ಅಸ್ಪೃಶ್ಯರಿಂದ ಅಧಿಕಾರ, ಒಡೆತನ, ಸವಲತ್ತು ಕಸಿಯಲಾಗಿದೆ: ಪ್ರಾಧ್ಯಾಪಕ ಬಿ.ಎಲ್.ರಾಜು

| Published : Sep 28 2024, 01:26 AM IST

ಸಾರಾಂಶ

ಅಸ್ಪೃಶ್ಯ ಸಮುದಾಯಗಳಿಗೆ ಆಸರೆಯಾಗಿ ನಿಂತವರೇ ಡಾ.ಬಿ.ಆರ್.ಅಂಬೇಡ್ಕರ್. ಅವರು ಇಲ್ಲದಿದ್ದರೆ ಇಂದಿನ ಲಿಂಗಾಯತ ಸಮುದಾಯಂತಹ ಬಲಾಢ್ಯ ಜಾತಿಗಳನ್ನೂ ಒಳಗೊಂಡಂತೆ ಎಲ್ಲರೂ ಜಾತಿಯ ಅವಹೇಳನಕ್ಕೆ ಗುರಿಯಾಗಬೇಕಾಗಿತ್ತು ಎಂದು ಪ್ರಾಧ್ಯಾಪಕ ಬಿ.ಎಲ್.ರಾಜು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಭಾರತದ ಸುಮಾರು 40 ಕೋಟಿ ಜನರು ಸಾಮಾಜಿಕ ಅಸಮಾನತೆಯಿಂದ ಇಂದಿಗೂ ಬದುಕುತ್ತಿದ್ದಾರೆ. ಅಧಿಕಾರ, ಒಡೆತನ, ಸವಲತ್ತು ಹೀಗೆ ಎಲ್ಲವನ್ನೂ ಅಸ್ಪೃಶ್ಯ ಸಮುದಾಯಗಳಿಂದ ಕಿತ್ತುಕೊಳ್ಳಲಾಗಿದೆ ಎಂದು ಪ್ರಾಧ್ಯಾಪಕ ಬಿ.ಎಲ್.ರಾಜು ಹೇಳಿದರು.

ಇಲ್ಲಿನ ಅಂಬೇಡ್ಕರ್‌ ಭವನದಲ್ಲಿ ಗುರುವಾರ ಕರ್ನಾಟಕ ಪರಿಶಿಷ್ಟ ಜಾತಿಗಳ ಮೀಸಲಾತಿ ಹಿತರಕ್ಷಣಾ ಒಕ್ಕೂಟ ಮತ್ತು ವಿವಿಧ ಸಮುದಾಯಗಳ ಸಹಯೋಗದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಭವನದಲ್ಲಿ ಪರಿಶಿಷ್ಟ ಜಾತಿಗಳ ಮೀಸಲಾತಿ ಒಳ ವರ್ಗೀ ಕರಣ ಕುರಿತ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ಬಸವಣ್ಣನವರು ನಮ್ಮ ಸಮುದಾಯಕ್ಕೊಂದು ಘನತೆ ತಂದುಕೊಟ್ಟರು. ಅದರ ನಂತರ ಮತ್ತೆ ನಮ್ಮನ್ನು ಹಿಂದಕ್ಕೆ ಕಳುಹಿಸಲಾಯಿತು. ಅಸ್ಪೃಶ್ಯ ಸಮುದಾಯಗಳಿಗೆ ಆಸರೆಯಾಗಿ ನಿಂತವರೇ ಡಾ.ಬಿ.ಆರ್.ಅಂಬೇಡ್ಕರ್. ಅವರು ಇಲ್ಲದಿದ್ದರೆ ಇಂದಿನ ಲಿಂಗಾಯತ ಸಮುದಾಯಂತಹ ಬಲಾಢ್ಯ ಜಾತಿಗಳನ್ನೂ ಒಳಗೊಂಡಂತೆ ಎಲ್ಲರೂ ಜಾತಿಯ ಅವಹೇಳನಕ್ಕೆ ಗುರಿಯಾಗಬೇಕಾಗಿತ್ತು. ಆದರೆ, ಅಂಬೇಡ್ಕರ್ ಅವರು ಸಮಾನತೆಯನ್ನು ತಂದುಕೊಟ್ಟಿದ್ದಾರೆ, ಈ ಸಾಮಾಜಿಕ ಸಮಾನತೆ ಈ ನೆಲದ ತತ್ವವಾಗಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಂಗ್ರೆಸ್ ಮುಖಂಡ ಡಾ.ಶ್ರೀನಿವಾಸ್ ಕರಿಯಣ್ಣ ಮಾತನಾಡಿ, ಏಕೀಕೃತ ಹೋರಾಟದ ಮೂಲಕ ನಮ್ಮ ಸೌಲತ್ತುಗಳನ್ನು ಪಡೆಯ ಬೇಕಾಗಿದೆ ಎಂದು ಹೇಳಿದರು.

ಸಮಾಜ ಕಟ್ಟಲು ಒಗ್ಗಟ್ಟಿನ ಕೊರತೆ ಇದೆ. ಶೋಷಿತ ಸಮುದಾಯ ಇದನ್ನು ಅರ್ಥ ಮಾಡಿಕೊಳ್ಳಬೇಕು. ಒಳ ಮೀಸಲಾತಿ ಪಡೆಯಲು ನಮಗೀಗ ಉತ್ತಮ ಅವಕಾಶ ಸಿಕ್ಕಿದೆ. ಸುಪ್ರೀಂ ಕೋರ್ಟ್ ತೀರ್ಪು ನಮಗೆ ಅನುಕೂಲವಾಗಿದೆ. ನಮ್ಮ ಹಕ್ಕು ಗಳನ್ನು ಪಡೆಯಲು ಹಲವಾರು ವರ್ಷಗಳ ಕಾಲ ನಾವು ಹೋರಾಟ ಮಾಡುತ್ತಾ ಬಂದಿದ್ದೇವೆ. ಯಾವ ಸರ್ಕಾರಗಳೇ ಆಗಲಿ, ನ್ಯಾಯಾಲಯದ ಆದೇಶದಂತೆ ಮೀಸಲಾತಿ ವರ್ಗೀಕರಣ ಮಾಡುವ ಮೂಲಕ ಸಮಾನತೆಗೆ ಅವಕಾಶ ಕೊಡಬೇಕು ಎಂದರು.

ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಕರ್ನಾಟಕ ಪರಿಶಿಷ್ಟ ಜಾತಿಗಳ ಮೀಸಲಾತಿ ಹಿತರಕ್ಷಣಾ ಒಕ್ಕೂಟದ ಅಧ್ಯಕ್ಷ ಬಿ.ಡಿ. ಸಾವಕ್ಕನವರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಅಣ್ಣಪ್ಪ, ಕೆ.ಎನ್. ಅಶೋಕ್ ಕುಮಾರ್, ಚಾವಡೆ ಲೋಕೇಶ್, ವೈ.ಹೆಚ್. ನಾಗರಾಜ್, ನಿರಂಜನಮೂರ್ತಿ, ಪ್ರೊ. ರಾಚಪ್ಪ, ಬಿ.ಆರ್. ಪುರುಷೋತ್ತಮ್, ಭಾನುಪ್ರಸಾದ್, ಸಿ. ಮೂರ್ತಿ, ಡಿಎಸ್‌ಎಸ್ ಹಾಲೇಶಪ್ಪ, ಸುಬ್ರಮಣ್ಯಂ, ಎ.ಡಿ. ಆನಂದ್, ಎನ್.ಬಿ. ಕಾಳೆ, ಸೇರಿದಂತೆ ಹಲವರಿದ್ದರು.

ಬುದ್ಧನ ತತ್ವ ಒಪ್ಪಿದವರೂ ಅಸ್ಪೃಶ್ಯರಾಗೇ ಉಳಿದರು!

ಮುಟ್ಟಿಸಿಕೊಳ್ಳದವರ ಇತಿಹಾಸ ಅತ್ಯಂತ ಶೋಚನೀಯವಾಗಿದೆ. ಶತಮಾನಗಳ ನೋವು ಇದೆ. ಈ ದೇಶದಲ್ಲಿ ಮೊದಲು ಇದ್ದುದು ಬೌದ್ಧ ಧರ್ಮ. ಬೌದ್ಧ ಧರ್ಮದಲ್ಲಿ ಎಲ್ಲಾ ಸಮಾನತೆಯೂ ಇತ್ತು. ಆದರೆ ಸಾಮ್ರಾಟ ಅಶೋಕನ ನಂತರ ಬೌದ್ಧ ಧರ್ಮವನ್ನೇ ಆಚೆಗೆ ಕಳಿಸಲಾಯಿತು. ಬುದ್ಧನ ತತ್ವವನ್ನು ಒಪ್ಪಿದವರೂ ಅಸ್ಪೃಶ್ಯರಾಗಿಯೇ ಉಳಿದಿದ್ದು ಇತಿಹಾಸ ಎಂದರು.