ಸಾರಾಂಶ
ಕವಿ ಚಕ್ರವರ್ತಿ ರನ್ನ ವೈಭವದ ಎರಡನೇ ದಿನವಾದ ಭಾನುವಾರ ಬೆಳಗ್ಗೆ 11 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಜಾನಪದ ಕಲಾ ವಾಹಿನಿ ಮೆರವಣಿಗೆಗೆ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕವಿ ಚಕ್ರವರ್ತಿ ರನ್ನ ವೈಭವದ ಎರಡನೇ ದಿನವಾದ ಭಾನುವಾರ ಬೆಳಗ್ಗೆ 11 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಜಾನಪದ ಕಲಾ ವಾಹಿನಿ ಮೆರವಣಿಗೆಗೆ ಚಾಲನೆ ನೀಡಿದರು.ಗ್ರಾಮೀಣ ಸೊಗಡಿನ ಜಾನಪದ ಕಲಾ ತಂಡಗಳ ಮೆರವಣಿಗೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾಗಿ ಜಡಗಣ್ಣ-ಬಾಲಣ್ಣ ವೃತ್ತದ ಮೂಲಕ ಸಾಗಿ ಕವಿ ಚಕ್ರವರ್ತಿ ರನ್ನ ಕ್ರೀಡಾಂಗಣದ ವೇದಿಕೆಯನ್ನು ತಲುಪಿತು. ನೂರಾರು ಮಹಿಳೆಯರು ಕುಂಭ ಮತ್ತು ಆರತಿಯೊಂದಿಗೆ ಪಾಲ್ಗೊಂಡರು.
ರನ್ನ ರಥಗಳು, ಆನೆ, ಕುದುರೆಗಳು ಮೆರವಣಿಗೆಗೆ ಮೆರಗು ನೀಡಿದವು. ಹಲಗೆ ವಾದ್ಯ, ಕರಡಿ ಮಜಲು, ಡೊಳ್ಳು ಕುಣಿತ, ತಾಸೆ ವಾದನ, ಜಾನಪದ ಕೋಲಾಟ, ಶಹನಾಯಿ, ಕಣಿ, ಸಂಬಾಳ ವಾದನ, ಝಾಂಜ್ ಮೇಳ, ಕಲಾಟ ವಾದ್ಯ, ಪುರವಂತಿಕೆ, ಗೊಂಬೆಗಳ ಕುಣಿತ, ಲಂಬಾಣಿ ವೇಷ ಭೂಷಣ, ವೀರಗಾಸೆ, ದುರ್ಗಮರಗಿ, ಹನುಮಂತ ಮತ್ತು ಹಕ್ಕಿ ಪಕ್ಷಿಗಳ ವೇಷಧಾರಿಗಳು ಗಮನ ಸೆಳೆದರು. ಗದಾಯುದ್ಧ ಚಿತ್ರಗಳ ಗತವೈಭವವನ್ನು ಕಲಾವಿದರು ಸಾಕ್ಷೀಕರಿಸಿದರು.ಹಬ್ಬದ ಸಡಗರ:ಮೆರವಣಿಗೆಯುದ್ದಕ್ಕೂ ನೂರಾರು ಕಲಾವಿದರು ತಮ್ಮ ಕಲೆ ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದರು. ಸಾರ್ವಜನಿಕರು ತಮ್ಮ ಮನೆ ಹಾಗೂ ಅಂಗಡಿ ಮುಂಗಟ್ಟುಗಳ ಮುಂದೆ ನೀರು ಹಾಕಿ, ರಂಗೋಲಿ ಚಿತ್ತಾರ ಬಿಡಿಸಿ ಮೆರವಣಿಗೆಗೆ ಸ್ವಾಗತ ಕೋರಿದರು. ರಸ್ತೆಯುದ್ದಕ್ಕೂ ಜನರು ನಿಂತು ಮೆರವಣಿಗೆ ಕಣ್ತುಂಬಿಸಿಕೊಂಡರು.
ಹೆದ್ದಾರಿಯಲ್ಲಿ ಬೀದಿದೀಪದ ಕಂಬಗಳಿಗೆ ಹಳದಿ ಕೆಂಪು ಬಟ್ಟೆಯಿಂದ ಅಲಂಕರಿಸಲಾಗಿತ್ತು. ಸ್ವಾಗತ ಕಮಾನು ನಿರ್ಮಿಸಲಾಗಿತ್ತು. ಜಿಲ್ಲಾಡಳಿತ, ಕನ್ನಡ ಸಂಸ್ಕೃತಿ ಇಲಾಖೆ ಮತ್ತು ರನ್ನ ಪ್ರತಿಷ್ಠಾನ ಸದಸ್ಯರು ಯಶಸ್ವಿಗೊಳಿಸಲು ಶ್ರಮಿಸಿದರು.