ಕನ್ನಡಪ್ರಭ ವಾರ್ತೆ ವಿಜಯಪುರ

ಇಡೀ ದೇಶ ಅಸ್ಪೃಶ್ಯತೆಯಿಂದ ಬಳಲುತ್ತಿದೆ. ಬುದ್ಧ, ಬಸವ, ಭೀಮರ ತತ್ವಗಳು ಈ ದೇಶವನ್ನು ಆಳಿದರೆ ಮಾತ್ರ ಅಸ್ಪೃಶ್ಯತೆ ನಿವಾರಣೆ ಸಾಧ್ಯ ಎಂದು ಕಾಲೇಜು ಶಿಕ್ಷಣ ಇಲಾಖೆಯ ವಿಶ್ರಾಂತ ನಿರ್ದೇಶಕ ಡಾ.ಹೇಮಂತ ಭೂತನಾಳ ಅಭಿಪ್ರಾಯಪಟ್ಟಿದ್ದಾರೆ.

ನಗರದ ಕಂದಗಲ್ಲ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಬಸವ ಜಯಂತಿ ಉತ್ಸವ ಸಮಿತಿ ಹಾಗೂ ವಿಜಯಪುರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿರುವ ವಿಶ್ವಗುರು ಬಸವಣ್ಣನವರ 893ನೇ ಜಯಂತಿ ಉತ್ಸವದ ನಿಮಿತ್ತ 2ನೇ ದಿನ ಕಲ್ಯಾಣ ಕ್ರಾಂತಿ ನೆನಪು ರಾಷ್ಟ್ರೀಯ ಬಹು ಭಾಷಾ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಲಬುರಗಿಯ ಹಿರಿಯ ಸಾಹಿತಿ ಡಾ.ಶ್ರೀಶೈಲ ನಾಗರಾಳ ಮಾತನಾಡಿ, 12ನೇ ಶತಮಾನದಲ್ಲಿ ಸಾಂಸ್ಕೃತಿಕ ಹಾಗೂ ಸಾಮಾಜಿಕವಾಗಿ ಅಂಧಕಾರದಲ್ಲಿ ಮುಳುಗಿದ ಸಮಾಜದಲ್ಲಿ ಬಸವಣ್ಣ ಮತ್ತು ಶರಣರು ವಚನ ಸಾಹಿತ್ಯ ಜ್ಯೋತಿ ಹಚ್ಚಿದ್ದಾರೆ. ವಚನ ಸಾಹಿತ್ಯವೇ ಕನ್ನಡ ನೆಲದ ಮೊದಲ ಸಾಹಿತ್ಯದ ಫಸಲಾಗಿದೆ. ಶರಣರ ವಚನ ಸಾಹಿತ್ಯ ಪ್ರತಿಭಟನೆಯ ರೂಪವಾಗಿದೆ. ವಚನಗಳು ಬದುಕಿನ ಶೋಧ ಮಾಡುತ್ತವೆ ಎಂದರು.

ಕವಿಗೋಷ್ಠಿ ಆಶಯ ನುಡಿ ಆಡಿ ಪ್ರೊ.ಬಸವರಾಜ ಜಾಲವಾದಿ ಮಾತನಾಡಿ, 21ನೇ ಶತಮಾನದಲ್ಲಿ ಬಸವಣ್ಣನ ಅರ್ಥಶಾಸ್ತ್ರವನ್ನು ನಾವೆಲ್ಲ ಅಪ್ಪಿಕೊಳ್ಳಬೇಕು, ಒಪ್ಪಿಕೊಳ್ಳಬೇಕು ಕಾಯಕ ಮಾಡಿದ ಸಂಪಾದನೆಯನ್ನು ಸಮಾಜಕ್ಕೆ ಸದುಪಯೋಗಪಡಿಸಬೇಕು ಎಂದ ಅವರು, ಬಸವಾದಿ ಶರಣರ ತತ್ವ ಎಲ್ಲರು ಅಳವಡಿಸಿಕೊಳ್ಳಬೇಕು ಎಂದರು.


ಕಾರ್ಯಕ್ರಮ ಸಂಯೋಜಕ ಶಂಕರ ಬೈಚಬಾಳ ಮಾತನಾಡಿ, ಕನ್ನಡದ ಕವಿಗಳ ಸಂದೇಶ ಬೇರೆ ಭಾಷೆಗೆ ತಲುಪಿಸುವ ಉದ್ದೇಶದಿಂದ ಬಹುಭಾಷಾ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದರು.

ಕವಿಗೋಷ್ಠಿಯಲ್ಲಿ ಕನ್ನಡದಲ್ಲಿ ಕಲಾವತಿ ಬೈಚಬಾಳ, ಬಸರಾಜ ಗವಿಮಠ, ಶೇಷರಾವ ಮಾನೆ, ಪರಶುರಾಮ ಶಿವಶರಣ, ಶಿವಪುತ್ರ ಅಜಮನಿ, ಕೆ.ಎಸ್.ಬಾಗೇವಾಡಿ, ಇಂಗ್ಲಿಷ್‌ನಲ್ಲಿ ಬಸಮ್ಮ ಬಾಗೋಜಿ, ಅನು ಮುಲ್ಲಾ, ಎಸ್.ಬಿ.ಕಮತಿ, ಹಿಂದಿಯಲ್ಲಿ ಶಿವಣ್ಣ ಹದಿಮೂರ, ಸಂಸ್ಕೃತದಲ್ಲಿ ಗೀತಾ ಸನದಿ, ಕೊಂಕಣಿಯಲ್ಲಿ ಪ್ರಶಾಂತ ದೈವಜ್ಞ, ತೆಲಗುದಲ್ಲಿ ಡಿ.ಜೋಸೆಫ್, ಉರ್ದುದಲ್ಲಿ ಎಂ.ಎ.ಕಲಾಸಿ, ಡಾ.ಅಮೀರುದ್ದೀನ್‌ ಖಾಜಿ, ಲಂಬಾಣಿಯಲ್ಲಿ ವಸಂತ ಚವ್ಹಾಣ ಕವನ ವಾಚಿಸಿದರು.

ವಿದ್ಯಾವತಿ ಅಂಕಲಗಿ, ದಾನಮ್ಮ ಮಹಾಜನ, ಲಕ್ಷ್ಮೀ ಹೊಸಮನಿ, ಸುಭಾಸ್ಚಂದ್ರ ಕನ್ನೂರ, ಘನಶ್ಯಾಮ ತೋಸ್ನಿವಾಲಾ, ಮಹಾದೇವಿ ತೆಲಗಿ, ರಾಜಶೇಖರ ಉಮರಾಣಿ, ದಾನೇಶ ಅವಟಿ, ಪ್ರಭುಗೌಡ ಪಾಟೀಲ, ಕೆ.ಎಫ್.ಅಂಕಲಗಿ, ಮಹಾದೇವಿ ಗೋಕಾಕ, ವ್ಹಿ.ಸಿ.ನಾಗಠಾಣ, ಅಡಿವೆಪ್ಪ ಸಾಲಗಲ್ಲ, ಅನಿಲ ಹೊಸಮನಿ, ಭಾರತಿ ಪಾಟೀಲ, ಶಾಂತವೀರ ಥಾಲಬಾವಡಿ, ಲಾಯಪ್ಪ ಇಂಗಳೆ, ಕಲ್ಲು ಶಿವಶರಣ, ಶರಣು ಕಿರಣಗಿ, ಬಸನಗೌಡ ಹರನಾಳ, ವ್ಹಿ.ಡಿ.ಐಹೊಳ್ಳಿ, ಜಂಬುನಾಥ ಕಂಚ್ಯಾಣಿ, ಸುಧಾರಾಣಿ ಬಿರಾದಾರ, ಸಂಗೀತಾ ಪೂಜಾರಿ, ಅನುಪ್ರಿಯಾ ಬಿರಾದಾರ, ಶಿವಾನಂದ ಸಾಂಗೋಲಿ, ಚೆನ್ನು ಕಟ್ಟಿಮನಿ, ತಿಪ್ಪಣ್ಣ ದೊಡಮನಿ, ಯಮನಪ್ಪ ಗುಣಕಿ, ಶ್ರೀನಾಥ ಪೂಜಾರಿ, ಸುಭಾಸ ಯಾದವಾಡ ಮುಂತಾದವರು ಪಾಲ್ಗೊಂಡಿದ್ದರು.ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಸಾಮಾಜಿಕ ಕಟ್ಟಳೆಗಳನ್ನು ಮೀರಿ ಬಸವಣ್ಣನ ನೇತೃತ್ವದಲ್ಲಿ ಅನುಭವ ಮಂಟಪದಲ್ಲಿ ರಚನೆಯಾದದ್ದು, ವಚನ ಸಾಹಿತ್ಯ. ಶರಣರು ಮೆಟ್ಟಿದ ಕಲ್ಯಾಣ ನಾಡು ಭೂ ಕೈಲಾಸವಾಗಿತ್ತು. ಜಗತ್ತಿನ ವಿವಿಧ ಭಾಗದ ಜನ ವಚನ ಚಳುವಳಿ ಪ್ರಭಾವಕ್ಕೆ ಒಳಪಟ್ಟು ಕಲ್ಯಾಣಕ್ಕೆ ಬಂದರು, ಕಾವ್ಯ ಏನು ಮಾಡಬಲ್ಲದು ಎಂಬುದಕ್ಕೆ ಉತ್ತರ ವಚನಗಳಲ್ಲಿಯೇ ಇದೆ.-ಡಾ.ಶ್ರೀಶೈಲ ನಾಗರಾಳ, ಹಿರಿಯ ಸಾಹಿತಿ, ಕಲಬುರಗಿ