ಸಾರಾಂಶ
ಕೊಪ್ಪಳ:
ಬುಧವಾರ ಮಧ್ಯರಾತ್ರಿ ಮತ್ತು ಗುರುವಾರ ಬೆಳಗಿನ ಜಾವ ಸುರಿದ ಅಕಾಲಿಕ ಮಳೆ ಮತ್ತು ಬಿರುಗಾಳಿಗೆ ಗಂಗಾವತಿ ಮತ್ತು ಕೊಪ್ಪಳ ತಾಲೂಕಿನ ಕೆಲಭಾಗಗಳಲ್ಲಿ ಭತ್ತದ ಬೆಳೆ ನೆಲಸಮವಾಗಿದೆ.ಕೊಪ್ಪಳ ತಾಲೂಕಿನ ಶಿವಪುರ, ಅಗಳಿಕೇರಿ, ಹಿಟ್ನಾಳ, ಹುಲಿಗಿ ಸೇರಿದಂತೆ ಸುತ್ತಮುತ್ತಲ ಪ್ರದೇಶ ವ್ಯಾಪ್ತಿಯಲ್ಲಿ ತಡರಾತ್ರಿ ಬೀಸಿದ ಬಿರುಗಾಳಿ ಮತ್ತು ಮಳೆಗೆ ನೂರಾರು ಎಕರೆ ಪ್ರದೇಶದಲ್ಲಿ ಭತ್ತದ ಬೆಳೆ ನೆಲಸಮವಾಗಿದೆ. ಕಟಾವಿಗೆ ಬಂದಿದ್ದ ಬೆಳೆ ನೆಲಕ್ಕೆ ಬಿದ್ದಿರುವುದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ. ಮಳೆ ಮತ್ತು ಬಿರುಗಾಳಿ ಜೋರಾಗಿ ಆಗಿರುವ ಪ್ರದೇಶದಲ್ಲಿ ಮಾತ್ರ ಹಾನಿಯಾಗಿದೆ. ಶಿವಪುರ ಗ್ರಾಮದ ಬಳಿಯೇ ಕೆಲವೊಂದು ಹೊಲಗಳಿಗೆ ಯಾವುದೇ ಹಾನಿಯಾಗಿಲ್ಲ. ಆದರೆ, ಕೆಲವೇ ಕೆಲವು ಪ್ರದೇಶದಲ್ಲಿ ಮಾತ್ರ ಭಾರಿ ಹಾನಿ ಮಾಡಿದೆ.
ಶಿವಪುರ ಗ್ರಾಮದ ಪರಪ್ಪ ತೋಟದ ಅವರ ಹೊಲದಲ್ಲಿ 6 ಎಕರೆಯಲ್ಲಿ ಬೆಳೆದಿದ್ದ ಭತ್ತದಲ್ಲಿ 2 ಎಕರೆ ಭತ್ತ ಸಂಪೂರ್ಣ ನೆಲಕ್ಕಚ್ಚಿದೆ. ಸುಳಿಗಾಳಿಯಿಂದ ಈ ರೀತಿ ಬೆಳೆ ನೆಲಸಮವಾಗಿದೆ ಎಂದು ರೈತರು ಹೇಳುತ್ತಿದ್ದಾರೆ.ಗಂಗಾವತಿ- ಮುನಿರಾಬಾದ್‌ನಲ್ಲಿ ಧಾರಾಕಾರ ಮಳೆ:
ಗಂಗಾವತಿ ನಗರ ಸೇರಿದಂತೆ ತಾಲೂಕಿನ ವಿವಿಧೆಡೆ ಪ್ರದೇಶ, ಮುನಿರಾಬಾದ್ ಸುತ್ತಮುತ್ತ ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನ ಜಾವದ ವರೆಗೆ ಭರ್ಜರಿ ಮಳೆಯಾಗಿದೆ.ಬುಧವಾರ ರಾತ್ರಿ ಮುನಿರಾಬಾದ್ ಹಾಗೂ ಸುತ್ತಮುತ್ತಲ ಗ್ರಾಮಗಳಾದ ಲಿಂಗಾಪುರ, ಹೊಸಹಳ್ಳಿ, ಹುಲಿಗಿ, ಹಿಟ್ನಾಳ, ಶಿವಪುರ, ಆಗಳಕೇರಾ ಗ್ರಾಮದಲ್ಲಿ 3 ಗಂಟೆಗೂ ಅಧಿಕ ಕಾಲ ಬಾರಿ ಮಳೆ ಸುರಿದಿದೆ. ಮಧ್ಯರಾತ್ರಿ 1 ಗಂಟೆಗೆ ಆರಂಭವಾದ ಮಳೆ ಬೆಳಗಿನ ಜಾವ 5 ಗಂಟೆ ವರೆಗೂ 6 ಸೆ.ಮೀ. ಮಳೆಯಾದ ವರದಿಯಾಗಿದೆ. ಇದು ಕಳೆದ ಎರಡು ದಶಕದಲ್ಲಿ ಬೇಸಿಗೆಯಲ್ಲಿ ಸುರಿದ ಅತ್ಯಧಿಕ ಪ್ರಮಾಣದ ಮಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅದೇ ರೀತಿ ಗಂಗಾವತಿ ನಗರ ಸೇರಿದಂತೆ ತಾಲೂಕಿನಲ್ಲಿ ಗುರುವಾರ ಬೆಳಗಿನ ಜಾವ 3ಕ್ಕೆ ಶುರುವಾದ ಮಳೆ 6 ಗಂಟೆ ವರೆಗೂ ಸುರಿದೆ. ಇದರಿಂದ ಚರಂಡಿಗಳು ತುಂಬಿ ರಸ್ತೆಗಳ ಮೇಲೆ ನೀರು ಹರಿದಿದೆ.ಗಂಗಾವತಿ ಹೋಬಳಿಯಲ್ಲಿ 9.8 ಮಿಮೀ, ವೆಂಕಟಗಿರಿ ಹೋಬಳಿಯಲ್ಲಿ 8.6, ವಡ್ಡರಹಟ್ಟಿ ಗ್ರಾಮದಲ್ಲಿ 9.2 ಮಿಮೀ ಮಳೆ ಬಿದ್ದಿದೆ. ಆನೆಗೊಂದಿ, ಸಂಗಾಪುರ, ಡಣಾಪುರ, ಹಿರೇಜಂತಗಲ್, ಚಿಕ್ಕಜಂತಗಲ್, ಮರಳಿ, ಚಿಕ್ಕಬೆಣಕಲ್ ಸೇರಿದಂತೆ ವಿವಿಧ ಗ್ರಾಮಗಳಲ್ಲಿಯೂ ಮಳೆ ಸುರಿದಿದೆ.ತಂಪೆರೆದ ಮಳೆ:ಬಿಸಿಲಿನ ಬೇಗೆಯಿಂದ ತತ್ತರಿಸಿದ ಜನರಿಗೆ ಗುರುವಾರ ಸುರಿದ ಮಳೆ ತಂಪೆರೆದಿದೆ. ಶಿವರಾತ್ರಿ ಮುಗಿಯುತ್ತಿದ್ದಂತೆ ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚಳವಾಗಿ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕಿದ್ದರು. ಗುರುವಾರ ಬೆಳಗ್ಗೆ ಮುನಿರಾಬಾದ್ ಹಾಗೂ ಗಂಗಾವತಿ ಸುತ್ತಮುತ್ತ ಭರ್ಜರಿಯಾಗಿ ಸುರಿದ ಪರಿಣಾಮ ಭೂಮಿ ತಂಪುಗೊಂಡಿದೆ. ಇದರಿಂದ ಬಿಸಿಲಿನ ಝಳವು ಕಡಿಮೆ ಆಗಿದೆ. ಇಷ್ಟು ದಿನ ಸೂರ್ಯನಿಗೆ ಹೆದರಿ ಮನೆಯಲ್ಲಿದ್ದ ಜನರು ಮನೆಯಿಂದ ಹೊರಬಂದು ಮಳೆರಾಯನಿಗೆ ಕೈ ಮುಗಿದರು.