ಟದ ಆರೋಗ್ಯ ತಪಾಸಣೆ ಮಾಡಬೇಕು. ಅವರ ಕೆಲಸಕ್ಕೆ ಬೇಕಾದ ಅಗತ್ಯ ಪರಿಕರಗಳನ್ನು ಒದಗಿಸಿಕೊಡುವುದು ಸೇರಿದಂತೆ ನಗರಸಭೆಯಲ್ಲಿ ಪೌರ ಕಾರ್ಮಿಕರ ಆರೋಗ್ಯ ಕಾಪಾಡುವ ಎಲ್ಲಾ ಕ್ರಮಗಳನ್ನು ತೆಗೆದುಕೊಂಡು ಅವರನ್ನು ಸೈನಿಕರಂತೆ ಗೌರವಿಸಬೇಕು ಎಂದರು. ಬುದ್ದವಿಹಾರ ಸಮಿತಿಯ ನಟರಾಜು, ದಿನೇಶ್, ಜೀವನ್ ಇತರರಿದ್ದರು.

9ಕೆಆರ್ ಎಂಎನ್ 6.ಜೆಪಿಜಿ

ಧಮ್ಮ ದೀವಿಗೆ ಟ್ರಸ್ಟ್ ನ ಮಲ್ಲಿಕಾರ್ಜುನ್ ಸುದ್ದಿಗಾರರೊಂದಿಗೆ ಮಾತನಾಡಿದರು.