ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿಯುತ್ತಿದ್ದು, ಮಂಗಳವಾರ ಸುರಿದ ಭಾರಿ ಮಳೆ ಕಾರ್ಕಳ- ಹೆಬ್ರಿ ತಾಲೂಕಿನ ಹಲವೆಡೆ ಅನಾಹುತ ಸೃಷ್ಟಿಸಿದೆ. ರಾಷ್ಟ್ರೀಯ ಹೆದ್ದಾರಿ 169 ಎ ಕಾಮಗಾರಿ ನಡೆಯುತ್ತಿದ್ದು, ಮಳೆಗೆ ಹಿರಿಯಡ್ಕದಿಂದ ಹೆಬ್ರಿಯ ಕಡೆಗೆ ಸಾಗುವ ಪುತ್ತಿಗೆ ರಕ್ತೇಶ್ವರಿ ಬಸ್ ನಿಲ್ದಾಣ ಬಳಿ ಸುಮಾರು ಹದಿನೈದು ಮನೆಯೊಳಗೆ ಕೆಸರು ನೀರು ನುಗ್ಗಿದೆ.ಮೋರಿ ವ್ಯವಸ್ಥೆ ಯಿಲ್ಲ: ಕಳೆದ ಎರಡು ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೈಗೊಂಡಿರುವ ತೀರ್ಥಹಳ್ಳಿ ಮೂಲದ ಖಾಸಗಿ ಕಂಪನಿ ಚರಂಡಿ ನಿರ್ಮಾಣ ಮಾಡಿಲ್ಲ. ಇದರ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್ ಹಾಗೂ ಉಡುಪಿ ಜಿಲ್ಲಾಧಿಕಾರಿಗಳಿಗೆ ಪತ್ರ ಮುಖೇನ ದೂರು ನೀಡಲಾಗಿತ್ತಾದರೂ ಸ್ಪಂದನೆ ಸಿಕ್ಕಿಲ್ಲ ಎನ್ನುತ್ತಾರೆ ಸ್ಥಳೀಯ ಶಿವಾನಂದ ನಾಯಕ್.ಸಾಣೂರಿನಲ್ಲಿ ಗುಡ್ಡ ಕುಸಿತ:
ರಾಷ್ಟ್ರೀಯ ಹೆದ್ದಾರಿ 169 ಸಾಣೂರು ಪದ್ಮನಾಭ ನಗರದ ಗುಡ್ಡದ ತುದಿಯಲ್ಲಿರುವ ಹೈಟೆನ್ಶನ್ ಟವರ್ ಬುಡದಲ್ಲಿ ಗುಡ್ಡ ಕುಸಿತವಾಗಿದೆ. ಬೃಹತ್ ಗಾತ್ರದ ಕಲ್ಲುಗಳು ಹೆದ್ದಾರಿ ಮೇಲೆ ಉರುಳಿದೆ. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಈ ಗುಡ್ಡದ ಮೆಲ್ಭಾಗದಲ್ಲಿ ಬೃಹತ್ ಗಾತ್ರದ 220 ಕೆ.ವಿ. ಟವರ್ ಇದ್ದು ರಾಷ್ಟ್ರೀಯ ಹೆದ್ದಾರಿಗೆ ಉರುಳುವ ಭೀತಿಯುಂಟಾಗಿದೆ.ಕಳೆದ ಎರಡು ವರ್ಷಗಳ ಗ್ರಾಮಸ್ಥರ ಹೋರಾಟದ ನಂತರ ಹೆದ್ದಾರಿ ಇಲಾಖೆ ಗುಡ್ಡದ ಎತ್ತರದ ಅರ್ಧ ಭಾಗದವರೆಗೆ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಮಾಡಿತ್ತು. ತಡೆಕೋಡೆಯ ಮೇಲ್ಭಾಗಕ್ಕೆ ಕೇವಲ ಮಣ್ಣು ತುಂಬಿಸಿ ಅಸಮರ್ಪಕ ಕಾಮಗಾರಿ ನಡೆಸಿತ್ತು. ಆದರೆ ಪೂರ್ಣ ಪ್ರಮಾಣದ ತಡೆಗೋಡೆ ನಿರ್ಮಾಣ ಮಾಡದೆ ಮೀನಾಮೇಷ ಎನಿಸುತ್ತಿದೆ. ಸಾಣೂರು ಸಂಕದ ಬಳಿ ಚರಂಡಿ ವ್ಯವಸ್ಥೆ ಇಲ್ಲದೆ ಮೋಹನ್ ಶೆಟ್ಟಿ ಎಂಬವರ ಮನೆಯೊಳಗೆ ನೀರು ನುಗ್ಗಿದೆ.
ಕೊಚ್ಚಿಹೋದ ರಸ್ತೆ:ಭಾರಿ ಮಳೆಯಿಂದಾಗಿ ಕಾರ್ಕಳ ತಾಲೂಕಿನ ಬೋಳ ಬರಬೈಲು- ಬೆಳುವಾಯಿ ಸಾಗುವ ರಸ್ತೆಯ ಸಂಪರ್ಕ ಸಂಪೂರ್ಣ ಕಡಿತವಾಗಿದೆ.
ಬೋಳ ಬರಬೈಲು ಶ್ರೀ ರಾಮಕೃಷ್ಣ ಅನುದಾನಿತ ಶಾಲೆಯ ಸಮೀಪದಲ್ಲಿ ಕಿರು ಸೇತುವೆಯನ್ನು ಕೆಡವಿ ನೂತನ ಸೇತುವೆಯ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಸಮೀಪದಲ್ಲಿ ಬದಲಿ ಮಣ್ಣಿನ ರಸ್ತೆಯನ್ನು ನಿರ್ಮಾಣ ಮಾಡಲಾಗಿತ್ತು. ಎರಡು ದಿನಗಳಿಂದ ಸುರಿದ ಭಾರಿ ಮಳೆಗೆ ನದಿಯೂ ತುಂಬಿ ಹರಿದ ಕಾರಣ ಬದಲಿ ಮಣ್ಣಿನ ರಸ್ತೆ ಕೊಚ್ಚಿ ಹೋಗಿದೆ. ಹೀಗಾಗಿ ಬೋಳ, ಕಾಂತಾವರ, ಬೆಳುವಾಯಿ ಸಾಗುವ ರಸ್ತೆಯ ಸಂಪರ್ಕ ಕಡಿತವಾಗಿದೆ.ಪ್ರಮುಖ ರಸ್ತೆಯ ಸಂಪರ್ಕ ಕಡಿತಗೊಂಡ ಪರಿಣಾಮ ಕೆದಿಂಜೆಯಿಂದ ಸಾಗುವವರು ಬೋಳ ಪೊಸರ್ಮ, ಪಂಚಾಯಿತಿ ರಸ್ತೆ ಹಾಗೂ ಕೆಮ್ಮಣ್ಣು ರಸ್ತೆಯಲ್ಲಿ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಮಳೆ ಪ್ರಮಾಣ:ಕಾರ್ಕಳ ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ಕಾರ್ಕಳ ನಗರದಲ್ಲಿ ದಾಖಲಾಗಿದೆ. ಕಾರ್ಕಳ ನಗರದಲ್ಲಿ 146.4 ಮಿಮೀ, ಇರ್ವತ್ತೂರು 102.4 ಮಿಮೀ, ಅಜೆಕಾರು 55.2 ಮಿಮೀ, ಸಾಣೂರು 107.8 ಮಿಮೀ, ಕದಿಂಜೆ 146.2 ಮಿಮೀ, ಮುಳಿಕಾರು 18.4 ಮಿಮೀ, ಕೆರುವಾಶೆ 80.0 ಮಿಮೀ ಮಳೆ ವರದಿಯಾಗಿದೆ. ಸರಾಸರಿ 93.78 ಮಳೆ ದಾಖಲಾಗಿದೆ.
ಮಳೆ ಹಾನಿ:ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ತೊಡಲೆ ಬೇಬಿ ಪೂಜಾರ್ತಿಯವರ ಮನೆಗೆ ಸಿಡಿಲು ಬಡಿದು 20,000 ರು., ಜಯಪೂಜಾರಿ ತೋಡಲೆ ಅವರ ಮನೆಗೆ 20,000 ರು., ರತ್ನಾಕರ ಪುಜಾರಿ ತೊಡಲೆ ಅವರ ಮನೆಗೆ ಸಿಡಿಲು ಬಡಿದು 20000 ರು., ಮಹಾಬಲ ಪೂಜಾರಿ ತೊಡಲೆ ಅವರ ಮನೆಗೆ ಸಿಡಿಲು ಬಡಿದು 20000 ರು. ಹಾನಿ, ಎರ್ಲಪಾಡಿ ಗ್ರಾಮದ ಭೂತಾಲ್ ವಿನೋದ ಶೆಟ್ಟಿ ಮನೆಗೆ ಸಿಡಿಲು ಬಡಿದು 20,000 ರು., ಕಾರ್ಕಳ ಕಸ್ಬಾ ವ್ಯಾಪ್ತಿಯ ಶರ್ಮಿಳಾ ಅವರ ಮನೆಗೆ ಸಿಡಿಲು ಬಡಿದು 10,000 ರು. ಭಾಗಶ ಹಾನಿಯಾಗಿದೆ.