ಸಾರಾಂಶ
ಕುರುಗೋಡು: ಸುರಿದ ಅಕಾಲಿಕ ಮಳೆಗೆ ಕಟಾವಿಗೆ ಬಂದಿರುವ ಭತ್ತದ ಬೆಳೆ ಮಗುಚಿ ರೈತರಿಗೆ ನಷ್ಟ ಸಂಭವಿಸಿದೆ.
ತಾಲೂಕಿನ ಸಮೀಪದ ಗೆಣಿಕೆಹಾಳು, ಮುಷ್ಟಗಟ್ಟೆ, ಕ್ಯಾದಿಗೆಹಾಳು, ಎಚ್.ವೀರಾಪುರ, ವದ್ದಟ್ಟಿ ಮತ್ತು ಬಾದನಹಟ್ಟಿ ಗ್ರಾಮಗಳಲ್ಲಿ ಕಟಾವಿಗೆ ಬಂದ ಭತ್ತದ ಬೆಳೆ ಅಕಾಲಿಕ ಮಳೆಗೆ ಸಿಲುಕಿ ನೆಲಕಚ್ಚಿದೆ.ಈ ವರ್ಷ ಕಾಲಕಾಲಕ್ಕೆ ಸಮೃದ್ಧ ಮಳೆ ಬಂದು ರೈತರ ಜಮೀನುಗಳು ಉತ್ತಮ ಬೆಳೆಯಿಂದ ನಳನಳಿಸುತ್ತಿದ್ದವು. ನಂತರ ಭತ್ತದ ಗದ್ದೆಗಳು ಈಗಾಗಲೇ ಹಾಲು ತುಂಬಿ ಕಾಳು ಬೆಳೆ ಕಟಾವು ಮಾಡಿ ಭತ್ತ ಮಾರಾಟ ಮಾಡಿ ಹಣ ರೈತರ ಕೈಸೇರಬೇಕಿತ್ತು. ಅಷ್ಟರಲ್ಲಿ ಅಕಾಲಿಕ ಮಳೆ ಸುರಿದ ರೈತರ ಲಾಭದ ಕನಸಿಗೆ ತಣ್ಣೀರೆರಚಿದಂತಾಗಿದೆ.
ಸಾವಿರಾರು ಎಕರೆ ಭತ್ತದ ಗದ್ದೆಗಳು ನೆಲಸಮಗೊಂಡಿದೆ.ಪರಿಣಾಮ ಕಾಳುಗಳು ನೆಲದ ಪಾಲಾಗಿ ಅನ್ನದಾತ ಕಂಗಲಾಗಿದ್ದಾನೆ. ಕಳೆ ನಾಶಕ, ಔಷಧಿ, ರಸಗೊಬ್ಬರ ಸೇರಿದಂತೆ ಎಕರೆಗೆ 45 ಸಾವಿರ ವೆಚ್ಚ ವ್ಯಯಿಸಿದ್ದು, ಮಳೆಯ ಅವಾಂತರದಿಂದ ಬೆಳೆಗೆ ವ್ಯಯಿಸಿದ ಹಣ ತೆಗೆದುಕೊಳ್ಳಲಾಗದ ಪರಿಸ್ಥಿತಿಯಲ್ಲಿ ರೈತ. ಈ ಬಾರಿ ಉತ್ತಮ ಬೆಳೆ ಪಡೆದು, ಭತ್ತಕ್ಕೆ ಎಲ್ಲಿಲ್ಲದ ಬೆಲೆ ಸಿಗುತ್ತದೆ ಎರಡು ಬೆಳೆಯ ಲಾಭ ಒಂದೆ ಬೆಳೆಯಲ್ಲಿ ಪಡೆಯಬಹುದು ಎಂಬ ನಿರೀಕ್ಷೆಯಲ್ಲಿದ್ದ ಅನ್ನದಾತನ ಕನಸು ಮಳೆರಾಯ ಭಗ್ನ ಮಾಡಿದ್ದಾನೆ.
ಮೆಣಸಿನಕಾಯಿ ಬೆಳೆಗಾರರ ಪರಿಸ್ಥಿತಿ ಭಿನ್ನವಾಗಿಲ್ಲ. ಒಣಗಿಸಲು ಹಾಕಿದ್ದ ಒಣಮೆಣಸಿನಕಾಯಿ ಮಳೆಯಲ್ಲಿ ತೋಯ್ದು ಹೋಗಿದೆ. ತಂಪು ಹೆಚ್ಚಾಗಿ ಬೇರುಕೊಳೆಯುವ ಹಂತ ತಲುಪಿದ್ದು ಹೂ ಉದುರುತ್ತಿದ್ದು ರೈತರು ಆತಂಕಕ್ಕೆ ಕಾರಣವಾಗಿದೆ.ಹೇಳಿಕೆ :
ಭತ್ತ ನಾಟಿ ಮಾಡಿದ್ದೆನೆ. ಇತ್ತೀಚೆಗೆ ಸುರಿದ ಗಾಳಿ-ಮಳೆಗೆ ಸಂಪೂರ್ಣ ಭತ್ತ ಬೆಳೆ ನೆಲಸಮಗೊಂಡು ರೈತರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಇದರಿಂದ ತುಂಬ ಹಾನಿಯಾಗಿದೆ. ಬೆಳೆಗೆ ವ್ಯಯಿಸಿದ ಬಂಡವಾಳ ತೆಗೆದುಕೊಳ್ಳಲಾಗದ ಸ್ಥಿತಿ ಎದುರಾಗಿದೆ.ಕಳೆದ ವರ್ಷ ಒಂದು ಕ್ವಿಂಟಲ್ಗೆ ₹೨೨೦೦ ಬೆಲೆ ದೊರೆತಿತ್ತು. ಈ ವರ್ಷ ಕೇವಲ ₹೧೫೦೦ಕ್ಕೆ ಕುಸಿತ ಕಂಡಿದೆ. ಬೆಲೆ ಕುಸಿತದ ಜತೆಗೆ ಅಕಾಲಿಕ ಮಳೆಯಿಂದ ಬೆಳೆ ನಷ್ಟಕ್ಕೆ ಸಿಲುಕಿರುವುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ತುಂಗಭದ್ರಾ ರೈತ ಸಂಘದ ತಾಲೂಕು ಅಧ್ಯಕ್ಷ ಮುಷ್ಟಗಟ್ಟೆ ಭೀಮನ ಗೌಡ ಕಳವಳ ವ್ಯಕ್ತಪಡಿಸಿದರು.
ಭತ್ತಕ್ಕೆ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಮಳೆಯಿಂದ ಸಂಭವಿಸಿದ ನಷ್ಟಕ್ಕೆ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ಕುರುಗೋಡು ತಾಲೂಕಿನ ಸಮೀಪದ ಗೆಣಿಕೆಹಾಳು ಗ್ರಾಮದಲ್ಲಿ ಕಟಾವಿಗೆ ಬಂದಿರುವ ಭತ್ತದ ಬೆಳೆ ಮಳೆಯಿಂದ ನೆಲಕಚ್ಚಿರುವುದು.