ಅಸ್ಪೃಶ್ಯತೆ ದೇಶದ ಅಭಿವೃದ್ಧಿಗೆ ಮಾರಕ

| Published : Jan 19 2025, 02:18 AM IST

ಸಾರಾಂಶ

ಕನಕಪುರ: ದೇಶದಲ್ಲಿ ಅಸ್ಪೃಶ್ಯತೆ ಮತ್ತು ಜಾತಿ ವ್ಯವಸ್ಥೆ ಇಂದಿಗೂ ಜೀವಂತವಾಗಿರುವುದು ದೇಶದ ಅಭಿವೃದ್ಧಿಗೆ, ಸಹಬಾಳ್ವೆಗೆ ಕೊಡಲಿ ಪೆಟ್ಟಂತಾಗಿರುವುದು ದುರಂತ ಎಂದು ತಹಸೀಲ್ದಾರ್ ಮಂಜುನಾಥ್ ತಿಳಿಸಿದರು.

ಕನಕಪುರ: ದೇಶದಲ್ಲಿ ಅಸ್ಪೃಶ್ಯತೆ ಮತ್ತು ಜಾತಿ ವ್ಯವಸ್ಥೆ ಇಂದಿಗೂ ಜೀವಂತವಾಗಿರುವುದು ದೇಶದ ಅಭಿವೃದ್ಧಿಗೆ, ಸಹಬಾಳ್ವೆಗೆ ಕೊಡಲಿ ಪೆಟ್ಟಂತಾಗಿರುವುದು ದುರಂತ ಎಂದು ತಹಸೀಲ್ದಾರ್ ಮಂಜುನಾಥ್ ತಿಳಿಸಿದರು.

ತಾಲೂಕು ಕಸಬಾ ಕೂನೂರು ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ದಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್‌ ಆಯೋಜಿಸಿದ್ದ ಸಮಾಜದಲ್ಲಿನ ಅಸ್ಪೃಶ್ಯತೆ ನಿವಾರಣೆ ಬಗ್ಗೆ ಬೀದಿ ನಾಟಕಗಳಿಂದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿಗೂ ಸಮಾಜದಲ್ಲಿ ಮೇಲು-ಕೀಳು ಎಂಬ ಜಾತಿಗಳ ಸಂಘರ್ಷದಿಂದ ಜಾಗತಿಕ ಮಟ್ಟದಲ್ಲಿ ಭಾರತ ದೇಶ ಮುಜುಗರ ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಾಜದ ಎಲ್ಲಾ ವರ್ಗದ ಜನರು ಸಹಬಾಳ್ವೆಯಿಂದ ಬದುಕುವುದನ್ನು ರೂಢಿಸಿಕೊಳ್ಳುವಂತೆ ತಿಳಿಸಿದರು.

ಸಮಾಜ ಕಲ್ಯಾಣ ಅಧಿಕಾರಿ ಜಯಪ್ರಕಾಶ್ ಮಾತನಾಡಿ, ಅಸ್ಪೃಶ್ಯತೆ ಆಚರಣೆಗೆ ಅನೇಕ ಮುಖಗಳಿದ್ದು ಇದನ್ನು ಆಚರಿಸುವಾಗ ಕೆಲವರು ಜಾತಿ ನಿಂದನೆ ಮಾಡಿದರೆ, ಕೆಲವರು ಜಮೀನುಗಳ ವ್ಯವಹಾರದಲ್ಲಿ ದೌರ್ಜನ್ಯ ಎಸಗುತ್ತಿದ್ದಾರೆ. ಕೆಲವು ಘಟನೆಗಳಲ್ಲಿ ಗ್ರಾಮಗಳಿಂದಲೇ ಬಹಿಷ್ಕಾರ ಹಾಕುವುದು, ಸಾರ್ವಜನಿಕರು ಓಡಾಡುವ ರಸ್ತೆ ಮುಚ್ಚುವುದು, ಸಾರ್ವಜನಿಕ ದೇವಾಲಯಗಳಿಗೆ ಸೇರಿಸದಿರುವುದು, ಸಾರ್ವಜನಿಕ ಸ್ಥಳಗಳಲ್ಲಿ ದಲಿತರ ಪ್ರವೇಶ ನಿಷೇಧಿಸುವುದು ಅಸ್ಪೃಶ್ಯತೆಯ ಸ್ವರೂಪವಾಗಿದ್ದು ಇದನ್ನು ತಡೆಗಟ್ಟಲು ಸಮಾಜದ ಎಲ್ಲಾ ವರ್ಗದವರೂ ಮುಂದಾಗಬೇಕಾಗಿದೆ. ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ ಅಸ್ಪೃಶ್ಯತೆ ಆಚರಣೆಯಲ್ಲಿದೆ. ಸಮಾಜದಲ್ಲಿ ಮಾನವೀಯತೆ ಹಾಗೂ ಅನುಕಂಪದಲ್ಲಿ ಮನುಷ್ಯರೆಲ್ಲರೂ ಜೀವಿಸುವುದರಿಂದ ಅಸ್ಪೃಶ್ಯತೆ ಆಚರಣೆ, ಜಾತಿ ಪದ್ಧತಿಯನ್ನ ನಿಷೇಧಿಸುವಂತೆ ಕರೆ ನೀಡಿದರು.

ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ದೇಶ ಮಡಿ ಮೈಲಿಗೆ, ಮೇಲು ಕೀಳು, ಜಾತಿ ವಿಜಾತಿ ಎಂಬ ಕೂಪದಲ್ಲಿ ವಿಲಿವಿಲಿ ಒದ್ದಾಡುತ್ತಿದೆ. ಇಲ್ಲಿ ಎಲ್ಲರೂ ಒಂದು ರೀತಿಯಲ್ಲಿ ಮುಟ್ಟಿಸಿಕೊಳ್ಳಬಾರದವರಾಗಿಯೇ ಜೀವಿಸುತ್ತಿರುವುದು ಭಾರತ ದೇಶಕ್ಕಂಟಿದ ದೊಡ್ಡ ಶಾಪವಾಗಿದೆ. ಇದಕ್ಕೆ ಅಂತ್ಯ ಕಾಣಿಸದಿದ್ದರೆ ನಮ್ಮ ದೇಶಕ್ಕೆ ಭವಿಷ್ಯವಿಲ್ಲ. ಇದನ್ನು ಕೊನೆಗಾಣಿಸುವುದು ಕಾನೂನಿನಿಂದ ಮಾತ್ರ ಸಾಧ್ಯವಿಲ್ಲ, ಎಲ್ಲಾ ಸಮುದಾಯದ ಸಹಭಾಗಿತ್ವವು ಬಹಳ ಮುಖ್ಯ. ಅಧಿಕಾರಿ ವರ್ಗದವರು, ಆಧ್ಯಾತ್ಮಿಕ ಜಗತ್ತಿನ ಸ್ವಾಮೀಜಿಗಳು, ವಿದ್ಯಾರ್ಥಿಗಳು, ಯುವ ಸಮೂಹ, ರಾಜಕಾರಣಿಗಳು, ಸಾರ್ವಜನಿಕರು ಎಲ್ಲರೂ ತಮ್ಮ ತಮ್ಮ ಹೊಣೆಗಾರಿಕೆಯನ್ನು ಅರಿತು ಅಸ್ಪೃಶ್ಯತೆ ನಿವಾರಣೆಯಲ್ಲಿ ನನ್ನ ಪಾತ್ರ ಏನು ಎಂಬುದನ್ನು ಮನಗಂಡಾಗ ಮಾತ್ರವೇ ದೇಶ ಪ್ರಗತಿ ಸಾಧಿಸಲು ಸಾಧ್ಯ ಎಂದು ಸಲಹೆ ನೀಡಿದರು.

ಇದೇ ವೇಳೆ ಮುತ್ತುರಾಜು ಮತ್ತು ತಂಡದವರು ಅಸ್ಪೃಶ್ಯತೆ ಆಚರಣೆ ಬಗ್ಗೆ ಬೀದಿ ನಾಟಕದ ಮೂಲಕ ಅರಿವು ಮೂಡಿಸಿದರು. ಕನಕಪುರ ಗ್ರಾಮಾಂತರ ಆರಕ್ಷಕ ಠಾಣೆ ಉಪ ನಿರೀಕ್ಷಕ ಮನೋಹರ್, ಆರಕ್ಷಕ ನಿರೀಕ್ಷಕ ರುದ್ರಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹಾಂತೇಶ್, ಉಪ ತಹಸೀಲ್ದಾರ್ ಪ್ರವೀಣ್, ಗ್ರಾಮದ ಮುಖಂಡರಾದ ರಾಮು, ಶ್ರೀನಿವಾಸ್, ಮುನಿಯಪ್ಪ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 01:

ಅಸ್ಪೃಶ್ಯತೆ ಆಚರಣೆ ವಿರುದ್ಧ ಬೀದಿ ನಾಟಕದ ಮೂಲಕ ಅರಿವು ಮೂಡಿಸಲಾಯಿತು.