ಅಕಾಲಿಕ ಮಳೆಗೆ ತೋಟಗಾರಿಕೆ ಬೆಳೆಗೆ ಭಾರಿ ಹಾನಿ

| Published : Apr 14 2024, 01:49 AM IST

ಅಕಾಲಿಕ ಮಳೆಗೆ ತೋಟಗಾರಿಕೆ ಬೆಳೆಗೆ ಭಾರಿ ಹಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಖರ ತಾಪದಿಂದ ಕಂಗೆಟ್ಟಿದ್ದ ಕಲಬುರಗಿಯಲ್ಲಿ ಕಳೆದ 2 ದಿನದಿಂದ ಬೇಸಿಗೆ ಮಳೆ ಸುರಿಯುತ್ತಿದೆ. ಆದರೆ ಈ ಮಳೆಯ ಜೊತೆಗೇ ಒತ್ತರಿಸಿ ಬೀಸುತ್ತಿರುವ ಬಿರುಗಾಳಿ, ಗುಡುಗು, ಸಿಡುಲು ಸೇರಿದಂತಹ ವಾತಾವರಣ ತೋಟಗಾರಿಕೆ ರೈತರನ್ನೇ ಬರ್ಬಾದ್‌ ಮಾಡಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಪ್ರಖರ ತಾಪದಿಂದ ಕಂಗೆಟ್ಟಿದ್ದ ಕಲಬುರಗಿಯಲ್ಲಿ ಕಳೆದ 2 ದಿನದಿಂದ ಬೇಸಿಗೆ ಮಳೆ ಸುರಿಯುತ್ತಿದೆ. ಆದರೆ ಈ ಮಳೆಯ ಜೊತೆಗೇ ಒತ್ತರಿಸಿ ಬೀಸುತ್ತಿರುವ ಬಿರುಗಾಳಿ, ಗುಡುಗು, ಸಿಡುಲು ಸೇರಿದಂತಹ ವಾತಾವರಣ ತೋಟಗಾರಿಕೆ ರೈತರನ್ನೇ ಬರ್ಬಾದ್‌ ಮಾಡಿದೆ.

ಮಳೆಯ ಜೊತೆಗೇ ಬೀಸುತ್ತಿರುವ ಬಿರುಗಾಳಿಗೆ ರೈತರ ನೂರಾರು ಎಕರೆ ಬಾಳೆ, ಪಪ್ಪಾಯಿ, ದ್ರಾಕ್ಷಿ, ಮಾವಿನ ಫಸಲು ನೆಲಕ್ಕುರುಳಿದೆ, ಹೀಗಾಗಿ ರೈತರು ಪ್ರಖರ ತಾಪ ಹೋಯ್ತಲ್ಲವೆಂದು ಸುಮ್ಮನಾದರೆ ಇದೊಂದು ಬೇರೆ ರೀತಿಯಲ್ಲಿ ಪರಿತಾಪ ಶುರುವಾಯ್ತಲ್ಲ ಎಂದು ಪರಿತಪಿಸುತ್ತಿದ್ದಾರೆ.

ಹವಾಮಾನ ಇಲಾಖೆ ಮಾಹಿತಿಯಂತೆ ಕಳೆದ 2 ದಿನದಲ್ಲಿ ಕಲಬುರಗಿ ಜಿಲ್ಲಾದ್ಯಂತ 25 ರಿಂದ 30 ಮಿಮಿ ಮಲೆ ಸುರಿದಿದೆ. ಬಿರುಗಾಳಿ ರಭಶದಿಂದ ಬೀಸುತ್ತಲೇ ಸುರಿದ ಮಳೆಯಲ್ಲಿ ತೋಟಗಾರಿಕೆ ಬೆಳೆಗಳೆಲ್ಲವೂ ಧರೆಗುರುಳಿವೆ.

ಮೇಳಕುಂದಾ ಗ್ರಾಮದಲ್ಲಿ ಮಹಾದೇವಿ ಶರಣಪ್ಪ ಇವರಿಗೆ ಸೇರಿದ 3 ಎಕರೆ ಬಾಳೆ, ಪೀರಪ್ಪ ಪೂಜಾರಿ ಇವರ 6 ಎಕರೆ ಬಾಳೆ, ಹಡಜಗಿಲ ಹಾರುತಿಯಲ್ಲಿರುವ ಮಶಾಖ್‌ ಪಟೇಲರ 3 ಎಕರೆ ಪಪ್ಪಾಯಿ ಹಾಳಾಗಿದೆ. ಪಪ್ಪಾಯಿ ಗಿಡಗಳೇ ನೆಲಕ್ಕುರುಳಿವೆ.

ಇದಲ್ಲದೆ ಬಿರುಗಾಳಿಗೆ ಮೇಳಕುಂದಾ (ಬಿ) ಗ್ರಾಮದಲ್ಲಿರುವ 21 ವಿದ್ಯುತ್‌ ಕಂಬಗಳು ಧರೆಗುರುಳಿವೆ. ಇದರಿಂದಾಗಿ ಇಡೀ ಊರಲ್ಲಿ 2 ದಿನದಿಂದ ಕತತಲು ಆವರಿಸಿದೆ.

ಸುದ್ದಿ ತಿಳಿದ ತಕ್ಷಣ ಕಲಬುರಗಿ ದಕ್ಷಿಣ ಮತಕ್ಷೇತ್ರ ಶಾಸಕರಾದ ಅಲ್ಲಂಪ್ರಭು ಪಾಟೀಲರು ಬೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ. ತಕ್ಷಣ ಊರಲ್ಲಿ ಕರೆಂಟ್‌ ಸವಲತ್ತು ಪುನಃ ಸ್ಥಾಪಿಸಬೇಕು, ಜೊತೆಗೇ ಬಾಳೆ, ಪಪ್ಪಾಯಿತಂಹ ತೋಟಗಾರಿಕ ಬೆಳೆಗಳು ಹಾಳಾಗಿರುವ ರೈತರಿಗೆ ಸರಕಾರದ ನಿಯಮಗಳಂತೆ ಪರಿಹಾರ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಲಬುರಗಿ ಬಿಸಿಲಿನಿಂದ ಕಾದು ಕೆಂಡವಾಗಿತ್ತು, ಬೇಸಿಗೆ ಮಳೆ ಬಂದರೆ ತುಸು ತಂಪಾಗುತ್ತದೆ ಎಂದು ಜನ ಮಳೆಯನ್ನು ನಿರೀಕ್ಷಿಸಿದ್ದರು. ಮಳೆಯೊಂದಿಗೆ ಬಿರುಗಾಳಿ ರಭಸದಿಂದ ಬೀಸಿ ಇಷ್ಟೆಲ್ಲ ಅವಾಂತರಗಳನ್ನು ಹುಟ್ಟುಹಾಕಿದೆಯಲ್ಲದೆ ರೈತರ ಬದುಕನ್ನೇ ಹರಿದು ಹಾಕಿದೆ ಎಂದು ತೋಟಗಾರಿಕೆ ರೈತರು ಅಲವತ್ತುಕೊಳ್ಳುತ್ತಿದ್ದಾರೆ.